
ಕಾರವಾರ: ‘ಅಂತರ್ಜಾಲ ಬಳಕೆ ಹೆಚ್ಚಾದಂತೆ ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ. ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಕ್ಕೆ ಕಡಿವಾಣ ಬೀಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಆನ್‌ಲೈನ್ ಮೂಲಕ ಹೂಡಿಕೆ ಮಾಡುವುದು, ಅವಶ್ಯಕವಲ್ಲದ ಲಿಂಕ್‌ಗಳನ್ನು ತೆರೆಯುವ ಮೂಲಕ ವಂಚನೆಗಳಿಗೆ ಒಳಗಾಗುತ್ತಿದ್ದು, ಇವುಗಳನ್ನು ತಡೆಯಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನು ಎಚ್ಚರಿಕೆಯಿಂದ ಬಳಸಬೇಕು’ ಎಂದರು.
ಸೈಬರ್ ಅಪರಾಧ ವಿಭಾಗದ ಅಧಿಕಾರಿ ಸುದರ್ಶನ ಮಾತನಾಡಿ, ‘ಆನ್‌ಲೈನ್ ಹೂಡಿಕೆ, ಆಕರ್ಷಕ ಜಾಹೀರಾತುಗಳು ಸೇರಿದಂತೆ ಅನೇಕ ವಂಚನೆಗಳಿಗೆ ಒಳಗಾಗುವ ಯುವ ಜನತೆಗೆ ಪ್ರಾಥಮಿಕ ಮಾಹಿತಿ ಇಲ್ಲದೇ ಇರುವದೇ ಇದಕ್ಕೆ ಕಾರಣವಾಗಿದೆ. ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಗೆ ಬರುವ ಅನವಶ್ಯಕ ಲಿಂಕ್ ಒತ್ತುವ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ನೀಡುವುದರಿಂದ ವಂಚನೆಗಳು ಹೆಚ್ಚಾಗುತ್ತಿವೆ. ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು’ ಎಂದರು.
ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಸಾಗರ, ‘ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಯಾದಲ್ಲಿ ಉಚಿತ ದೂರವಾಣಿ ಸಂಖ್ಯೆ 1930 ಸಂಪರ್ಕಿಸಬಹುದು’ ಎಂದರು.
ಭೂ ದಾಖಲೆಗಳ ಉಪ ನಿರ್ದೇಶಕ ಸಂದೀಪ ಉಪ್ಪಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.