ಕಾರವಾರ: ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ನಿರ್ಮಿಸಲು ತಾಲ್ಲೂಕಿನ ಸಾವರಪೈ ಗ್ರಾಮದಲ್ಲಿ ನೀಡಿದ್ದ 11.34 ಎಕರೆ ಭೂಮಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಂಕೋಲಾ ತಾಲ್ಲೂಕಿನ ಬೊಬ್ರುವಾಡ ಗ್ರಾಮದಲ್ಲಿ 15 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿದೆ.
‘ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವರಪೈನಲ್ಲಿ ಗುರುತಿಸಿದ್ದ ಜಾಗ ಪಾರಂಪರಿಕ ಭೂಮಿ (ಗೋಮಾಳ ಜಾಗ), ಅಲ್ಲದೇ ಇದು ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತವಿಲ್ಲ’ ಎಂಬ ಕಾರಣ ನೀಡಿ ಕೆಎಸ್‌ಸಿಎ 30 ವರ್ಷದ ಅವಧಿಗೆ ಲೀಸ್‌ಗೆ ನೀಡಿದ್ದ ಜಾಗವನ್ನು 2024ರ ನ.4 ರಂದು ತಿರಸ್ಕರಿಸಿತ್ತು.
ಪರ್ಯಾಯ ಭೂಮಿಗೆ ಹುಡುಕಾಟ ನಡೆಸಿದ್ದ ಜಿಲ್ಲಾಡಳಿತವು ಅಂಕೋಲಾದ ಬೊಬ್ರುವಾಡ ಗ್ರಾಮದ ಸರ್ವೆ ನಂ.147ರಲ್ಲಿನ 15 ಎಕರೆ ಪ್ರದೇಶವನ್ನು ಗುರುತಿಸಿದೆ. ಆದರೆ, ಇದು ಕೂಡ ಗೋಮಾಳ ಆಗಿದೆ. ಈ ಜಾಗವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಈಚೆಗಷ್ಟೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ್ದರು.
‘ಸಾವರಪೈ ಗ್ರಾಮದ ಸರ್ವೆ ನಂ.1144ರಲ್ಲಿನ ಜಾಗವನ್ನು ಗೋಮಾಳ ಎಂಬ ಕಾರಣಕ್ಕಾಗಿಯೇ ಕೆಎಸ್‌ಸಿಎ ತಿರಸ್ಕರಿಸಿದೆ. ಈಗ ಗುರುತಿಸಿದ ಜಾಗವೂ ಗೋಮಾಳ ಆಗಿದೆ. ಕುಮಟಾದಲ್ಲಿ ಕೂಡ ಜಾಗಕ್ಕೆ ಹುಡುಕಾಟ ನಡೆದಿತ್ತು. ಆದರೆ, ಸೂಕ್ತ ಸ್ಥಳ ಸಿಕ್ಕಿಲ್ಲ. ಸದ್ಯ ಅಂಕೋಲಾದ ಜಾಗ ಮಾತ್ರ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಎಂದು ಗುರುತಿಸಲಾಗಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
2018ರ ಡಿ.28 ರಂದು ಸಾವರಪೈ ಗ್ರಾಮದಲ್ಲಿನ ಜಾಗವನ್ನು ಕೆಎಸ್‍ಸಿಎ ಹೆಸರಿಗೆ ವಾರ್ಷಿಕ ₹59,250 ಮೊತ್ತ ಪಾವತಿ ಆಧಾರದಲ್ಲಿ ಲೀಸ್‍ಗೆ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿತ್ತು. 2020 ರಿಂದ 2024ರವರೆಗೂ ಲೀಸ್ ಮೊತ್ತವನ್ನು ಪಾವತಿಸುತ್ತ ಬಂದಿದ್ದ ಕೆಎಸ್‍ಸಿಎ 2024ರ ಫೆ.29 ರಂದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಜಿಲ್ಲಾಡಳಿತದೊಂದಿಗೆ ಅಧಿಕೃತ ಒಡಂಬಡಿಕೆ ಮಾಡಿಕೊಂಡಿತ್ತು. 8 ತಿಂಗಳ ಬಳಿಕ ಜಾಗ ತಿರಸ್ಕರಿಸಿತ್ತು.
ಕ್ರೀಡಾಂಗಣ ನಿರ್ಮಾಣವೇ ಗುರಿ
‘ಕಾರವಾರದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ಸ್ಥಾಪಿಸಲು 10 ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದೇನೆ. 2018ರಲ್ಲಿ ಕಾಳಿ ನದಿ ಸಂಗಮ ಪ್ರದೇಶದ ಸಮೀಪ ಪ್ರಾಕೃತಿಕ ಸೊಬಗಿನ ಸ್ಥಳವನ್ನು ಗುರುತಿಸಿ ಕೆಎಸ್‌ಸಿಎಗೆ ಲೀಸ್‌ಗೆ ನೀಡಲಾಯಿತು. ನಂತರ ಅಧಿಕಾರಕ್ಕೆ ಬಂದ ಶಾಸಕರು ಕ್ರೀಡಾಂಗಣ ನಿರ್ಮಿಸಲು ವಿರೋಧ ವ್ಯಕ್ತಪಡಿಸದರು. ಕೆಲವು ಜನರನ್ನು ಎತ್ತಿ ಕಟ್ಟಿ ವಿರೋಧ ವ್ಯಕ್ತಪಡಿಸುವಂತೆ ಮಾಡಿದರು. ಆದರೆ ಕೆಎಸ್‌ಸಿಎ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರು ತಿರಸ್ಕರಿಸಿದ ನಿರ್ಣಯ ಮರುಪರಿಶೀಲಿಸಲು ಮನವಿ ಮಾಡಿದ್ದೇನೆ. ಕಾರವಾರದಲ್ಲೇ ಕ್ರೀಡಾಂಗಣ ನಿರ್ಮಿಸುವ ಗುರಿ ಸಾಧಿಸುತ್ತೇನೆ’ ಎಂದು ಶಾಸಕ ಸತೀಶ ಸೈಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಅಂಕೋಲಾದಲ್ಲಿ ಕ್ರೀಡಾಂಗಣಕ್ಕೆ ಜಾಗದ ಪ್ರಾಥಮಿಕ ಹಂತದ ಪರಿಶೀಲನೆ ಮಾತ್ರ ನಡೆದಿದೆ. ಕೆಎಸ್‌ಸಿಎ ಅಭಿಪ್ರಾಯ ಪಡೆಯುವುದು ಬಾಕಿ ಇದೆ.–ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಸದ್ಯದಲ್ಲೇ ಕೆಎಸ್‌ಸಿಎ ಆಡಳಿತ ಮಂಡಳಿ ಪ್ರಮುಖರು ಕಾರವಾರಕ್ಕೆ ಭೇಟಿ ನೀಡಲಿದ್ದು ಕ್ರೀಡಾಂಗಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದ ಮರು ಪರಿಶೀಲನೆ ಹೊಸದಾಗಿ ಗುರುತಿಸಿದ ಸ್ಥಳವನ್ನು ವೀಕ್ಷಿಸಲಿದ್ದಾರೆ–ಸತೀಶ ಸೈಲ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.