ದಾಂಡೇಲಿ ಹಳೇ ನಗರಸಭೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಮೈದಾನದಲ್ಲಿ ದಾಂಡಿಯಾ ಪ್ರಿಯರು ನೃತ್ಯ ಮಾಡಿ ಸಂಭ್ರಮಿಸಿದರು
ದಾಂಡೇಲಿ: ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ದಾಂಡಿಯಾ ನೃತ್ಯವು ದಸರಾ ವೈಭವವನ್ನು ಹೆಚ್ಚಿಸಿದೆ. ದಸರಾದ ಮೊದಲ ದಿನದಿಂದಲೇ ಪ್ರಾರಂಭವಾಗುವ ದಾಂಡಿಯಾ ನಿರಂತರವಾಗಿ ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಮಕ್ಕಳು ಹೆಣ್ಣು ಮಕ್ಕಳು ಸೇರಿದಂತೆ ಪುರುಷರು ಈ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.
ದಾಂಡಿಯಾ ನೃತ್ಯಕ್ಕಾಗಿ ವಿಶೇಷ ವೃತ್ತಾಕಾರದ ವೇದಿಕೆಯನ್ನು ಬಣ್ಣ ಬಣ್ಣದ ಅಲಂಕಾರಿಕ ಬಟ್ಟೆ ಹಾಗೂ ವಿದ್ಯುತ್ ದೀಪಗಳಿಂದ ಸಜ್ಜು ಮಾಡಲಾಗುತ್ತದೆ. ವೇದಿಕೆಯ ಮಧ್ಯೆ ಭಾಗದಲ್ಲಿ ದುರ್ಗಾ ದೇವಿ ಚಿತ್ರ ಇಲ್ಲವೇ ಮೂರ್ತಿ ಇಟ್ಟು ಪೂಜಿಸಿ ನಂತರ ದಾಂಡಿಯಾ ನೃತ್ಯಕ್ಕೆ ಚಾಲನೆ ನೀಡಲಾಗುತ್ತದೆ.
ದಾಂಡಿಯಾ ನೃತ್ಯ ದಾಂಡೇಲಿಗೆ ಬಂದಿದ್ದು ಹೇಗೆ: ನಗರದ ಡಿ.ಎಫ್.ಎ ಮತ್ತು ಕಾಗದ ಕಾರ್ಖಾನೆಯ ಆರಂಭವಾದ ನಂತರ ಉತ್ತರ ಭಾರತದಿಂದ ವಲಸೆ ಬಂದ ಜನರು ದಾಂಡೇಲಿಗೆ ದಾಂಡಿಯಾ ನೃತ್ಯವನ್ನು ಪರಿಚಯಿಸಿದರು. ಆದರೆ, ಈಗ ಈ ನೃತ್ಯ ದಾಂಡೇಲಿಯದೆ ಎನ್ನುವಷ್ಟು ಚಿರಪರಿಚಿತವಾಗಿದೆ.
ದುಷ್ಟ ಶಕ್ತಿಯ ವಿರುದ್ಧ ದುರ್ಗಾದೇವಿಯ ವಿಜಯವನ್ನು ಸಂಭ್ರಮಿಸುವ, ದುರ್ಗಾದೇವಿ ಮತ್ತು ಮಹಿಷಾಸುರನ ಯುದ್ಧದ
ದೃಶ್ಯಗಳು ಇಲ್ಲಿ ಸುಂದರಿ ನೃತ್ಯವಾಗಿದೆ. ನೃತ್ಯಕ್ಕೆ ಬಳಸುವ ಅಲಂಕೃತ ಕೋಲುಗಳು ಮಹಿಷಾಸುರನ ಕೋಡುಗಳು, ಅದನ್ನು ಬಳಸುವವರು ದುರ್ಗ ಮತ್ತು ಮಹಿಷಾಸುರನನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿಯೇ ಇದನ್ನು ಯುದ್ಧ ನೃತ್ಯ ಎಂದು ಕರೆಯುತ್ತಾರೆ.
ಮೊದಲು ಮಹಿಳೆಯರೇ ಭಾಗವಹಿಸುತ್ತಿದ್ದರು. ಇತ್ತೀಚೆಗೆ ಪುರುಷರೂ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ. ನೂರಾರು ಮಂದಿ ವೃತ್ತಾಕಾರದಲ್ಲಿ ಹೆಜ್ಜೆ ಹಾಕುವುದನ್ನು ನೋಡಲು ಸಾವಿರಾರು ಜನ ಜಮಾಯಿಸುತ್ತಾರೆ.
‘ಕಳೆದ ನಾಲ್ಕು ವರ್ಷದಲ್ಲಿ ನಗರಸಭೆ ಹಳೇ ಮೈದಾನದಲ್ಲಿ ಶ್ರೀದುರ್ಗಾ ದೇವಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾ
ಗುತ್ತಿದ್ದು, ಇದರೊಂದಿಗೆ ಸಂಜೆ ವೇಳೆಗೆ ದಾಂಡಿಯಾಗೆ ಎಲ್ಲರೂ ಸೇರಿಕೊಂಡು ಹೆಜ್ಜೆ ಹಾಕಿ ದೈವೀಕತೆಯನ್ನು ಮೆರೆದು ಸಂಭ್ರಮಿಸುತ್ತಾರೆ’ ಎಂದು ದುರ್ಗಾ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಸ್.ಬಾಲಮಣಿ ಹೇಳಿದರು.
‘ದಸರಾ ಹಬ್ಬದ ಆಚರಣೆಯು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಏಳಿಗೆಗೆ ಸಾಗಿಸುವುದು, ಮೂಲ ನೆಲೆಯನ್ನು ಹಾಗೂ ನಮ್ಮ ಹಿರಿಯರ ಮಾರ್ಗವನ್ನು ನೆನಪಿಸುತ್ತದೆ. ಈ ನೆಪದಲ್ಲಿ ನಾವು ನಮ್ಮ ಹಿರಿಯರಿಗೆ ಗೌರವ ಸಲ್ಲಿಸುತ್ತೇವೆ’ ಎನ್ನುತ್ತಾರೆ ರಜಪೂತ ಸಮಾಜದ ಪ್ರಮುಖರಾದ ಮೋಹನ ಹಲವಾಯಿ.
‘ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ 25 ಕಡೆ ದಾಂಡಿಯಾ ಸಮಿತಿಗಳು ಈ ನೃತ್ಯ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ದಾಂಡಿಯಾ ಸಮಿತಿಗಳಿಗೆ ಅನುಮತಿ ನೀಡಲಾಗಿದೆ. ಕಟ್ಟುನಿಟ್ಟಾಗಿ ರಾತ್ರಿ 10 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಅತಿಯಾದ ಧ್ವನಿ ವರ್ಧಕ ಬಳಕೆಗೆ ಕಡಿವಾಣ ಹಾಕಲಾಗಿದೆ. ಸೂಕ್ತ ಬಂದೋಬಸ್ತ್‌ಗೆ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ನಗರ ಠಾಣೆ ಪಿಎಸ್ಐ ಕಿರಣ ಪಾಟೀಲ ಮಾಹಿತಿ
ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.