ಕಾರವಾರ: ಸಾಂಪ್ರದಾಯಿಕ ಡೋಲು ವಾದನ, ಭಜನೆ ತಂಡದ ಜತೆಗೆ ಒಂದಷ್ಟು ಜನ ಹೆಜ್ಜೆ ಹಾಕಿದರೆ, ಇನ್ನೊಂದಿಷ್ಟು ಜನ ಡಿಜೆ ಸದ್ದಿಗೆ ಕುಣಿಯುತ್ತ ಸಾಗಿದರು. ಹೀಗೆ ಅದ್ದೂರಿ, ಸಡಗರದೊಂದಿಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
11 ದಿನಗಳ ಕಾಲ ಪ್ರತಿಷ್ಠಾಪಿಸಿ, ಪೂಜಿಸಲ್ಪಟ್ಟ ಗಣೇಶ ಮೂರ್ತಿಗಳಿಗೆ ವಿಜೃಂಭಣೆಯ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು. ಶನಿವಾರ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಭ್ರಮ ಕಳೆಗಟ್ಟಿತ್ತು. ನಗರ ವ್ಯಾಪ್ತಿಯಲ್ಲೇ ಸುಮಾರು 12 ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.
ಡಿಸ್ಕ್ ಜಾಕಿ–ಡಿಜಿಟಲ್ ಜಾಕಿ (ಡಿಜೆ) ಬಳಸದಂತೆ ಕಟ್ಟುನಿಟ್ಟಿನ ಆದೇಶವಿದ್ದರೂ ಲೆಕ್ಕಿಸದೆ ಕೆಲವು ಗಣೇಶೋತ್ಸವ ಸಮಿತಿಯವರು ಬಳಕೆ ಮಾಡಿದರು. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಕಿವಿಗಡಚಿಕ್ಕುವ ಸದ್ದು ಕಡಿಮೆ ಆಗಿತ್ತು. ಡಿಜೆಗಳ ಬೇಸ್ ಮತ್ತು ಲೈನರ್ ಪ್ರಮಾಣ ಇಳಿಕೆಯಾಗಿತ್ತು. ಅಲ್ಲಲ್ಲಿ ಪಟಾಕಿ ಸಿಡಿಸುತ್ತ ಸಂಭ್ರಮಿಸಲಾಯಿತು.
ಡಿಜೆಗಳ ಮೂಲಕ ಹೊರಹೊಮ್ಮುತ್ತಿದ್ದ ಕನ್ನಡ, ಮರಾಠಿ, ಹಿಂದಿ ಹಾಡುಗಳ ಜೊತೆಗೆ ಆಗಾಗ ನುಸುಳುತ್ತಿದ್ದ ಪಾಪ್ ಹಾಡುಗಳಿಗೆ ಯುವಕರು ಜೋಶ್‌ನೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಡಿಜೆಗಳ ಜೊತೆಗೆ ಚಿಕ್ಕ ಮಕ್ಕಳೂ ಹೆಜ್ಜೆ ಹಾಕುತ್ತ ಸಾಗುತ್ತಿರುವುದು ಜನರನ್ನು ಖುಷಿಗೊಳಿಸಿತಾದರೂ ಆತಂಕಕ್ಕೂ ಕಾರಣವಾಯಿತು.
ಕೆ.ಎಚ್.ಬಿ ಕಾಲೊನಿಯ ಗಣೇಶೋತ್ಸವ ಸಮಿತಿಯು ಚಂಡೆ ವಾದನ, ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಗೆ ಮೆರಗು ನೀಡಿತ್ತು. ಮಾರುತಿ ಗಲ್ಲಿಯ ಉತ್ಸವ ಸಮಿತಿಯವರು ಪ್ರತಿ ವರ್ಷದಂತೆ ಸಾಂಪ್ರದಾಯಿಕ ಡೋಲಕ್ ತಂಡ ಕರೆಯಿಸಿದ್ದು, ಭಜನೆ ಹಾಡುತ್ತ ಸಂಪ್ರದಾಯಬದ್ಧವಾಗಿ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಸಿದರು.
ನಂದನಗದ್ದಾ, ಕಾಜುಬಾಗ, ಶಿರವಾಡ, ಸುಭಾಷ್ ವೃತ್ತ, ಹರಿದೇವನಗರ, ಹಬ್ಬುವಾಡಾದ ಗಣೇಶಮೂರ್ತಿಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದವು. ವಿಸರ್ಜನಾ ಮೆರವಣಿಗೆ ಕಣ್ತುಂಬಿಕೊಳ್ಳಲು ಜನರು ಸವಿತಾ ವೃತ್ತ, ಸುಭಾಷ್ ವೃತ್ತ, ಬಿಲ್ಟ್ ವೃತ್ತದ ಬಳಿ ತಂಡೋಪತಂಡವಾಗಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.