
ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯ ಕಡಲ ತೀರದಲ್ಲಿ ಸರ್ಕಾರಿ ಜಾಗವನ್ನು (ಹರಿದುಬಂದ ಜಾಗ) ಅತಿಕ್ರಮಿಸಿ, ರೆಸಾರ್ಟ್, ವಸತಿ ಗೃಹ, ಹೋಟೆಲ್‌ಗಳನ್ನು ನಿರ್ಮಿಸಿದ ಬಗ್ಗೆ ಗಡಿ ಗುರುತಿಸಲು, ಜಿಲ್ಲಾ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಮಂಗಳವಾರ ಸರ್ವೆ ಕಾರ್ಯ ನಡೆಸಲಾಯಿತು.
ಕುಮಟಾ ತಹಶೀಲ್ದಾರ್ ಶ್ರಿಕೃಷ್ಣ ಕಾಮ್ಕರ್, ಈ ಮೊದಲು ಜನವರಿ 28ರಂದು ಸರ್ವೆ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಕಾರಣಾಂತರದಿಂದ ಅದು ಸಾಧ್ಯವಾಗದೇ ಫೆಬ್ರುವರಿ 3 ಮಂಗಳವಾರ ಸರ್ವೆಕಾರ್ಯ ನಡೆಸಲಾಯಿತು. ಈ ಮೊದಲು 27 ಸ್ಥಳದ ಸರ್ವೆ ಮಾತ್ರ ನಡೆಸಲಾಗಿತ್ತು. ಆದರೆ ಮಂಗಳವಾರ ಅತಿಕ್ರಮಣವಾದ ಎಲ್ಲಾ 57 ಸ್ಥಳಗಳನ್ನೂ ಸರ್ವೆ ನಡೆಸಿ ಗಡಿ ಗುರುತಿಸಲಾಗಿದೆ. ಅದರ ಸಂಪೂರ್ಣ ತೆರವಿಗೆ ಬೇಕಾಗುವ ಖರ್ಚು ವೆಚ್ಚವನ್ನೂ ಲೆಕ್ಕಹಾಕಲಾಗಿದೆ. ಮುಂದಿನ ದಿನಗಳಲ್ಲಿ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಈಶ್ವರ ಗೌಡ ತಿಳಿಸಿದ್ದಾರೆ.
ಈ ಮದ್ಯೆ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ ಅವರ ನೇತೃತ್ವದಲ್ಲಿ ಸದಸ್ಯರು ಕಳೆದ ವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಅತಿಕ್ರಮಣ ತೆರವಿಗೆ ಮನವಿ ಮಾಡಿದ್ದರು. ಸೂಕ್ತ ಕ್ರಮ ಕೈಗೊಂಡು 15 ದಿವಸದಲ್ಲಿ ಅತಿಕ್ರಮಣ ತೆರವುಗೊಳಿಸುವ ಭರವಸೆಯನ್ನೂ ಸಹ ಜಿಲ್ಲ್ಲಾಧಿಕಾರಿಗಳು ನೀಡಿದ್ದಾರೆ. ಅದರಂತೆ ಮಂಗಳವಾರ ಉಳಿದ ಸರ್ವೆ ಕಾರ್ಯವನ್ನೂ ಸಹ ಮುಗಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯೂ ಸಹ ಬಂದೋಬಸ್ತ್ ಕಲ್ಪಿಸಿಕೊಡುವ ಭರವಸೆ ನೀಡಿದ್ದರು. ಮಂಗಳವಾರ ಪೊಲೀಸ್ ಬಂದೋಬಸ್ತಿನಲ್ಲಿ ಎಲ್ಲಾ ಸರ್ವೆ ಕಾರ್ಯವನ್ನೂ ಸಹ ನಡೆಸಲಾಗಿದೆ ಎಂದು ಈಶ್ವರ ಗೌಡ ಪತ್ರಿಕೆಗೆ ತಿಳಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿದಂತೆ, ಯಾವುದೇ ಇಲಾಖೆಯಿಂದ ಅಧಿಕೃತ ದಾಖಲೆಯಿಲ್ಲದೇ ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದುಬ್ಬನಸಸಿ, ಗಂಗೆಕೊಳ್ಳ ಮತ್ತು ಗಂಗಾವಳಿ ಕಡಲತೀರದಲ್ಲಿ ಸುಮಾರು 2 ಕಿಲೋ ಮೀಟರ್ ಅಳತೆಯಲ್ಲಿ ಕಂದಾಯ ಇಲಾಖೆಯ ಜಾಗದಲ್ಲಿ ( ಹರಿದುಬಂದ ) ಈಗಾಗಲೇ ಅನೇಕ ರೆಸಾರ್ಟ್, ವಸತಿಗೃಹ, ಹೋಟೆಲ್‌ಗಳು ನಿರ್ಮಾಣವಾಗಿದೆ. ಈ ಬಗ್ಗೆ ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದ ಬಗ್ಗೆ ಪಂಚಾಯ್ತಿ ಸದಸ್ಯರೂ ಸಹ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೂ ದೂರು ನೀಡಿದ್ದರು.
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಯ ಮನವಿಯ ಮೇರೆಗೆ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ 47 ಅನಧಿಕೃತ ಕಟ್ಟಡ ಕಟ್ಟಲಾಗಿದೆ. ಕಾನೂನಿನಂತೆ ತೆರವು ಗೊಳಿಸುವಂತೆ ಸಿ.ಆರ್.ಝಡ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆ ನೋಟಿಸ್ ವಿರುದ್ಧ ಎಲ್ಲರೂ ಹೈಕೋರ್ಟಿನ ಧಾರವಾಡ ಪೀಠದಲ್ಲಿ ರಿಟ್ ಅಫೀಲ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರ ಹಕ್ಕನ್ನು ಗಮನದಲ್ಲಿಟ್ಟುಕೊಂಡು, ಕಾನೂನಿನಂತೆ ನಿಯಮಾನುಸಾರ ಕ್ರಮ ಜರುಗಿಸುವಂತೆ ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.