ADVERTISEMENT

ಕಾರವಾರ: ‘ಡಯಾಲಿಸಿಸ್’ ರೋಗಿಗಳ ಸಂಖ್ಯೆ ಏರುಮುಖ

ಸರ್ಕಾರಿ ಆಸ್ಪತ್ರೆಗಳಲ್ಲಿ 70ಕ್ಕೂ ಯಂತ್ರ: ಖಾಸಗಿ ಸಂಸ್ಥೆಯಿಂದ ನಿರ್ವಹಣೆ

ಗಣಪತಿ ಹೆಗಡೆ
Published 22 ಸೆಪ್ಟೆಂಬರ್ 2025, 5:28 IST
Last Updated 22 ಸೆಪ್ಟೆಂಬರ್ 2025, 5:28 IST
ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ವಾರ್ಡ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು 
ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ವಾರ್ಡ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು    

ಕಾರವಾರ: ಕೆಲವೇ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಡಯಾಲಿಸಿಸ್ ಯಂತ್ರಗಳಿದ್ದವು. ಡಯಾಲಿಸಿಸ್‌ಗೆ ಒಳಪಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ, ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಯಂತ್ರಗಳಿದ್ದರೂ ಇನ್ನಷ್ಟು ಯಂತ್ರಗಳಿಗೆ ಬೇಡಿಕೆ ಕಂಡುಬರುತ್ತಿದೆ.

ಬದಲಾದ ಜೀವನ ಪದ್ಧತಿಯಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಪ್ರತಿ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ಒಳಪಡುವವರ ಸಂಖ್ಯೆ 3 ಸಾವಿರಕ್ಕೂ ಅಧಿಕವಿದೆ. ಜಿಲ್ಲಾ ಕೇಂದ್ರದಲ್ಲಿನ ಕ್ರಿಮ್ಸ್ ಸೇರಿದಂತೆ ಜಿಲ್ಲೆಯ 11 ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಡಯಾಲಿಸಿಸ್‌ ಕೇಂದ್ರಗಳ ಸ್ಥಾಪನೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ 70ಕ್ಕೂ ಹೆಚ್ಚು ಡಯಾಲಿಸಿಸ್ ಯಂತ್ರಗಳಿದ್ದು, ಖಾಸಗಿ ಆಸ್ಪತ್ರೆಗಳಲ್ಲಿನ ಸೌಲಭ್ಯವೂ ಸೇರಿದರೆ ಈ ಸಂಖ್ಯೆ 100 ದಾಟುತ್ತದೆ.

‘ಸರ್ಕಾರಿ ಆಸ್ಪತ್ರೆಯಲ್ಲಿನ ಪ್ರತಿ ಕೇಂದ್ರದಲ್ಲಿ ಸರಾಸರಿ 3 ರಿಂದ 6 ಯಂತ್ರಗಳಿವೆ. ಕ್ರಿಮ್ಸ್‌ನಲ್ಲಿ ಎಚ್ಐವಿ, ಎಚ್‌ಸಿವಿ ಪೀಡಿತರಿಗೆ ಡಯಾಲಿಸಿಸ್‌ಗೆ ಪ್ರತ್ಯೇಕ ಯಂತ್ರ ಮೀಸಲಿಡಲಾಗಿದೆ. ಸೋಂಕಿತರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಇಲ್ಲಿಗೆ ಬಂದು ಡಯಾಲಿಸಿಸ್‌ಗೆ ಒಳಪಡುತ್ತಾರೆ. ದಿನಕ್ಕೆ ಮೂರು ಶಿಫ್ಟ್ ಆಧಾರದಲ್ಲಿ ಎಲ್ಲ ಕೇಂದ್ರಗಳಲ್ಲಿಯೂ ಡಯಾಲಿಸಿಸ್ ನಡೆಯುತ್ತಿದೆ’ ಎನ್ನುತ್ತಾರೆ ಡಯಾಲಿಸಿಸ್ ನಿರ್ವಹಣೆ ಹೊಣೆ ಹೊತ್ತ ಡಿಸಿಡಿಸಿ ಸಂಸ್ಥೆಯ ಜಿಲ್ಲಾ ಸಂಯೋಜಕ ಚಂದ್ರಶೇಖರ್.

ADVERTISEMENT

ಗೋಕರ್ಣದಲ್ಲಿ ಡಯಾಲಿಸಿಸ್ ಕೇಂದ್ರದ ವ್ಯವಸ್ಥೆ ಕಲ್ಪಿಸಲು ಒತ್ತಾಯ ಹೆಚ್ಚುತ್ತಿದೆ. ಕಿಡ್ನಿ ಸಮಸ್ಯೆಗೆ ತುತ್ತಾದ ಈ ಭಾಗದ ಜನರು ಚಿಕಿತ್ಸೆಗೆ 30 ಕಿ.ಮೀ., ದೂರ ಪ್ರಯಾಣ ಮಾಡುವ ಅನಿವಾರ್ಯತೆ ಇದೆ.

‘ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈಗಾಗಲೇ ಮೇಲ್ದರ್ಜೆಗೆ ಏರಿಸಲಾಗಿದೆ. ನೂತನ ಕಟ್ಟಡವೂ ನಿರ್ಮಾಣವಾಗುತ್ತಿದೆ. ಹೊಸ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರವನ್ನೂ ಅಳವಡಿಸಿದರೆ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೂ ತೀರಾ ಅನುಕೂಲವಾಗಲಿದೆ’ ಎಂದು ಗೋಕರ್ಣ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ನಾಯ್ಕ ಹೇಳುತ್ತಾರೆ.

ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಕೇಂದ್ರದಲ್ಲಿ ನಿತ್ಯ 24 ರೋಗಿಗಳು ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ. ಕಿಡ್ನಿ ವೈಪಲ್ಯಗೊಂಡ ರೋಗಿಗಳಿಗೆ ಇದು ಸಾಲದೇ ಇರುವ ಕಾರಣ ಪಟ್ಟಣದ ವೇಲ್‌ಫೇರ್‌ ಹಾಗೂ ಮುರುಡೇಶ್ವರ ಆರ್.ಎನ್.‌ ಎಸ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆದು ಡಯಾಲಿಸಿಸ್‌ ಮಾಡಿಕೊಡಲಾಗುತ್ತಿದೆ.

ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಕಿಡ್ನಿ ಸೋಂಕಿತರಿಗೆ ಅನುಕೂಲವಾಗಲು ಒಟ್ಟು 5 ಡಯಾಲಿಸಿಸ್ ಯಂತ್ರಗಳಿವೆ. ಸದ್ಯ ಒಟ್ಟು 30 ಜನ ರೋಗಿಗಳು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ.

ಹಳಿಯಾಳ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ 3 ಡಯಾಲಿಸಿಸ್ ಯಂತ್ರಗಳಿದ್ದು 20 ಜನರು ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ. ವೈದ್ಯರ ಸಲಹೆಯಂತೆ ಕೆಲವರು ಎರಡು ದಿನಕೊಮ್ಮೆ ಕೆಲವರಿಗೆ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಅನ್ನು ಮಾಡಲಾಗುತ್ತಿದೆ ಎಂದು ಡಯಾಲಿಸಿಸ್ ಕೇಂದ್ರದ ವ್ಯವಸ್ಥಾಪಕಿ ರೋಲಿನ್ ಡಿ. ಹೇಳಿದರು.

‘ಪ್ರತಿದಿನ ಎರಡರಿಂದ ಒಂಬತ್ತು ಜನರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಪ್ರತ್ಯೇಕವಾಗಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. ಕಾಲಕಾಲಕ್ಕೆ ಶುಚಿಗೊಳಿಸಲಾಗುತ್ತಿದೆ’ ಎಂದು ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರುಣ ಹಳಗತ್ತಿ ಹೇಳಿದರು.

ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 6 ಡಯಾಲಿಸಿಸ್ ಯಂತ್ರಗಳಿದ್ದು, ಆರ್ಥಿಕವಾಗಿ ಸ್ಥಿತಿವಂತರಲ್ಲದ 35 ರೋಗಿಗಳು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಯಂತ್ರಗಳನ್ನು ಅಳವಡಿಸಲು ಜಾಗ ಹಾಗೂ ಸಿಬ್ಬಂದಿ ಕೊರತೆಯಿದೆ. ನಿಶ್ಚಿತ ರೋಗಿಗಳ ಹೊರತಾಗಿ ಅವಕಾಶಗಳಿದ್ದರೆ ಬೇರೆ ರೋಗಿಗಳಿಗೂ ಡಯಾಲಿಸಿಸ್ ಸೌಲಭ್ಯ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ತಿಳಿಸಿದರು.

ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ಗಾಗಿ 20 ರೋಗಿಗಳು ನೊಂದಣಿ ಮಾಡಿಕೊಂಡಿದ್ದು, ವೇಳಾಪಟ್ಟಿಯ ಅನುಗುಣವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಅನೀಲ ನಾಯ್ಕ ತಿಳಿಸಿದರು.

ಶಾಸಕರು ನೀಡಿರುವ ಡಯಾಲಿಸಿಸ್ ತಂತ್ರವನ್ನು ಕೂಡ ಚಿಕಿತ್ಸೆಗೆ ಬಳಸಲಾಗುತ್ತಿದೆ. ಜೊಯಿಡಾ ಭಾಗದ ರೋಗಿಗಳು ಕೂಡ ಇಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಮಾಹಿತಿ ನೀಡಿದರು.

ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 3 ಡಯಾಲಿಸೀಸ್ ಯಂತ್ರಗಳು ಇವೆ. ಪ್ರಸ್ತುತ 18 ರೋಗಿಗಳು ಡಯಾಲಿಸಿಸ್‌ಗೆ ಒಳಪಡುತ್ತಿದ್ದು, ತಿಂಗಳಿಗೆ 146 ಸೈಕಲ್ ಬಳಕೆಯಾಗುತ್ತಿದೆ. ಯಂತ್ರದ ಸಾಮರ್ಥ್ಯಕ್ಕೆ ಅನುಗುಣವಾಗಿ ಇನ್ನೂ 3 ರೋಗಿಗಳಿಗೆ ಚಿಕಿತ್ಸೆ ನಿಡಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ್ ಮಾಹಿತಿ ನೀಡಿದರು.

ಹೊನ್ನಾವರ ತಾಲ್ಲೂಕು ಆಸ್ಪತ್ರೆಯಲ್ಲಿ ಅಳವಡಿಸಿರುವ ಡಯಾಲಿಸಿಸ್ ಯಂತ್ರಗಳ ನಿರ್ವಹಣೆ ಹಾಗೂ ರೋಗಿಗಳಿಗೆ ನೀಡುತ್ತಿರುವ ಸೇವೆಯಲ್ಲಿ ಸುಧಾರಣೆಗಳಾಗಿವೆಯಾದರೂ ಕೆಲ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಇನ್ನೂ ಕಾಯಬೇಕಾದ ಪರಿಸ್ಥಿತಿ ಇದೆ.

‘ಸದ್ಯ 6 ಡಯಾಲಿಸಿಸ್ ಯಂತ್ರಗಳಿದ್ದು ನಿತ್ಯ 12 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. 4 ರೋಗಿಗಳಿಗೆ ಡಯಾಲಿಸಿಸ್ ಮಾಡಿಸಲು ಅಗತ್ಯ ಸೌಲಭ್ಯಗಳ ಕೊರತೆ ಇದೆ’ ಎಂದು ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

‘ಅಗತ್ಯಕ್ಕೆ ತಕ್ಕಂತೆ ಡಯಾಲಿಸಿಸ್ ಯಂತ್ರಗಳು ಹಾಗೂ ಅವುಗಳನ್ನು ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದು ಡಯಾಲಿಸಿಸ್‍ಗಾಗಿ ಕಾದು ಸುಸ್ತಾದ ಬಡ ರೋಗಿಯೊಬ್ಬರು ಆಗ್ರಹಿಸಿದರು. 

ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿದ್ದು, 22 ರೋಗಿಗಳು ನಿರಂತರ ಇದರ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದರು.

––––––––––

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರವಿ ಸೂರಿ, ಮೋಹನ ನಾಯ್ಕ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ವಾರ್ಡ್ 
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳ ಆಗುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಸಂಶೋಧನೆ ಇನ್ನೂ ನಡೆಸಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಲಭ್ಯತೆ ಬಳಿಕ ಡಯಾಲಿಸಿಸ್‌ಗೆ ಒಳಪಡುವವರ ಸಂಖ್ಯೆ ಹೆಚ್ಚಿರುವುದು ನಿಜ ಡಾ.ಪೂರ್ಣಿಮಾ ಆರ್.ಟಿ ಕ್ರಿಮ್ಸ್ ನಿರ್ದೇಶಕಿ
- ಡಯಾಲಿಸಿಸ್ ಕೇಂದ್ರಗಳಲ್ಲಿ ಸೌಲಭ್ಯ ಶುಚಿತ್ವಕ್ಕೆ ಆದ್ಯತೆ ನೀಡಲು ಸಲಹೆ ನೀಡಲಾಗಿದೆ. ಹೆಚ್ಚುವರಿ ಯಂತ್ರಗಳ ಬೇಡಿಕೆ ಆಧರಿಸಿ ಹೊಸ ಯಂತ್ರಗಳನ್ನು ಪೂರೈಕೆಗೆ ಕ್ರಮವಹಿಸಲಾಗುತ್ತದೆ
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

ಸರ್ಕಾರಿ ಆಸ್ಪತ್ರೆಯಲ್ಲಿ ಸುಲಭವಾಗಿ ಡಯಾಲಿಸಿಸ್ ಸೌಲಭ್ಯ ಸಿಗುತ್ತಿರುವುದು ಬಡವರಿಗೆ ಅನುಕೂಲವಾಗಿದೆ ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ

ಸರ್ಕಾರಿ ಆಸ್ಪತ್ರೆಯಲ್ಲಿ ಸುಲಭವಾಗಿ ಡಯಾಲಿಸಿಸ್ ಸೌಲಭ್ಯ ಸಿಗುತ್ತಿರುವುದು ಬಡವರಿಗೆ ಅನುಕೂಲವಾಗಿದೆ
ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ

ಔಷಧ ರಾಸಾಯನಿಕ ತರಕಾರಿಯಿಂದ ಅಪಾಯ

‘ನೋವು ನಿವಾರಕ ಔಷಧಗಳ ಅತಿಯಾದ ಸೇವನೆ ಮದ್ಯ ಸೇವನೆ ಅಧಿಕ ಒತ್ತಡದಂತಹ ಸಮಸ್ಯೆಯಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. 19 ವರ್ಷದ ಯುವಕರಿಂದ 70 ವರ್ಷದ ವೃದ್ಧರ ವರೆಗಿನವರು ಜಿಲ್ಲೆಯಲ್ಲಿ ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ’ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದರು. ‘ಪಾರಂಪರಿಕ ತರಕಾರಿ ತಳಿಗಳು ಜನರ ಆರೋಗ್ಯ ಜೀವನಕ್ಕೆ ಕೊಡುಗೆ ನೀಡಿದ್ದವು. ಮನೆ ಅಂಗಳ ಗದ್ದೆಯ ತುಂಡುಭಾಗದಲ್ಲಿ ಬೆಳೆಯಲಾಗುತ್ತಿದ್ದ ಹಲವು ತರಕಾರಿ ತಳಿ ಈಚಿನ ವರ್ಷಗಳಲ್ಲಿ ಕಣ್ಮರೆಯಾಗಿವೆ. ಪೌಷ್ಟಿಕಾಂಶ ಒದಗಿಸುತ್ತಿದ್ದ ತರಕಾರಿಗಳ ಬೆಳೆಯುವಿಕೆ ಪ್ರಮಾಣ ಶೇ 40ಕ್ಕಿಂತ ಕಡಿಮೆ ಆಗಿದ್ದು ರಾಸಾಯನಿಕ ಬಳಸಿದ ತರಕಾರಿ ಸೊಪ್ಪು ಸೇವನೆ ಅನಿವಾರ್ಯವಾಗಿದೆ. ಇವು ಕೂಡ ಕಿಡ್ನಿ ವೈಫಲ್ಯಕ್ಕೆ ಕಾರಣ. ಆದರೆ ಅಧ್ಯಯನದಲ್ಲಿ ಇವು ದೃಢಪಟ್ಟಿಲ್ಲ’ ಎಂದೂ ತಿಳಿಸಿದರು.

Cಎಚ್‌ಸಿವಿ ಬಾಧಿತರಿಗೆ ಶಿರಸಿಯಲ್ಲಿ ವ್ಯವಸ್ಥೆ

ದೀರ್ಘಕಾಲೀನ ಯಕೃತ್ತಿನ ಕಾಯಿಲೆಯಾದ ಹೆಪಟೈಟಿಸ್ ಸಿ ವೈರಸ್‍ನಿಂದ (ಎಚ್‍ಸಿವಿ) ಬಳಲುವವರಿಗೆ ತಾಲ್ಲೂಕು ಮಟ್ಟದಲ್ಲಿಯೇ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಿರುವ ರಾಜ್ಯದ ಏಕೈಕ ಡಯಾಲಿಸಿಸ್ ಘಟಕ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿದೆ. ‘ಘಟಕದಲ್ಲಿ 9 ಡಯಾಲಿಸಿಸ್ ಯಂತ್ರಗಳಿದ್ದು 69 ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇವರಲ್ಲಿ ಕಿಡ್ನಿ ಸಮಸ್ಯೆಯ ಜತೆ ಎಚ್.ಸಿ.ವಿ.ಯಿಂದ ಬಳಲುತ್ತಿರುವವರು ಹಲವರಿದ್ದಾರೆ. ಹೆಚ್ಚುವರಿ ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆಯಿಲ್ಲ’ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ನೇತ್ರಾವತಿ ಶಿರಸಿಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.