ADVERTISEMENT

ಕಾರವಾರ: ಅದ್ದೂರಿ ಕದಂಬೋತ್ಸವಕ್ಕೆ ಸಿದ್ಧತೆ- ಬಾರದ ಅನುದಾನ

ಕಳೆದ ಬಾರಿ ಆಚರಣೆಯ ₹19.20 ಲಕ್ಷ ಬಿಡುಗಡೆಗೆ ಬಾಕಿ

ಗಣಪತಿ ಹೆಗಡೆ
Published 11 ಫೆಬ್ರುವರಿ 2023, 19:31 IST
Last Updated 11 ಫೆಬ್ರುವರಿ 2023, 19:31 IST
ಬನವಾಸಿಯಲ್ಲಿ ಕದಂಬೋತ್ಸವ ನಡೆಯಬೇಕಿರುವ ಮಯೂರವರ್ಮ ವೇದಿಕೆಯ ಸ್ಥಿತಿ ಕೆಲ ದಿನಗಳ ಹಿಂದೆ ಈ ರೀತಿ ಇತ್ತು
ಬನವಾಸಿಯಲ್ಲಿ ಕದಂಬೋತ್ಸವ ನಡೆಯಬೇಕಿರುವ ಮಯೂರವರ್ಮ ವೇದಿಕೆಯ ಸ್ಥಿತಿ ಕೆಲ ದಿನಗಳ ಹಿಂದೆ ಈ ರೀತಿ ಇತ್ತು   

ಕಾರವಾರ: ಮೂರು ವರ್ಷಗಳ ಬಳಿಕ ಪಂಪನ ನಾಡು ಬನವಾಸಿಯಲ್ಲಿ ಅದ್ದೂರಿ ಕದಂಬೋತ್ಸವಕ್ಕೆ ಸಿದ್ಧತೆ ನಡೆದಿದೆ. ಆದರೆ, ಈವರೆಗೂ ಉತ್ಸವಕ್ಕೆ ನಿಗದಿತ ಅನುದಾನ ಬಿಡುಗಡೆಯಾಗದಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ಕನ್ನಡಿಗರ ಪ್ರಥಮ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಬನವಾಸಿಯಲ್ಲಿ ಕದಂಬೋತ್ಸವ ಆಚರಣೆ ಹಲವು ವರ್ಷದಿಂದ ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅನುದಾನದ ಜತೆಗೆ ಸ್ಥಳೀಯ ಸಂಪನ್ಮೂಲ ಕ್ರೋಢಿಕರಿಸಿ ಉತ್ಸವ ಆಚರಣೆ ನಡೆಸಲಾಗುತ್ತಿತ್ತು.

2020ರಲ್ಲಿ ಉತ್ಸವ ನಡೆದ ಬಳಿಕ ಕೋವಿಡ್, ಮಂಗನ ಕಾಯಿಲೆ ಕಾರಣಕ್ಕೆ ಉತ್ಸವ ನಡೆದಿರಲಿಲ್ಲ. ಈ ಬಾರಿ ಉತ್ಸವ ಆಯೋಜನೆಗೆ ಸ್ಥಳೀಯ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಆಸಕ್ತಿ ತೋರಿದ್ದಾರೆ. ಫೆ.25 ಮತ್ತು 26 ರಂದು ಉತ್ಸವ ಆಯೋಜಿಸಲು ದಿನ ನಿಗದಿಪಡಿಸಲಾಗಿದೆ.

ADVERTISEMENT

ಆದರೆ ಉತ್ಸವಕ್ಕೆ ನಿಗದಿತ ಪ್ರಮಾಣದ ಅನುದಾನ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದಿಷ್ಟ ಆದೇಶ ಹೊರಡಿಸಿಲ್ಲ. ಪ್ರವಾಸೋದ್ಯಮ ಇಲಾಖೆ ₹5 ಲಕ್ಷ ಅನುದಾನವನ್ನು ಮೊದಲ ಹಂತದಲ್ಲಿ ನೀಡುವುದಾಗಿ ಆದೇಶ ಹೊರಡಿಸಿದೆ.

‘ಕದಂಬೋತ್ಸವ ಅದ್ಧೂರಿಯಾಗಿ ಆಯೋಜನೆ ಮಾಡಲು ಕನಿಷ್ಠ ₹1 ರಿಂದ 1.25 ಕೋಟಿ ಅಗತ್ಯವಿದೆ. ಸರ್ಕಾರ ಉತ್ಸವ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ. ನಿಗದಿತ ಪ್ರಮಾಣದ ಅನುದಾನ ನೀಡುವ ಬಗ್ಗೆ ಯಾವುದೇ ಸೂಚನೆ ಇಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅನುದಾನ ಬಾಕಿ:

2020ರಲ್ಲಿ ನಡೆದ ಕದಂಬೋತ್ಸವದಲ್ಲಿ ಶಾಮಿಯಾನ, ಕುರ್ಚಿ ಹಾಕಿದ್ದ ಗುತ್ತಿಗೆದಾರರೂ ಸೇರಿದಂತೆ ವಿವಿಧ ವ್ಯವಸ್ಥೆ ಕಲ್ಪಿಸಿದ್ದವರಿಗೆ ₹19.20 ಲಕ್ಷ ಬಿಲ್ ಪಾವತಿಸುವುದು ಇನ್ನೂ ಬಾಕಿ ಇದೆ. ವ್ಯವಸ್ಥೆಯ ಜವಾಬ್ದಾರಿ ಪಡೆದಿದ್ದವರು ಬಾಕಿ ಬಿಲ್ ಪಾವತಿಸುವಂತೆ ಶಿರಸಿ ಉಪವಿಭಾಗಾಧಿಕಾರಿ ಕಚೇರಿ, ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಟ ನಡೆಸುತ್ತಿದ್ದಾರೆ.

‘ಕದಂಬೋತ್ಸವದ ವೇಳೆ ಶಾಮಿಯಾನ, ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಸರ್ಕಾರ ನೀಡಬೇಕಿರುವ ₹9.20 ಲಕ್ಷ ಮೊತ್ತವನ್ನು ಈವರೆಗೂ ನೀಡಿಲ್ಲ. ಅಗತ್ಯ ದಾಖಲೆಗಳನ್ನು ನೀಡಿದ ಬಳಿಕವೂ ಅನುದಾನ ನೀಡದೆ ಸತಾಯಿಸಲಾಗುತ್ತಿದೆ’ ಎಂದು ಶಾಮಿಯಾನ ಗುತ್ತಿಗೆದಾರ ಪ್ರಶಾಂತ್ ಸಾವಂತ್ ಆರೋಪಿಸಿದರು.

ಕದಂಬೋತ್ಸವ ಆಚರಣೆಗೆ ಅನುದಾನ ನೀಡುವುದಾಗಿ ಸರ್ಕಾರ ತಿಳಿಸಿದೆ. ಆಚರಣೆ ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ.

ರಾಜು ಮೊಗವೀರ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.