ADVERTISEMENT

ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ: ಮುಲ್ಲೈ ಮುಗಿಲನ್

ಯೋಜನೆಯಿಂದ ಬಾಧಿತ ಹಳ್ಳಿಗಳ ಗಡಿ ರೇಖೆ ಗುರುತಿಸಿ ಸರ್ವೆಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 15:39 IST
Last Updated 17 ಜೂನ್ 2022, 15:39 IST
ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ ಮತ್ತು ಅಲಗೇರಿ ವಿಮಾನ ನಿಲ್ದಾಣ ಯೋಜನೆಯ ಕಾರ್ಯಾನುಷ್ಠಾನದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೆ.ಎಸ್‍.ಐ.ಐ.ಡಿ.ಸಿ ಅಧ್ಯಕ್ಷ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿದರು. ವ್ಯವಸ್ಥಾಪಕ ಡಾ.ಎಂ.ಆರ್.ರವಿ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದಾರೆ
ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ ಮತ್ತು ಅಲಗೇರಿ ವಿಮಾನ ನಿಲ್ದಾಣ ಯೋಜನೆಯ ಕಾರ್ಯಾನುಷ್ಠಾನದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೆ.ಎಸ್‍.ಐ.ಐ.ಡಿ.ಸಿ ಅಧ್ಯಕ್ಷ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿದರು. ವ್ಯವಸ್ಥಾಪಕ ಡಾ.ಎಂ.ಆರ್.ರವಿ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದಾರೆ   

ಕಾರವಾರ: ‘ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ ಯೋಜನೆ ಜಾರಿಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜಮೀನಿನ ದಾಖಲೆಗಳನ್ನು ಸಂಗ್ರಹಿಸಿ ಸರ್ವೆ ಮಾಡಿಸಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ಈ ಮೊದಲು ತದಡಿ ಬಂದರನ್ನು ‘ಸಾಗರಮಾಲಾ’ ಯೋಜನೆಯಲ್ಲಿ ಅಭಿವೃದ್ಧಿಗೆ ಗುರುತಿಸಲಾಗಿತ್ತು. ಆದರೆ, ಈಚೆಗೆ ಬಂದರಿನ ಪ್ರದೇಶವನ್ನು ಅದರಿಂದ ಹೊರಗಿಡಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಯೋಜನೆಯ ಕಾರ್ಯಾನುಷ್ಠಾನದ ಸಭೆಯಲ್ಲಿ ಅವರು ಮಾತನಾಡಿದರು.

‘ಯೋಜನೆಯಿಂದ ಬಾಧಿತವಾಗುವ ಹಳ್ಳಿಗಳ ಗಡಿ ರೇಖೆ ಗುರುತಿಸಬೇಕು. ಅನುಕೂಲವಿರುವ ಪ್ರದೇಶಗಳನ್ನು ಮೊದಲು ಸರ್ವೆ ಮಾಡಿ, ಉಳಿದ ಪ್ರದೇಶಗಳನ್ನು ಜಿ.ಪಿ.ಎಸ್ ಮ್ಯಾಪಿಂಗ್ ಮೂಲಕ ಗುರುತಿಸಬೇಕು. ಇಕ್ಕಟ್ಟಾದ ರಸ್ತೆಗಳನ್ನು ವಿಸ್ತರಿಸಬೇಕು. ಇದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಪ್ರವಾಸಿಗರಿಗೂ ಅನುಕೂಲವಾಗಲಿದೆ’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಯೋಜನೆಯಿಂದ ಕೆಲವು ಗ್ರಾಮಗಳಿಗೆ ಅನಾನುಕೂಲವಾಗಬಹುದು. ಅಂತಹ ಗ್ರಾಮಗಳ ಸ್ಥಳಾಂತರ, ಬದಲಿ ಜಾಗದ ವ್ಯವಸ್ಥೆ ಮತ್ತು ಪರಿಹಾರ ಕಲ್ಪಿಸಲಾಗುವುದು. ಯೋಜನೆಯಿಂದ ರಸ್ತೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಕಂದಾಯ, ಅರಣ್ಯ, ಭೂ ದಾಖಲೆ ಮತ್ತು ಮಾಪನ ಇಲಾಖೆ, ನೌಕಾನೆಲೆ ಸಿಬ್ಬಂದಿ ಜೊತೆಗೂಡಿ ಸರ್ವೆ ಮಾಡಬೇಕು. ಕಳೆದು ಹೋಗಿರುವ ಅಥವಾ ಗುರುತಿಸದ ಸರ್ವೆ ನಂಬರ್‌ ಬಗ್ಗೆ ವರದಿ ನೀಡಬೇಕು’ ಎಂದು ಸೂಚಿಸಿದರು.

ಮತ್ತಷ್ಟು ಯೋಜನೆಯ ಉದ್ದೇಶ: ‘ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನದಿಂದ ಜನರಿಗೆ ಉದ್ಯೋಗ, ಮನರಂಜನೆ, ಮೂಲ ಸೌಲಭ್ಯಗಳು ದೊರೆಯಲಿವೆ. ಕಾರವಾರದಿಂದಲೇ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾದರೆ ಜಿಲ್ಲೆಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಕೆ.ಎಸ್‍.ಐ.ಐ.ಡಿ.ಸಿ ಅಧ್ಯಕ್ಷ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು.

‘ಜಿಲ್ಲೆಗೆ ಡಿಸ್ನಿಲ್ಯಾಂಡ್, ಪರಿಸರ ಪ್ರವಾಸೋದ್ಯಮ ಕೇಂದ್ರ, ಉದ್ಯಾನದಂಥ ಯೋಜನೆಯನ್ನು ತರುವ ಉದ್ದೇಶವಿದೆ. ಇಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮವನ್ನು ವಹಿಸಲಾಗುವುದು’ ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆ.ಎಸ್‍.ಐ.ಐ.ಡಿ.ಸಿ) ವ್ಯವಸ್ಥಾಪಕ ಡಾ.ಎಂ.ಆರ್.ರವಿ, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ವಿವಿಧ ಅಧಿಕಾರಿಗಳಿದ್ದರು.

₹ 2,870 ಕೋಟಿಯ ಟೆಂಡರ್: ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ರನ್‌ವೇ ಮತ್ತು ಇತರ ಮೂಲ ಸೌಕರ್ಯಗಳ ಕಾಮಗಾರಿಗೆ ರಕ್ಷಣಾ ಇಲಾಖೆಯು ₹ 2,870 ಕೋಟಿ ಮೊತ್ತದ ಟೆಂಡರ್ ಕರೆದಿದೆ. ಇದೇ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನಕ್ಕೂ ಅವಕಾಶ ನೀಡಲಾಗಿದೆ. ಇದರ ಕಾಮಗಾರಿಗಳನ್ನು ನಿರ್ವಹಿಸಲಿರುವ ಕೆ.ಎಸ್.ಐ.ಐ.ಡಿ.ಸಿ ಕೂಡ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ರನ್‌ವೇ ವಿಸ್ತರಣೆಗೆ ಅಗತ್ಯವಾದ ಜಮೀನನ್ನು ₹ 82 ಕೋಟಿಯಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಅದರಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಖಾತೆಗೆ ₹ 28 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರನ್‌ವೇಗೆ ಸುಮಾರು ₹ 60 ಕೋಟಿ ಮೊತ್ತದ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.