ADVERTISEMENT

ಶಿರಸಿ: ಮಂಗ ಸತ್ತ ಪ್ರದೇಶದಲ್ಲಿ ನಿರ್ಬಂಧ, ಮುನ್ನೆಚ್ಚರಿಕೆ ಕ್ರಮಕ್ಕೆ ಆದ್ಯತೆ

ಕೆ.ಎಫ್.ಡಿ.

ಗಣಪತಿ ಹೆಗಡೆ
Published 20 ಜನವರಿ 2022, 19:30 IST
Last Updated 20 ಜನವರಿ 2022, 19:30 IST
ಈಚೆಗೆ ಮಂಗ ಸತ್ತಿದ್ದ ಶಿರಸಿ ತಾಲ್ಲೂಕಿನ ಹುಲೇಕಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜನ ಸಂಚರಿಸಿದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ಫಲಕವನ್ನು ಅಳವಡಿಸಿರುವದು.
ಈಚೆಗೆ ಮಂಗ ಸತ್ತಿದ್ದ ಶಿರಸಿ ತಾಲ್ಲೂಕಿನ ಹುಲೇಕಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜನ ಸಂಚರಿಸಿದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ಫಲಕವನ್ನು ಅಳವಡಿಸಿರುವದು.   

ಶಿರಸಿ: ಚಳಿಗಾಲ ಮುಗಿದು ಬೇಸಿಗೆ ಸಮೀಪಿಸುತ್ತಿದ್ದಂತೆ ಮಲೆನಾಡು, ಕರಾವಳಿಯ ಕೆಲ ಭಾಗದಲ್ಲಿ ಆತಂಕ ಸೃಷ್ಟಿಸುತ್ತಿರುವ ಮಂಗನ ಕಾಯಿಲೆ (ಕೆ.ಎಫ್.ಡಿ.) ನಿಯಂತ್ರಣಕ್ಕೆ ಈ ಬಾರಿ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.

ಜನವರಿ ಆರಂಭದಿಂದ ಈವರೆಗೆ ತಾಲ್ಲೂಕಿನ ಹುಲೇಕಲ್, ಸಿದ್ದಾಪುರ ತಾಲ್ಲೂಕಿನ ಕಂಸಲೆ ಗ್ರಾಮದಲ್ಲಿ ತಲಾ ಒಂದೊಂದು ಮಂಗ ಮೃತಪಟ್ಟಿದ್ದವು. ತಕ್ಷಣವೇ ಅವುಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಸತ್ತ ಪ್ರಾಣಿಯ ದೇಹ ಸುಟ್ಟು ಹಾಕಲಾಗಿದೆ. ಇವು ಸತ್ತ ಪ್ರದೇಶದ ಅರ್ಧ ಕಿಲೋ ಮೀಟರ್ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಒಂದು ತಿಂಗಳವರೆಗೆ ತೆರಳದಂತೆ ಫಲಕ ಹಾಕಲಾಗಿದೆ.

‘ಮಂಗನ ಕಾಯಿಲೆ ಹರಡದಂತೆ ಪ್ರತಿ ಹೆಜ್ಜೆಗೂ ಎಚ್ಚರ ವಹಿಸಲು ನಿರ್ಧರಿಸಿದ್ದೇವೆ. ಈ ಹಿಂದೆ ಮಂಗಗಳ ಸಾವಿನ ಬಗ್ಗೆ ತಡವಾಗಿ ಮಾಹಿತಿ ತಿಳಿಯುತ್ತಿದ್ದ ಪರಿಣಾಮ ರೋಗ ಹರಡುವಿಕೆ ತಡೆಗೆ ಕಷ್ಟವಾಗಿತ್ತು. ಈ ಬಾರಿ ತ್ವರಿತ ಮಾಹಿತಿ ಸಂಗ್ರಹಕ್ಕೆ ಆದ್ಯತೆ ನೀಡಿದ ಪರಿಣಾಮ ಎರಡೂ ಕಡೆಗಳಲ್ಲಿ ಮಂಗ ಸತ್ತ ಕೆಲವೇ ಗಂಟೆಗಳಲ್ಲಿ ಅವುಗಳನ್ನು ದಹಿಸಿ ಜನ ಸಂಚಾರ ನಿಷೇಧಿಸಲಾಯಿತು’ ಎನ್ನುತ್ತಾರೆ ಹೊನ್ನಾವರದ ಕೆ.ಎಫ್.ಡಿ. ಘಟಕದ ವೈದ್ಯಾಧಿಕಾರಿ ಡಾ.ಸತೀಶ್ ಶೇಟ್.

ADVERTISEMENT

‘ಮಂಗನಕಾಯಿಲೆ ಹರಡುವ ಸಾಧ್ಯತೆ ಇರುವ ಜಿಲ್ಲೆಯ ಏಳು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮಂಗಗಳು ಮೃತಪಟ್ಟರೆ ತಕ್ಷಣ ಅರಣ್ಯ, ಆರೋಗ್ಯ ಇಲಾಖೆಗೆ ತಿಳಿಸಲು ನಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡುತ್ತಿದ್ದೇವೆ’ ಎಂದರು.

‘ಕಾಯಿಲೆ ಹರಡಲು ಪ್ರಮುಖ ವಾಹಕವಾಗಿರುವ ಉಣುಗುಗಳ ನಿಯಂತ್ರನಕ್ಕೆ ಕಳೆದ ಮಳೆಗಾಲದ ಆರಂಭದಿಂದಲೇ ನಿಯಂತ್ರಣಕ್ಕೆ ಕ್ರಮವಹಿಸಿದ್ದೇವೆ. ಜುಲೈ, ಆಗಸ್ಟ್ ನಲ್ಲಿ ಪಶು ಇಲಾಖೆ ಸಹಕಾರದೊಂದಿಗೆ ಕೊಟ್ಟಿಗೆಗಳಿಗೆ ಔಷಧ ಸಿಂಪಡಣೆ ಮಾಡಿ ಉಣುಗು ನಿಯಂತ್ರಿಸಲಾಗಿದೆ. ಮಂಗನಕಾಯಿಲೆ ಹರಡಬಹುದಾದ ಪ್ರದೇಶಗಳಲ್ಲಿ ರೈತರಿಗೆ ಜಾನುವಾರುಗಳ ಮೈಗೆ ಹಚ್ಚುವ ಔಷಧಗಳನ್ನು ನೀಡಲಾಗಿದೆ. ಇವುಗಳ ಬಳಕೆ ಬಗ್ಗೆ ಜನರಲ್ಲಿ ನಿರಂತರ ಜಾಗೃತಿಯನ್ನೂ ಆಶಾ ಕಾರ್ಯಕರ್ತೆಯರ ಮೂಲಕ ಮೂಡಿಸಲಾಗುತ್ತಿದೆ’ ಎಂದರು.

ಅಂಕಿ–ಅಂಶ
2021 ಸಾಲಿನಲ್ಲಿ ಸತ್ತ ಮಂಗಗಳು; 42
2022 (ಜ.20) ಸತ್ತ ಮಂಗಗಳು;2
2021ರಲ್ಲಿ ಮಂಗನಕಾಯಿಲೆ ದೃಢಪಟ್ಟವರು; 8
ಈ ವರ್ಷ ಕಳುಹಿಸಿದ ರಕ್ತದ ಮಾದರಿ ಸಂಖ್ಯೆ; 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.