ADVERTISEMENT

ಭಟ್ಕಳದಲ್ಲಿ 28 ಸಕ್ರಿಯ ಪ್ರಕರಣಗಳು: ಕಂಟೈನ್‌ಮೆಂಟ್ ವಲಯದಲ್ಲೇ ಹರಡಿದ ಕೊರೊನಾ

ಮತ್ತೆ ಏಳು ಮಂದಿಗೆ ಕೋವಿಡ್ 19 ದೃಢ

​ಪ್ರಜಾವಾಣಿ ವಾರ್ತೆ
Published 10 ಮೇ 2020, 11:23 IST
Last Updated 10 ಮೇ 2020, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19ನ ಹಾಟ್‌ಸ್ಪಾಟ್ ಆಗಿರುವ ಭಟ್ಕಳದಲ್ಲಿ ಭಾನುವಾರ ಮತ್ತೆ ಏಳು ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 28ಕ್ಕೇರಿದೆ.

ಹೊಸದಾಗಿ ದೃಢಪಟ್ಟಿರುವವರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. 15 ಮತ್ತು 16 ವರ್ಷದ ಇಬ್ಬರು ಬಾಲಕರಿಗೂ ಸೋಂಕು ತಗುಲಿದೆ.ಈಎಲ್ಲರೂ ಮೇ 5ರಂದು ಕೋವಿಡ್ 19 ದೃಢಪಟ್ಟ 18 ವರ್ಷದ ಯುವತಿಯ (ರೋಗಿ ಸಂಖ್ಯೆ 659) ದ್ವಿತೀಯ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ.

ಸೋಂಕು ತಗುಲಿದವರ ಸಂಖ್ಯೆ ಜಿಲ್ಲೆಯಲ್ಲಿ ಈಗ 39ಕ್ಕೆ ಏರಿಕೆಯಾಗಿದ್ದು, 11 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಭಟ್ಕಳದಲ್ಲಿ ಏ.14ರಿಂದ ಮೇ 5ರವರೆಗೆ ಒಂದೂ ಪ್ರಕರಣ ವರದಿಯಾಗಿರಲಿಲ್ಲ. 20 ದಿನಗಳ ಅವಧಿಯಲ್ಲಿ ಜಿಲ್ಲೆಯ ಕೆಂಪುವಲಯದಿಂದ ಕಿತ್ತಳೆ ವಲಯಕ್ಕೆ ಸಾಗಿ ಹಸಿರು ವಲಯದತ್ತ ಸಾಗಿತ್ತು. ಆದರೆ, ಕಳೆದ ಮೂರು ದಿನಗಳ ಅವಧಿಯಲ್ಲಿ ಚಿತ್ರಣ ಬದಲಾಗಿದ್ದು, ಒಟ್ಟು27 ಜನರಿಗೆ ಕೋವಿಡ್ 19 ಖಚಿತವಾಗಿವೆ.

ADVERTISEMENT

ಸೋಂಕಿತರೆಲ್ಲರಿಗೂ ಕಾರವಾರದ ವೈದ್ಯಕೀಯ ಕಾಲೇಜಿನ ಕೊರೊನಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಎಲ್ಲ ಪ್ರಕರಣಗಳೂ ಕಂಟೈನ್‌ಮೆಂಟ್ ವಲಯವಾಗಿರುವ ಭಟ್ಕಳದಲ್ಲೇ ವರದಿಯಾಗಿರುವುದು ಜಿಲ್ಲೆಯ ಇತರ ಭಾಗಗಳ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಆದರೆ,ಈಗಾಗಲೇ ಸೋಂಕಿತರಿಂದ ದ್ವಿತೀಯ ಸಂಪರ್ಕಕ್ಕೆ ಒಳಗಾದ ಮತ್ತಷ್ಟು ಜನರಿಗೆ ಸೋಂಕು ದೃಢಪಡುವ ಸಾಧ್ಯತೆಯಿದೆ ಎಂಬ ಆತಂಕ ಸ್ಥಳೀಯರದ್ದಾಗಿದೆ.

ಭಟ್ಕಳದಲ್ಲಿ ಲಾಕ್‌ಡೌನ್‌ನ ಎಲ್ಲ ಸಡಿಲಿಕೆಗಳನ್ನು ಈಗಾಗಲೇ ಹಿಂಪಡೆಯಲಾಗಿದ್ದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ. ಮದೀನಾ ಕಾಲೊನಿ ಸೇರಿದಂತೆ ಬಹುತೇಕ ಬಡಾವಣೆಗಳ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಮೆಡಿಕಲ್ ಸೇರಿದಂತೆ ಎಲ್ಲ ಅಂಗಡಿ, ಮಳಿಗೆಗಳನ್ನೂ ಮುಚ್ಚಲಾಗಿದೆ.

ಆಟೊ ಚಾಲಕ ಭೇಟಿ:ಏಳು ಮಂದಿಯ ಪೈಕಿ ಒಬ್ಬರು ಆಟೊ ಚಾಲಕರಿಗೂ ಸೋಂಕು ದೃಢಪಟ್ಟಿದೆ. ಆದರೆ, ಅವರು ಎಲ್ಲಿಗೂ ಆಟೊ ಚಲಾಯಿಸಿರಲಿಲ್ಲ. ಸೋಂಕಿತೆ ಯುವತಿಯ (ರೋಗಿ ಸಂಖ್ಯೆ 659) ಮನೆಗೆ ಅವರು ಭೇಟಿ ನೀಡಿದ್ದರು ಎಂದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಆಟೊ ಚಾಲಕ ಕರ್ಫ್ಯೂ ಮಾದರಿಯ ನಿರ್ಬಂಧಗಳಿದ್ದ ಕಾರಣ ಎಲ್ಲಿಗೂ ಹೋಗಿರಲಿಲ್ಲ. ಸೋಂಕಿತರ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಸೋಂಕು ಇಷ್ಟೊಂದು ವೇಗವಾಗಿ ಹರಡಲು ಅವರ ಜೀವನ ಶೈಲಿ ಕಾರಣವಿರಬಹುದು. ರೋಗ ನಿರೋಧಕ ಶಕ್ತಿಯೂ ಅವರಲ್ಲಿ ಕಡಿಮೆ ಇರಬಹುದು’ ಎಂದು ಊಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.