ADVERTISEMENT

ಗೋಕರ್ಣ: ಕ್ಷೀಣಿಸುತ್ತಿದೆ ವಿದೇಶಿ ಪ್ರವಾಸಿಗರ ಸಂಖ್ಯೆ

ಸಮೀಪಿಸಿದ ವರ್ಷಾಂತ್ಯ: ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಹೆಚ್ಚಿದ ಪ್ರವಾಸಿಗರ ಕಲರವ

ರವಿ ಸೂರಿ
Published 27 ನವೆಂಬರ್ 2023, 5:05 IST
Last Updated 27 ನವೆಂಬರ್ 2023, 5:05 IST
ಗೋಕರ್ಣ ಸಮೀಪದ ಪ್ಯಾರಾಡೈಸ್ ಬೀಚಿನಲ್ಲಿ ವಿದೇಶಿಗರು
ಗೋಕರ್ಣ ಸಮೀಪದ ಪ್ಯಾರಾಡೈಸ್ ಬೀಚಿನಲ್ಲಿ ವಿದೇಶಿಗರು   

ಗೋಕರ್ಣ: ವರ್ಷಾಂತ್ಯ ಸಮೀಪಿಸಿದ್ದು ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿವಿಧ ಕಾರಣಗಳಿಂದ ಕಳೆದೆರಡು ವರ್ಷದಿಂದ ಅವರ ಸಂಖ್ಯೆ ಇಳಿಮುಖಗೊಳ್ಳುತ್ತಿರುವುದು ಆತಿಥ್ಯ ವಲಯವನ್ನು ಕಂಗೆಡಿಸಿದೆ.

ಶಿವನ ನಾಡಿಗೆ ವಿದೇಶಿಗರು ಮನಸೋತಿದ್ದು, ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ಪೇರೇಪಿಸುತ್ತಿದೆ. ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಮೇನ್ ಬೀಚ್‌ಗಳು ವಿದೇಶಿಗರ ಆಕರ್ಷಣೆಯ ಕೇಂದ್ರವಾಗಿದೆ.

ಗೋಕರ್ಣಕ್ಕೆ ಹೆಚ್ಚಿನದ್ದಾಗಿ ಯೂರೋಪ್ ದೇಶಗಳಾದ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರೀಯಾ ಪ್ರವಾಸಿಗರು ಹಾಗೂ ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬರುತ್ತಿದ್ದಾರೆ. 2-3 ದಶಕಗಳಿಂದ ಸತತವಾಗಿ ಬರುತ್ತಿರುವ ಪ್ರವಾಸಿಗರೂ ಇದ್ದಾರೆ. ಈಚೆಗೆ ರಷ್ಯನ್ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋಕರ್ಣಕ್ಕೆ ಬರುತ್ತಿದ್ದಾರೆ. ಇಲ್ಲಿಯ ಜನರೊಂದಿಗೆ ಬೆರೆತು, ಇಲ್ಲಿಯವರ ಹಾಗೇ ಉಡುಗೆ ತೊಡುಗೆ ರೂಢಿಸಿಕೊಂಡ ಹಲವು ವಿದೇಶಿಗರು ಇದ್ದಾರೆ. ನೈಸರ್ಗಿಕವಾಗಿ ಬರುವ ರಾಮತೀರ್ಥದಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದು ಹೆಚ್ಚಿನವರು ತಮ್ಮ ಪ್ರತಿ ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ.

ADVERTISEMENT

‘ವಿದೇಶಿಗರ ಪಾಲಿಗೆ ಗೋಕರ್ಣ ಆಕರ್ಷಣೆ ಕಳೆದುಕೊಳ್ಳುತ್ತಲಿದೆ. ಸ್ವದೇಶಿ ಪ್ರವಾಸಿಗರ ಭರಾಟೆಗೆ ವಿದೇಶಿಗರು ಕಳೆದು ಹೋಗುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಕಡಲತೀರಗಳಲ್ಲಿ ಮುಂಚಿನಂತೆ ಸಿಗುವ ಸ್ವಚ್ಛಂದ ವಾತಾವರಣವೂ ಅವರಿಗೆ ಮರೀಚಿಕೆಯಾಗಿದೆ. ಅಂಗಡಿಕಾರರು, ವಸತಿ ಗೃಹಗಳಲ್ಲಿ ವಿದೇಶಿ ಪ್ರವಾಸಿಗರಿಗಿಂತ ಸ್ವದೇಶಿ ಪ್ರವಾಸಿಗರಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಿರುವುದೂ ಒಂದು ಕಾರಣವಾಗಿದೆ. ರೂಮಿನ ಬಾಡಿಗೆ ದರ ಏರುತ್ತಿರುವೂದೂ ಅವರಿಗೆ ಹೊರೆಯಾಗುತ್ತಿದೆ. ವಿದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯೂ ಪ್ರತಿ ವರ್ಷ ಬರುವ ವಿದೇಶಿಗರನ್ನು ಚಿಂತೆಗೀಡು ಮಾಡಿದೆ’ ಎನ್ನುತ್ತಾರೆ ಇಲ್ಲಿನ ಹೋಮ್‍ಸ್ಟೇಯೊಂದರ ಮಾಲೀಕರು.

ಕಳೆದೆರಡು ವರ್ಷಗಳಿಂದ ಕೆಲವು ದೇಶದ ಪ್ರಜೆಗಳಿಗೆ ವೀಸಾ ಸಮಸ್ಯೆ ತಲೆದೊರುತ್ತಿದೆ. ಮೊದಲು ಆರು ತಿಂಗಳು ಅಥವಾ ವರ್ಷದ ತನಕ ವೀಸಾ ನೀಡುತ್ತಿದ್ದರು. ಆದರೆ ಈಗ ಕೇವಲ ಮೂರು ತಿಂಗಳ ಪ್ರವಾಸಿ ವೀಸಾ ನೀಡಲಾಗುತ್ತಿದೆ. ವ್ಯಾಪಾರಿ ವೀಸಾ ಮಾತ್ರ ಒಂದು ವರ್ಷದ ಮಟ್ಟಿಗೆ ನೀಡಲಾಗುತ್ತಿದೆ. ವ್ಯಾಪಾರಿ ವೀಸಾ ಪ್ರವಾಸಿಗರಿಗೆ ಸ್ವಲ್ಪ ದುಬಾರಿಯಾಗಲಿದೆ’ ಎಂದು ವಿದೇಶಿ ಪ್ರವಾಸಿಗರು ಹೇಳುತ್ತಾರೆ.

ಭಾರತಕ್ಕೆ ಬರುವುದು ಎಂದರೆ ತುಂಬಾ ಸಂತೋಷವಾಗುತ್ತದೆ. ಆದರೆ ಕೇವಲ ಮೂರು ತಿಂಗಳ ವಿಸಾ ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ

-ಶೋಲಾ ಸ್ಕ್ರೆಂಡೀಸ್ ಜರ್ಮನ್ ಮಹಿಳೆ.

ಸರ್ಕಾರ ಪ್ರವಾಸಿಗರ ಅನುಕೂಲಕ್ಕಾಗಿ ಮಾಹಿತಿ ಕೇಂದ್ರ ಸ್ಥಾಪಿಸಿಬೇಕು. ಇದರಿಂದ ವಿದೇಶಿಗರೂ ಸೇರಿದಂತೆ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಲಭಿಸಿ ಸಹಾಯವಾಗಲಿದೆ

-ಶ್ರೀರಾಮ ಸುರೆ ಸಾಮಾಜಿಕ ಕಾರ್ಯಕರ್ತ

ಆರ್ಥಿಕ ಹಿಂಜರಿತವೂ ಕಾರಣ

‘ಆರ್ಥಿಕ ಹಿಂಜರಿತದಿಂದ ಇನ್ನೂ ಮೇಲೇಳದ ಯುರೋಪಿನ ಕೆಲವು ದೇಶಗಳು ತೀವ್ರ ಸಮಸ್ಯೆಯಿಂದ ಬಳಲುತ್ತಿವೆ. ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನಾಗರಿಕರು ಅನವಶ್ಯಕವಾಗಿ ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋಗಬಾರದು ದೇಶದಲ್ಲಿಯೇ ಇದ್ದು ಕೆಲಸ ನಿರ್ವಹಿಸಬೇಕು. ಬೇರೆ ದೇಶಕ್ಕೆ ಹೋಗಿ ಕಾಲಕಳೆಯುವದಾದರೆ ಸರ್ಕಾರದಿಂದ ನೀಡುವ ಪಿಂಚಣಿಯನ್ನು ನಿಲ್ಲಿಸುವ ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಕಳೆದ ಮೂರು ದಶಕಗಳಿಂದ ಗೋಕರ್ಣಕ್ಕೆ ಬರುತ್ತಿದ್ದ ಜರ್ಮನ್ ಪ್ರಜೆ ಡೀಟ್ ಥ್ರಿಸ್ಕೊಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.