ADVERTISEMENT

ಮುಂಡಗೋಡ: ಬೆಳೆ ರಕ್ಷಣೆಗೆ ರೈತರ ಪರದಾಟ

ಮುಂಡಗೋಡ ಅರಣ್ಯ ವ್ಯಾಪ್ತಿಯ ಕಾಡಿನಂಚಿನ ಗದ್ದೆಗಳಲ್ಲಿ ಕಾಡಾನೆಗಳ ಕಾಟ

ಶಾಂತೇಶ ಬೆನಕನಕೊಪ್ಪ
Published 9 ನವೆಂಬರ್ 2020, 17:06 IST
Last Updated 9 ನವೆಂಬರ್ 2020, 17:06 IST
ಅರಣ್ಯದಂಚಿನ ಗದ್ದೆಗಳಲ್ಲಿ ಭತ್ತದ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡಿಸಿ, ಒಣಹುಲ್ಲನ್ನು ರೋಲ್ ಮಾಡಿಸಿರುವುದು 
ಅರಣ್ಯದಂಚಿನ ಗದ್ದೆಗಳಲ್ಲಿ ಭತ್ತದ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡಿಸಿ, ಒಣಹುಲ್ಲನ್ನು ರೋಲ್ ಮಾಡಿಸಿರುವುದು    

ಮುಂಡಗೋಡ: ಕಾಡಾನೆಗಳು ಸಂಚಾರ ಆರಂಭಿಸಿರುವುದರಿಂದ, ಅರಣ್ಯದಂಚಿನ ಗದ್ದೆಗಳಲ್ಲಿರುವ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೊಯ್ಲಿಗೆ ಬಂದಿರುವ ಭತ್ತವನ್ನು ರಕ್ಷಿಸಲು, ಕಟಾವು ಮಾಡುವ ವಾಹನಗಳಿಗೆ ದುಂಬಾಲು ಬಿದ್ದಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ಕಿರವತ್ತಿ ಮೂಲಕ ತಾಲ್ಲೂಕಿಗೆ ಗಜಪಡೆ ಆಗಮಿಸಿದ್ದು, ಉಗ್ಗಿನಕೇರಿ, ಮೈನಳ್ಳಿ, ಕಳಕಿಕಾರೆ, ಚವಡಳ್ಳಿ, ಕರವಳ್ಳಿ, ಬ್ಯಾನಳ್ಳಿ, ತಮ್ಯಾನಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ತೋಟ,ಗದ್ದೆಗಳಿಗೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಕೆಲವೆಡೆ ಅಡಿಕೆ, ಬಾಳೆ ಗಿಡಗಳನ್ನು ಮುರಿದು ಹಾಕಿದ್ದರೆ, ಉಳಿದೆಡೆ ಭತ್ತವನ್ನು ತಿಂದು, ತುಳಿದು ಹಾನಿ ಮಾಡಿವೆ.

ಬೆಳೆ ಕಟಾವಿಗೆ ಅವಸರ:'ಅರಣ್ಯದಂಚಿನ ಗದ್ದೆಗಳಲ್ಲಿ ಕೊಯ್ಲಿಗೆ ಬಂದಿರುವ ಭತ್ತವನ್ನು ಕಟಾವು ಮಾಡಲೇಬೇಕಾಗಿದೆ. ಕೂಲಿ ಆಳುಗಳ ಕೊರತೆಯಿಂದ ಕಟಾವು ಮಾಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಾಡಿನಂಚಿನ ಗದ್ದೆಗಳ ಹತ್ತಾರು ರೈತರು ಒಂದಾಗಿ, ಕಟಾವಿನ ದರ ಹೆಚ್ಚಾದರೂ ಸಹಿತ, ಇರುವ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದೇವೆ' ಎಂದು ರೈತ ರಾಮಣ್ಣ ಪಾಟೀಲ ಹೇಳಿದರು.

ADVERTISEMENT

'ಸಂಜೆ ಆಗುತ್ತಲೇ ಕಾಡಾನೆಗಳು ಭತ್ತದ ಗದ್ದೆಗಳಲ್ಲಿ ಓಡಾಡುತ್ತಿವೆ. ಎಷ್ಟೇ ಓಡಿಸಿದರೂ ಈ ಗದ್ದೆಯಿಂದ ಆ ಗದ್ದೆಗೆ ಹೋಗಿ ಬೆಳೆ ಹಾನಿ ಮಾಡುತ್ತಿವೆ. ಗುಂಪಿನಲ್ಲಿ ಮರಿ ಆನೆ ಇರುವುದರಿಂದ, ಆನೆಗಳನ್ನು ಓಡಿಸುವುದು ಕಷ್ಟವಾಗುತ್ತಿದೆ' ಎಂದು ರೈತ ಗಂಗಾರಾಮ ಹೇಳಿದರು.

ಯಂತ್ರಗಳಿಗೆ ಹೆಚ್ಚಿದ ಬೇಡಿಕೆ: 'ಭತ್ತ ಕಟಾವು ಮಾಡುವ ಯಂತ್ರಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಗಂಟೆಯ ದರದಲ್ಲಿ ₹300-400 ರೂಪಾಯಿ ಏರಿಕೆಯಾಗಿದೆ. ಬೆಳೆ ಕೊಯ್ಲು ಮಾಡಿದ ನಂತರ ಉಳಿಯುವ ಒಣಹುಲ್ಲನ್ನು ಸುತ್ತುವ ದರವೂ ಏರಿದ್ದು, ಪ್ರತಿ ರೋಲ್ ದರದಲ್ಲಿ 5-8 ರೂಪಾಯಿ ಏರಿಕೆಯಾಗಿದೆ' ಎಂದು ರೈತ ರಮೇಶ ತಳವಾರ ಹೇಳಿದರು.

'ಅರಣ್ಯದಂಚಿನ ಗದ್ದೆಗಳಲ್ಲಿ ಮೊದಲು ಕಟಾವು ಮಾಡುವಂತೆ ವಾಹನಗಳ ಮಾಲೀಕರಿಗೆ ತಿಳಿಸಲಾಗಿದೆ. ಅದರಂತೆ ಚವಡಳ್ಳಿ, ಕರವಳ್ಳಿ, ಬ್ಯಾನಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಯಂತ್ರಗಳು ಭತ್ತ ಕಟಾವು ಮಾಡುತ್ತಿವೆ. ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಕಳಿಸಲು ರಾತ್ರಿಯಿಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ' ಎಂದು ಅರಣ್ಯ ಸಿಬ್ಬಂದಿ ಹೇಳಿದರು.

'ದಾಂಡೇಲಿ ಅಭಯಾರಣ್ಯದ ಮೂಲಕ ಸಂಚಾರ ನಡೆಸಿರುವ ಒಟ್ಟು 21 ಆನೆಗಳು ಮುಂಡಗೋಡ ಅರಣ್ಯ ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿವೆ. ಇದರಲ್ಲಿ 3-4 ಮರಿ ಆನೆಗಳಿವೆ. ಮೂರು ತಂಡಗಳಾಗಿ ಅಲ್ಲಲ್ಲಿ ತೋಟ, ಗದ್ದೆಗಳಿಗೆ ದಾಳಿ ಮಾಡುತ್ತಿವೆ' ಎಂದು ವನ್ಯಜೀವಿ ಸಂಶೋಧನೆ ಮತ್ತ ಸಂರಕ್ಷಣೆ ಸೊಸೈಟಿ ಪ್ರತಿನಿಧಿ ರವಿ ಯಲ್ಲಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.