ಅಂಕೋಲಾ ತಾಲ್ಲೂಕಿನ ಹಾರವಾಡ ಕಡಲತೀರಕ್ಕೆ ಬಂದು ಬಿದ್ದಿದ್ದ ಮೀನುಗಳನ್ನು ಆರಿಸಿಕೊಳ್ಳಲು ಜನರು ಮುಗಿಬಿದ್ದಿದ್ದರು.
ಕಾರವಾರ: ಅಂಕೋಲಾ ತಾಲ್ಲೂಕಿನ ಹಾರವಾಡ ಕಡಲತೀರದಲ್ಲಿ ಶನಿವಾರ ಮೀನು ಆರಿಸಿಕೊಳ್ಳಲು ಜನರು ಮುಗಿಬಿದ್ದರು. ರಾಶಿಗಟ್ಟಲೆ ಮೀನುಗಳು ಅಲೆಗಳೊಂದಿಗೆ ತೇಲಿಕೊಂಡು ಬಂದು ದಡ ಸೇರಿದ್ದವು.
ಮೀನು ಹಿಡಿಯಲು ಈ ಭಾಗದ ಸಾಂಪ್ರದಾಯಿಕ ಮೀನುಗಾರರು ಸಾಕಷ್ಟು ಹರಸಾಹಸಪಡಬೇಕಾಗುತ್ತದೆ. ತಾಸುಗಟ್ಟಲೆ ಕಾದು ಬಲೆ ಬೀಸಿದರೂ ಸಿಗದ ಮೀನುಗಳು ಗುಂಪುಗುಂಪಾಗಿ ದಡ ಸೇರಿದ್ದು ಮೀನುಗಾರರನ್ನೂ ಅಚ್ಚರಿಗೆ ತಳ್ಳಿತು.
ಅಲೆಗಳೊಂದಿಗೆ ದಡಕ್ಕೆ ಅಪ್ಪಳಿಸುತ್ತಿದ್ದ ಮೀನಿನ ರಾಶಿ ಕಂಡು ಕ್ಷಣಕಾಲ ಜನರು ಅಚ್ಚರಿಗೆ ಒಳಗಾದರು. ನೀರಿಗೆ ಸಾಗಲು ಪ್ರಯತ್ನಿಸುತ್ತಿದ್ದ ಮೀನುಗಳ ಗುಂಪನ್ನು ಕೆಲವರು ಸೆರೆಹಿಡಿದರು. ಮೀನು ರಾಶಿ ಕಡಲತೀರಕ್ಕೆ ಅಪ್ಪಳಿಸುತ್ತಿರುವ ಮಾಹಿತಿ ಹರಿದಾಡುತ್ತಿದ್ದಂತೆ ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಕಡಲತೀರಕ್ಕೆ ಬಂದು, ಮೀನು ಆರಿಸುವಲ್ಲಿ ನಿರತರಾದರು.
‘ಬಣಗು, ಇನ್ನಿತರ ಬಗೆಯ ಮೀನುಗಳ ರಾಶಿ ಹೀಗೆ ಕಡಲತೀರಕ್ಕೆ ಬಂದು ಬಿದ್ದಿದ್ದು ಈ ಭಾಗಕ್ಕೆ ಅಪರೂಪ’ ಎಂದು ಸ್ಥಳೀಯ ಸಾಯಿಕಿರಣ ಹೇಳಿದರು.
‘ಮೀನುಗಳು ತನ್ನಿಂತಾನೇ ದಡಕ್ಕೆ ಬಂದು ಸೇರಲು ಹವಾಮಾನ ಏರುಪೇರು ಕಾರಣವಲ್ಲ. ಡಾಲ್ಫಿನ್ ಅಥವಾ ತಿಮಿಂಗಿಲಗಳು ಮೀನಿನ ರಾಶಿ ಅಟ್ಟಿಸಿಕೊಂಡು ಬಂದಿರುವ ಸಾಧ್ಯತೆ ಇದೆ. ಅವುಗಳಿಂದ ತಪ್ಪಿಸಿಕೊಳ್ಳಲು ಚದುರಿದ ಮೀನುಗಳು ಹೀಗೆ ದಡಕ್ಕೆ ಬಂದು ಅಪ್ಪಳಿಸಿರಬಹುದು’ ಎಂದು ಇಲ್ಲಿನ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖಯಸ್ಥ ಶಿವಕುಮಾರ ಹರಗಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.