ADVERTISEMENT

ಭಟ್ಕಳ: ಮೀನುಗಾರಿಕೆ: ಆರಂಭದಲ್ಲೇ ಮತ್ಸ್ಯಕ್ಷಾಮ

ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ಮೀನುಗಾರರು ಕಂಗಾಲು

ಮೋಹನ ನಾಯ್ಕ
Published 27 ಆಗಸ್ಟ್ 2021, 1:17 IST
Last Updated 27 ಆಗಸ್ಟ್ 2021, 1:17 IST
ಭಟ್ಕಳದ ಬಂದರಿನಲ್ಲಿ ಮೀನುಗಾರರು ದೋಣಿಯಿಂದ ಮೀನನ್ನು ದಡಕ್ಕೆ ತರುತ್ತಿರುವುದು
ಭಟ್ಕಳದ ಬಂದರಿನಲ್ಲಿ ಮೀನುಗಾರರು ದೋಣಿಯಿಂದ ಮೀನನ್ನು ದಡಕ್ಕೆ ತರುತ್ತಿರುವುದು   

ಭಟ್ಕಳ: ಸಮುದ್ರದ ಒಡಲನ್ನೇ ನಂಬಿಕೊಂಡು ಸಮುದ್ರಕ್ಕಿಳಿದ ಮೀನುಗಾರರ ನಿರೀಕ್ಷೆ ಈ ಬಾರಿ ಹುಸಿಯಾಗುತ್ತಿದೆ. ಎರಡು ತಿಂಗಳು ಮೀನುಗಾರಿಕೆ ನಿಷೇಧದ ನಂತರ ಮೀನುಗಾರಿಕೆಗೆ ತೆರಳಿದ ಮೀನುಗಾರರು, ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ದಡಕ್ಕೆ ಹಿಂದಿರುಗುತ್ತಿದ್ದಾರೆ.

ಮಳೆಗಾಲದ ನಿಷೇಧದ ನಂತರ ನಡೆಯುವ ಮೀನುಗಾರಿಕೆಯ ಆರಂಭಿಕ ತಿಂಗಳಲ್ಲಿ ಹೇರಳವಾಗಿ ಮೀನುಗಳು ಸಿಗುತ್ತಿದ್ದವು. ಮೀನುಗಾರರಿಗೆ ಉತ್ತಮ ಆದಾಯ ನೀಡುವ ಬಂಗಡೆ, ಪಾಂಫ್ರೆಟ್ ಹಾಗೂ ಆಂಜೆಲ್ ಮೀನುಗಳು ಈ ಸಮಯದಲ್ಲಿ ಬಲೆಗೆ ಬೀಳುತ್ತಿದ್ದವು. ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಪರ್ಸೀನ್ ದೋಣಿಗಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಈ ಸಮಯದಲ್ಲಿ ಸಿಗುವ ಮೀನುಗಳಿಂದ ಆರ್ಥಿಕ ಶಕ್ತಿ ಸಿಗುತ್ತಿತ್ತು. ಜೀವನ ನಿರ್ವಹಣೆ ಮತ್ತು ಸಾಲ ಮರುಪಾವತಿಗೆ ಇದನ್ನೇ ಮೀನುಗಾರರು ಅವಲಂಬಿಸಿದ್ದಾರೆ.

ಈ ಬಾರಿ ಪ್ರಾರಂಭದ ದಿನಗಳಲ್ಲೇ ಭಟ್ಕಳ ಬಂದರಿನಲ್ಲಿ ಮೀನಿನ ಕೊರತೆ ಕಾಣುತ್ತಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಚಮನ್ ಎಂಬ ಎಣ್ಣೆಗೆ ಉಪಯುಕ್ತವಾಗುವ ಮೀನುಗಳು ಬಲೆಗೆ ಹೇರಳವಾಗಿ ಬೀಳುತ್ತಿದೆ. ಇದರ ಮಾರಾಟದಿಂದ ಬರುವ ಆದಾಯವು ದೋಣಿ ನಿರ್ವಹಣೆ ವೆಚ್ಚಕ್ಕೆ ಕೂಡ ಸಾಕಾಗುವುದಿಲ್ಲ ಎನ್ನುತ್ತಾರೆ ಮೀನುಗಾರರು.

ADVERTISEMENT

ಈಗಾಗಲೇ ಕೊರೊನಾ ಸೋಂಕು ಭೀತಿ ಮತ್ತು ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಮೀನುಗಾರರು ಈ ಬಾರಿ ಮೀನುಗಾರಿಕೆಯ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ, ಈ ಬಾರಿ ಮೀನುಗಾರಿಕೆ ಆರಂಭದಲ್ಲಿಯೇ ಮತ್ಸ್ಯಕ್ಷಾಮ ತಲೆದೋರಿರುವುದು ಮೀನುಗಾರರನ್ನು ಚಿಂತೆಗೀಡು ಮಾಡಿದೆ.

ತಾಜಾ ಮೀನು ತಿನ್ನುವ ನಿರೀಕ್ಷೆಯಲ್ಲಿದ್ದ ಮಾಂಸಾಹಾರ ಪ್ರಿಯರಿಗೆ ಮತ್ಸ್ಯಕ್ಷಾಮ ಬೇಸರ ಮೂಡಿಸಿದೆ. ತಿಂಗಳುಗಳ ಕಾಲ ಸಂಸ್ಕರಿಸಿದ ಮೀನು ತಿನ್ನುತ್ತಿದ್ದ ಮೀನು ಖಾದ್ಯ ಪ್ರಿಯರು, ದೂರದ ಕೇರಳ ಹಾಗೂ ಮುಂಬೈನಿಂದ ಬರುವ ಸಂಸ್ಕರಿಸಿದ ಮೀನುಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.