ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಬುಧವಾರ ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್’ ತಳಿಯ ಹೆಣ್ಣು ಡಾಲ್ಫಿನ್ ಕಳೇಬರ ಸಿಕ್ಕಿದೆ.
‘ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದಾಗ, ಅದರ ಹೊಟ್ಟೆಯಲ್ಲಿ ಮೀನಿನ ಬಲೆಯ ಚೂರುಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿವೆ’ ಎಂದು ಅರಣ್ಯ ಇಲಾಖೆಯ ಕರಾವಳಿ ಸಾಗರ (ಕೋಸ್ಟಲ್ ಮರೈನ್) ವಿಭಾಗವು ತಿಳಿಸಿದೆ.
‘ಕೆಲ ದಿನಗಳ ಹಿಂದೆಯೇ ಡಾಲ್ಫಿನ್ ಮೃತಪಟ್ಟಿದ್ದು, ಅಲೆಗಳ ಅಬ್ಬರಕ್ಕೆ ಕಡಲತೀರಕ್ಕೆ ಬಂದು ಬಿದ್ದಿದೆ. ಕುಂದಾಪುರದ ‘ರೀಫ್ ವಾಚ್ ಮರೈನ್ ಕನ್ಸರ್ವೇಶನ್’ ಸಂಸ್ಥೆಯ ಸಾಗರಜೀವಿ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದರು. ಜೀರ್ಣಿಸಲಾಗದ ವಸ್ತುಗಳ ಸೇವನೆಯೇ ಸಾವಿಗೆ ಕಾರಣವೆಂದು ಗೊತ್ತಾಗಿದೆ. ಕಡಲತೀರದಲ್ಲೇ ಕಳೇಬರ ಹೂಳಲಾಯಿತು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯ್ಕ ತಿಳಿಸಿದರು. ಕರಾವಳಿ ಸಾಗರ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.