ADVERTISEMENT

ಶಿರಸಿ: ಫೆ.1ರಿಂದ ಫಲಪುಷ್ಪ ಪ್ರದರ್ಶನ, ಅನಾನಸ್–ಅಡಿಕೆ ಮಂಟಪ ವಿಶೇಷ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 12:16 IST
Last Updated 29 ಜನವರಿ 2020, 12:16 IST
ಫಲಪುಷ್ಪ ಪ್ರದರ್ಶನಕ್ಕೆ ಶೃಂಗಾರಗೊಂಡಿರುವ ತೋಟಗಾರಿಕಾ ಇಲಾಖೆ ಆವರಣ
ಫಲಪುಷ್ಪ ಪ್ರದರ್ಶನಕ್ಕೆ ಶೃಂಗಾರಗೊಂಡಿರುವ ತೋಟಗಾರಿಕಾ ಇಲಾಖೆ ಆವರಣ   

ಶಿರಸಿ: ಬಹುನಿರೀಕ್ಷಿತ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಕಿಸಾನ್‌ ಮೇಳವು ಫೆ.1ರಿಂದ 3ರವರೆಗೆ ಇಲ್ಲಿನ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯಲಿದೆ.

ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಆತ್ಮ ಯೋಜನೆ, ತೋಟಗಾರಿಕಾ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಬಂಧಿತ ಇಲಾಖೆಗಳು, ಜಿಲ್ಲಾ ಪಂಚಾಯ್ತಿ ಜಂಟಿ ಆಶ್ರಯದಲ್ಲಿ ನಡೆಯಲಿರುವ ಮೇಳದ ಕುರಿತು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಮಲ್ ಮಹಲ್, ಅನಾನಸ್-ಅಡಿಕೆ ಮಂಟಪ, ಚಂದ್ರಯಾನ-3, ಹೂವಿನಿಂದ ತಯಾರಿಸಿದ ಪಕ್ಷಿ ಸಂಕುಲ, ಹೂವಿನ ಜೋಡಣೆ, ಸಬ್ಜಿ ಸರ್ಕಲ್, ತರಕಾರಿ ಕೆತ್ತನೆ, ವರ್ಟಿಕಲ್ ಗಾರ್ಡನ್ ಮಾದರಿ, ಉದ್ಯಾನದ ಮಾದರಿ ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ. ರೈತರಿಗೆ ಮಾಹಿತಿ ನೀಡುವ, ಯಂತ್ರೋಪಕರಣ ಪರಿಚಯಿಸುವ 70ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ ಎಂದರು.

ADVERTISEMENT

ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಬೆಳೆದ ಹಣ್ಣು, ತರಕಾರಿ, ಹೂವಿನ ಬೆಳೆಗಳು, ಸಾಂಬಾರು ಬೆಳೆಗಳು, ಸಂಸ್ಕರಣಾ ಪದಾರ್ಥಗಳು ಪ್ರದರ್ಶನಗೊಳ್ಳಲಿವೆ. ಫೆ.1ರ ಬೆಳಿಗ್ಗೆ 8 ಗಂಟೆಗೆ ಪುಷ್ಪ ರಂಗೋಲಿ ಸ್ಪರ್ಧೆ ನಡೆಯಲಿದೆ. ಫೆ.2ರ ಬೆಳಿಗ್ಗೆ 10 ಗಂಟೆಗೆ ‘ಮನೆಯೊಳಿಗೆ ಮನೆಯಂಗಳದಲ್ಲಿ ಮಾನವನ ಆರೋಗ್ಯ’ ಕುರಿತ ಗೋಷ್ಠಿ ನಡೆಯಲಿದೆ. ಡಾ. ಪ್ರಸನ್ನ, ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿ ಭಟ್ಟ ಭಾಗವಹಿಸುವರು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ.ಹೆಗಡೆ, ಪ್ರಮುಖರಾದ ಶಿವಕುಮಾರ್, ಪ್ರಸನ್ನ, ಗಣೇಶ ಹೆಗಡೆ ಇದ್ದರು.

ಉದ್ಘಾಟನೆ: ಫೆ.1ರ ಬೆಳಿಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸುವರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿರುವರು. ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.