
ಕುಮಟಾ: `ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿರುವ ಇಂದಿನ ದಿನದಲ್ಲಿ ಆಹಾರ ಉದ್ಯಮದಲ್ಲಿ ಶುಚಿ, ರುಚಿ ಇಲ್ಲದಿದ್ದರೆ ಅನಾರೋಗ್ಯ ಹರಡಿ ಅದು ವಿಫಲವಾಗುವ ಎಲ್ಲ ಸಾಧ್ಯತೆಗಳು ಇವೆ’ ಎಂದು ಟಿಎಚ್ಒ ಡಾ.ಅಜ್ಞಾ ನಾಯಕ ಹೇಳಿದರು.
ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹಾಗೂ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರ ವತಿಯಿಂದ ಪಟ್ಟಣದ ಆಹಾರೋದ್ಯಮಿಗಳಿಗೆ ಶುಕ್ರವಾರ ಹಮ್ಮಿಕೊಂಡ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾನಾಡಿದರು.
` ಆಹಾರ ಉದ್ಯಮದಲ್ಲಿ ಅಡುಗೆ ಮಾಡುವವರ ವೈಯಕ್ತಿಕ ಶುಚಿತ್ವ ಎಲ್ಲಕ್ಕಿಂತ ಮುಖ್ಯ. ಗಾಳಿ, ಬೆಳಕು ಇರುವ ಜಾಗವನ್ನು ಅಡುಗೆ ಮನೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ. ಅಡುಗೆ ನಂತರ ಅಡುಗೆ ಕೋಣೆ ಶುಚಿಯಾಗಿಡದಿದ್ದರೆ ರಾತ್ರಿ ಹೊತ್ತು ಇಲಿ, ಜಿರಲೆ ಬರಬಹುದು. ಅಡುಗೆ ಬಳಸುವ ಪಾತ್ರೆ, ಗ್ಯಾಸ್ ಒಲೆ, ಮಿಕ್ಸರ್, ಗ್ರೈಂಡರ್ ಶುಚಿಯಾಗಿರದಿದ್ದರೆ ಮುಂದೆ ಅವೇ ರೋಗ ಹರಡುವ ಸಾಧನವಾಗುತ್ತವೆ’ ಎಂದರು.
ಸಿದ್ಧಪಡಿಸಿದ ಆಹಾರ ಪದಾರ್ಥ ಸರಿಯಾಗಿ ಮುಚ್ಚಿಡದಿದ್ದರೆ ದೂಳು, ಕೀಟಾಣುಗಳ ಅಪಾಯವೂ ತಪ್ಪಿದ್ದಲ್ಲ. ಶುಚಿತ್ವಕ್ಕೆ ಮಹತ್ವ ಕೊಟ್ಟು ಬರುವ ಗ್ರಾಹಕರ ಸಂಖ್ಯೆ ಹೆಚ್ಚು’ ಎಂದು ತಿಳಿಸಿದರು.
ಆಹಾರ ಸುರಕ್ಷತಾ ನಿವೃತ್ತ ಅಧಿಕಾರಿ ಅರುಣ ಭಟ್ಟ ಕಾಶಿ, ‘ವಾರ್ಷಿಕ ₹12.50 ಲಕ್ಷಕ್ಕಿಂತ ಹೆಚ್ಚಿನ ಆಹಾರೋದ್ಯಮ ವ್ಯವಹಾರ ನಡೆಸುವವರಿಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅಗತ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರ್ ಸತೀಶ ಗೌಡ, ‘ಬೀದಿ ಬದಿ ತಿಂಡಿ ತಯಾರಿಸಿ ಮಾರುವವರು ದಿನಪತ್ರಿಕೆಗಳಲ್ಲಿ ಅವುಗಳನ್ನು ಸುತ್ತಿಕೊಡುವುದರಿಂದ ಅಪಾಯಕಾರಿ ಸೀಸದ ಅಂಶ ಮನುಷ್ಯರ ದೇಹ ಸೇರುತ್ತದೆ. ಶುಚಿತ್ವದ ಕೊರತೆಯಿಂದ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ ಅನೇಕ ಹೋಟೆಲ್‌ಗಳ ಮೇಲೂ ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ' ಎಂದು ತಿಳಿಸಿದರು.
ಗ್ಲೋಬಲ್ ಇನಸ್ಟಿಟ್ಯೂಟ್ ಮತ್ತು ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ, ಜಿಲ್ಲಾ ಸಂಯೋಜಕ ಮನೋಜ ನಾಯಕ, ತರಬೇತುದಾರ ಯಶವಂತ ಅರುಣ, ಕಾರ್ಯನಿರತ ಪತ್ರಕರ್ತರ ಸಂಘದ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಅನ್ಸಾರ್ ಶೇಖ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.