ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಣೆ ಗ್ರಾಮದ ಕೂಲಿ ಕಾರ್ಮಿಕ ವಿನಾಯಕ ರಾಮಾ ನಾಯ್ಕ ಕೇವಲ 7 ಗುಂಟೆ ಅಡಿಕೆ ತೋಟದಲ್ಲಿ ಬರೋಬ್ಬರಿ 1 ಕ್ವಿಂಟಲ್ ಕಾಳುಮೆಣಸು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಐದು ವರ್ಷದ ಹಿಂದೆ ಅಡಿಕೆ ಮರಕ್ಕೆ ಕಾಳುಮೆಣಸಿನ ಬಳ್ಳಿ ನಾಟಿ ಮಾಡಿದ್ದ ಅವರು ನಾಟಿ ಮಾಡಿದ ಎರಡೇ ವರ್ಷಕ್ಕೆ ಫಸಲು ಪಡೆದಿದ್ದರು. ಈ ವರ್ಷ 1 ಕ್ವಿಂಟಲ್ ಕಾಳುಮೆಣಸು ಬೆಳೆದಿರುವುದು ರೈತ ವಲಯದಲ್ಲಿ ಸಂತಸದ ಜೊತೆಗೆ ಅಚ್ಚರಿ ಮೂಡಿಸಿದೆ.
‘ಊರಿನ ಕೃಷಿಕರೊಬ್ಬರ ತೋಟದಲ್ಲಿ ಬೆಳೆದ ಕಾಳು ಮೆಣಸಿನ ಬಳ್ಳಿ ತಂದು ಪ್ರತಿ ಅಡಿಕೆ ಮರದ ಬುಡಕ್ಕೆ ಒಂದರಂತೆ ಅಂದಾಜು ಅರ್ಧ ಅಡಿ ಆಳದ ಕುಳಿ ತೆಗೆದು ಕಾಳುಮೆಣಸಿನ ಬಳ್ಳಿ ನಾಟಿ ಮಾಡಿದೆ. ಅಡಿಕೆ ಮರಕ್ಕೆ ಹಾಕಿದ ಗೊಬ್ಬರ ಹಾಗೂ ನೀರನ್ನು ಬಳಸಿಕೊಂಡು ಕಾಳುಮೆಣಸಿನ ಬಳ್ಳಿಯೂ ಚೆನ್ನಾಗಿ ಬೆಳೆಯಿತು. ಕೊಟ್ಟಿಗೆ ಗೊಬ್ಬರ ಹೊರತುಪಡಿಸಿ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಕಾಳುಮೆಣಸಿನ ಗಿಡಕ್ಕೆಂದೇ ಯಾವುದೇ ಹೆಚ್ಚಿನ ಆರೈಕೆ ಮಾಡಿಲ್ಲ. ಪ್ರತ್ಯೇಕ ಗೊಬ್ಬರ ಹಾಕಿಲ್ಲ. ವರ್ಷಕ್ಕೆ ಎರಡು ಸಲ ತುತ್ತ ಸುಣ್ಣ ಸಿಂಪಡಿಸುತ್ತೇನೆ’ ಎನ್ನುತ್ತಾರೆ ವಿನಾಯಕ ನಾಯ್ಕ.
‘ಕಳೆದ ವರ್ಷ 80 ಕೆ.ಜಿ. ಮೆಣಸಿನ ಕಾಳು ಸಿಕ್ಕಿತ್ತು. ಈ ವರ್ಷ ಒಂದು ಕ್ವಿಂಟಲ್ ಮೆಣಸಿನ ಕಾಳು ಸಿಕ್ಕಿದೆ. ಹೆಚ್ಚಿನ ದರ ಬರಬಹುದೆಂಬ ನಿರೀಕ್ಷೆಯಿಂದ ಇದುವರೆಗೂ ಕಾಳುಮೆಣಸು ಮಾರಾಟ ಮಾಡಿಲ್ಲ. ಕಾಳುಮೆಣಸಿನ ಮಾರಾಟಕ್ಕೆ ಹೊರಗಡೆ ಹೋಗುವುದಿಲ್ಲ. ಸ್ಥಳೀಯ ಕುಂದರಗಿ ಸೊಸೈಟಿಯಲ್ಲಿಯೇ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಅವರು.
‘19 ಗುಂಟೆ ಗದ್ದೆ, 7 ಗುಂಟೆ ಅಡಿಕೆ ತೋಟ ಇದೆ. ಗದ್ದೆಯಲ್ಲಿ ಕಬ್ಬು ಬೆಳೆಯುತ್ತೇನೆ. ತೋಟದಲ್ಲಿ 80 ರಿಂದ 90 ಅಡಿಕೆ ಮರವಿದ್ದು ಎಲ್ಲ ಮರಕ್ಕೂ ಕಾಳುಮೆಣಸಿನ ಬಳ್ಳಿ ಹಾಕಿದ್ದೇನೆ. ತೋಟದ ಹೆಚ್ಚಿನ ಕೆಲಸವನ್ನು ನಾನೇ ಮಾಡುತ್ತೇನೆ. ಮನೆಯವರೂ ಸಹಕರಿಸುತ್ತಾರೆ ತೋಟಕ್ಕೆ ನೀರುಣಿಸಲು ಕೊಳವೆ ಬಾವಿ ತೋಡಿದಾಗ ಸರಿಯಾದ ನೀರು ಬರಲಿಲ್ಲ. ನಂತರ ಬಾವಿ ತೆಗೆಸಿ ಬಾವಿಗೆ ಪಂಪ್ ಅಳವಡಿಸಿ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಿದ್ದೇನೆ. ಸರಾಸರಿ ವಾರಕ್ಕೆ ಎರಡು ಸಲ ನೀರು ಬಿಡುತ್ತೇನೆ’ ಎಂದು ವಿವರಿಸಿದರು.
ಬೇರೆಯವರ ಅಡಿಕೆ ತೋಟಗಳಲ್ಲಿ ಕೆಲಸ ಮಾಡುವ ಜೊತೆಗೆ ದಿನಕ್ಕೆ ಕೆಲ ಹೊತ್ತು ಸ್ವಂತ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಆದ್ಯತೆ ನೀಡಿ ಸಮಾಧಾನಕರ ಫಸಲು ಪಡೆದಿದ್ದೇನೆವಿನಾಯಕ ರಾಮಾ ನಾಯ್ಕ ಕೃಷಿಕ
ಕೂಲಿ ಕೆಲಸದ ಜೊತೆಗೆ ಕೃಷಿ ಮಾಡಿ ಅಲ್ಪ ಜಾಗದಲ್ಲಿ ಕ್ವಿಂಟಲ್‍ನಷ್ಟು ಕಾಳುಮೆಣಸು ಫಸಲು ಪಡೆದಿರುವುದು ಉತ್ತಮ ಕೃಷಿಗೆ ಮಾದರಿ. ಮಿಶ್ರಬೆಳೆ ಬೆಳೆಯಲು ಇವರು ಉಳಿದ ಕೃಷಿಕರಿಗೆ ಪ್ರೇರಣೆಯಾಗಲಿಸುಭಾಸ ಹೆಗಡೆ ಸಹಾಯಕ ತೋಟಗಾರಿಕೆ ಅಧಿಕಾರಿ ಯಲ್ಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.