ಹಳಿಯಾಳ: ಶಿವ ಪ್ರತಿಷ್ಠಾನ ದುರ್ಗಾದೌಡ ಸಮಿತಿ ವತಿಯಿಂದ ಆಯೋಜಿಸಿದ 7ನೇ ದಿನದ ದೌಡನಲ್ಲಿ ಸಹಸ್ರಾರು ಜನರು ಪಾಲ್ಗೊಂಡರು.
ಭಾನುವಾರ ಬೆಳ್ಳಿಗ್ಗೆ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರಂಭಗೊಂಡ ದುರ್ಗಾ ದೌಡನ ಮೆರವಣಿಗೆ ಅರ್ಬನ ಸರ್ಕಲ್, ಮೇದಾರ ಗಲ್ಲಿ, ತಾನಾಜಿಗಲ್ಲಿ, ಗುತ್ತಿಗೇರಿಗಲ್ಲಿ ಮೂಲಕ ಗೌಳಿಗಲ್ಲಿಯಲ್ಲಿಯ ದುರ್ಗಾದೇವಿ ದೇವಸ್ಥಾನದಲ್ಲಿ ತಲುಪಿತು.
ದುರ್ಗಾದೌಡ ಸಾಗುವ ಮಾರ್ಗದ ಮಧ್ಯೆ ಮಕ್ಕಳ ವಿವಿಧ ಸ್ತಬ್ಧ ರೂಪಕಗಳು ಸ್ಪರ್ಧಾತ್ಮಕತೆಯಿಂದ ಕೂಡಿದ್ದು, ನಾ ಮುಂದು ತಾ ಮುಂದು ಎನ್ನೆವಂತೆ ಒಂದು ಬಡಾವಣೆ ಇನ್ನೊಂದು ಬಡಾವಣೆಗೆ ಸ್ಪರ್ಧೆ ನೀಡುವಂತಿತ್ತು.
ಶನಿವಾರ ರಾತ್ರಿಯಿಡೀ ಹಾಗೂ ಭಾನುವಾರವೂ ಆಗಮಿಸುವ ದುರ್ಗಾದೌಡನ ಆಗಮನಕ್ಕಾಗಿ ಗುತ್ತಿಗೇರಿ ಗಲ್ಲಿ, ತಾನಾಜಿ ಗಲ್ಲಿ, ಮೇದಾರ ಗಲ್ಲಿಯಲ್ಲಿ ಸ್ಥಬ್ಧ ರೂಪಕಗಳ ಸಿದ್ಧತೆ ಹಾಗೂ ಬಡಾವಣೆಗಳನ್ನು ತಳಿರು, ತೋರಣ, ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸುವ ಕಾರ್ಯದಲ್ಲಿ ನಾಗರಿಕರು ತೊಡಗಿದ್ದರು.
ಮಹಿಳೆಯರು ಹಿಂದೂ ಪಾರಂಪರಿಕ ವೇಷ ಭೂಷಣ ತೊಟ್ಟು ಭಾಗವಹಿಸಿದ್ದು ವಿಶೇಷವಾಗಿತ್ತು. ಗುತ್ತಿಗೇರಿಗಲ್ಲಿಯಲ್ಲಿ ಶಿವಾಜಿಕೋಟೆ, ಪರಮೇಶ್ವರ, ನವದುರ್ಗೆಯ ಅವತಾರ, ಶ್ರವಣಕುಮಾರ ತನ್ನ– ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತು ಕಾಶಿ ಯಾತ್ರೆ ಮಾಡುತ್ತಿರುವುದು, ಸಂತ ಬಾಳು ಮಾಮಾ, ಸಾಂಪ್ರದಾಯಿಕ ಉಡಿಗೆಯೊಂದಿಗೆ ಬಾಲಕಿಯರು, ಸತ್ಯ ನಾರಾಯಣನ ಪೂಜಾ ರೂಪಕ, ಕಟ್ಟಿಗೆ ಒಲೆಯ ಮೇಲೆ ರೊಟ್ಟಿ ಸಿದ್ದಪಡಿಸುವುದು, ಶಿವಾಜಿ ಸಾಮ್ರಾಜ್ಯದ ಸೇನಾಪತಿ ತಾನಾಜಿಯ ರೂಪಕ, ಶರಣರ, ಸ್ವಾತಂತ್ರ್ಯ ಹೋರಾಟಗಾರರ ಮತ್ತಿತರ ರೂಪಕಗಳು ಆಕರ್ಷಿಸಿದವು.
ಸೋಮವಾರದಂದು ಗೌಳಿಗಲ್ಲಿ ದುರ್ಗಾದೇವಿ ದೇಸ್ಥಾನದಿಂದ ತಿಲಕ ರಸ್ತೆ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದ ವರೆಗೆ ದುರ್ಗಾದೌಡ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.