ADVERTISEMENT

ಶಿರಸಿ: ಮರೆಯಾದ ಫಲಪುಷ್ಪ ಪ್ರದರ್ಶನದ ಸೊಬಗು

ಕೋವಿಡ್ ಕಾರಣಕ್ಕೆ ಸತತ ಎರಡನೇ ವರ್ಷವೂ ಆಯೋಜನೆ ಸ್ಥಗಿತ

ಗಣಪತಿ ಹೆಗಡೆ
Published 3 ಫೆಬ್ರುವರಿ 2022, 19:30 IST
Last Updated 3 ಫೆಬ್ರುವರಿ 2022, 19:30 IST
ಶಿರಸಿಯಲ್ಲಿ ಈ ಹಿಂದೆ ನಡೆದಿದ್ದ ಫಲಪುಷ್ಪ ಪ್ರದರ್ಶನ ಮೇಳಕ್ಕೆ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಬೆಳೆಸಲಾಗಿದ್ದ ಹೂವಿನ ಗಿಡಗಳು ( ಸಂಗ್ರಹ ಚಿತ್ರ
ಶಿರಸಿಯಲ್ಲಿ ಈ ಹಿಂದೆ ನಡೆದಿದ್ದ ಫಲಪುಷ್ಪ ಪ್ರದರ್ಶನ ಮೇಳಕ್ಕೆ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಬೆಳೆಸಲಾಗಿದ್ದ ಹೂವಿನ ಗಿಡಗಳು ( ಸಂಗ್ರಹ ಚಿತ್ರ   

ಶಿರಸಿ: ಫೆಬ್ರವರಿ ಹೊತ್ತಿಗೆ ಫಲಪುಷ್ಪ ಪ್ರದರ್ಶನದ ಮೂಲಕ ಜನರನ್ನು ಸೆಳೆಯುತ್ತಿದ್ದ ನಗರದಲ್ಲಿ ಸತತ ಎರಡನೇ ವರ್ಷವೂ ಹೂವಿನ ಸೊಬಗು ಮಾಯವಾಗಿದೆ.

ಕೋವಿಡ್ ಬಾಧೆಯಿಂದ ಸತತ 12 ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದಿದ್ದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸದಿರಲು ತೋಟಗಾರಿಕಾ ಇಲಾಖೆ ಈ ಬಾರಿಯೂ ನಿರ್ಧರಿಸಿದೆ. ಕಳೆದ ವರ್ಷವೂ ಪ್ರದರ್ಶನ ನಡೆದಿರಲಿಲ್ಲ. ಹೀಗಾಗಿ ಸಾರ್ವಜನಿಕರು, ರೈತರು ಬೇಸರದಲ್ಲಿದ್ದಾರೆ.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿಯೇ ಪ್ರತಿ ವರ್ಷ ಮೂರು ದಿನಗಳ ಕಾಲ ಪುಷ್ಪಗಳ ಅಲಂಕಾರ, ತರಕಾರಿ, ತೋಟಗಾರಿಕಾ ಬೆಳೆಗಳ ವೈಭವವನ್ನು ಈ ಪ್ರದರ್ಶನ ಮೆರೆಸುತ್ತಿತ್ತು. ರೈತರನ್ನೂ ಪುಷ್ಪ ಕೃಷಿಯ ಕಡೆಗೆ ಆಕರ್ಷಿಸುವ ಪ್ರಯತ್ನ ಮೇಳದ ಮೂಲಕ ನಡೆಯುತ್ತಿತ್ತು.

ADVERTISEMENT

ಸ್ಥಳೀಯ ರೈತರು ಬೆಳೆದ ವಿಶಿಷ್ಟ ಉತ್ಪನ್ನಗಳ ಪ್ರದರ್ಶನದ ಜತೆಗೆ ಜಿಲ್ಲೆಯ ವಿವಿಧೆಡೆಯ ರೈತರಿಗೂ ಇಲ್ಲಿ ಅವಕಾಶ ದೊರೆಯುತ್ತಿತ್ತು. ವೀಕ್ಷಣೆಗೆ ಹೊರ ಜಿಲ್ಲೆಗಳಿಂದಲೂ ನೂರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದರು.

‘ಕೋವಿಡ್ ಕಾರಣಕ್ಕೆ ಮೇಳ ಆಯೋಜಿಸದಿರಲು ನಿರ್ಧರಿಸಲಾಗಿದೆ. ಫೆಬ್ರವರಿ ಹೊತ್ತಿಗೆ ಮೇಳ ಆಯೋಜನೆಗೊಳ್ಳಬೇಕೆಂದರೆ ಅಕ್ಟೋಬರ್ ಹೊತ್ತಿಗೆ ತಯಾರಿ ಆರಂಭಿಸಬೇಕಿತ್ತು. ಹೂವು, ತರಕಾರಿ ಗಿಡಗಳನ್ನು ಆಗಲೇ ನೆಟ್ಟು, ಬೆಳೆಸುವ ಕೆಲಸ ನಡೆಯುತ್ತಿತ್ತು. ಕೋವಿಡ್‍ ಹಾವಳಿಯ ಪರಿಸ್ಥಿತಿ ಗಮನಿಸಿ ನಿರ್ಣಯಿಸಬೇಕಿದ್ದರಿಂದ ಮೇಳ ಕೈಬಿಟ್ಟಿದ್ದೇವೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಫಲಪುಷ್ಪ ಪ್ರದರ್ಶನ ಕೇವಲ ಮನೋರಂಜನೆಗೆ ಸೀಮಿತವಾಗಿರಲಿಲ್ಲ. ರೈತರನ್ನು ಹೊಸಬಗೆಯ ಕೃಷಿ ಚಟುವಟಿಕೆಗೆ ತೆರೆದುಕೊಳ್ಳಲು ಪ್ರೇರೇಪಣೆ ನೀಡುವ ವೇದಿಕೆಯೂ ಇದಾಗಿತ್ತು. ಕೋವಿಡ್ ನಡುವೆಯೂ ಸರ್ಕಾರ ಬೇರೆ ಬೇರೆ ಉತ್ಸವಗಳ ಆಯೋಜನೆಗೆ ಪ್ರೋತ್ಸಾಹ ನೀಡುತ್ತಿದೆ. ರೈತಪರವಾಗಿರುವ ಫಲಪುಷ್ಪ ಪ್ರದರ್ಶನಕ್ಕೂ ಆದ್ಯತೆ ನೀಡಿದರೆ ಅನುಕೂಲವಿತ್ತು’ ಎಂದು ರೈತ ಭಾಸ್ಕರ ಹೆಗಡೆ ಹೇಳಿದರು.

‘ಪ್ರದರ್ಶನದಲ್ಲಿ ವಿಭಿನ್ನ ಬಗೆಯ ಹೂವುಗಳು, ಹಣ್ಣು, ತರಕಾರಿಗಳಿಂದ ತಯಾರಾದ ಕಲಾಕೃತಿ ನೋಡುವುದನ್ನು ತಪ್ಪಿಸುತ್ತಲೇ ಇರಲಿಲ್ಲ. ಎರಡು ವರ್ಷದಿಂದ ಇಂತಹ ಜನಾಕರ್ಷಕ ಕಾರ್ಯಕ್ರಮ ನಡೆದಿಲ್ಲ ಎಂಬ ಬೇಸರವಿದೆ’ ಎಂದು ಗಾಂಧಿನಗರದ ನಯನಾ ಪಾಠಣಕರ ಬೇಸರಿಸಿದರು.

**

ಕೋವಿಡ್ ಪರಿಸ್ಥಿತಿ ಗಮನಿಸಿ ಮೇಳಗಳ ಆಯೋಜನೆಗೆ ನಿರ್ಣಯವಾಗಬೇಕಾಗುತ್ತದೆ. ಪೂರ್ವಸಿದ್ಧತೆಗೆ ದೀರ್ಘ ಸಮಯವೂ ಬೇಕಾಗುತ್ತದೆ. ಹೀಗಾಗಿ ಈ ಬಾರಿ ಮೇಳ ಆಯೋಜನೆ ಸಾಧ್ಯವಾಗಿಲ್ಲ.
-ಬಿ.ಪಿ.ಸತೀಶ್,ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.