ADVERTISEMENT

ಗಣೇಶಪಾಲ್ ಸೇತುವೆ ಕಾಮಗಾರಿಗೆ ಮೂರು ವರ್ಷ: ಮುಗಿದದ್ದು ಶೇ 30ರಷ್ಟು!

ರಾಜೇಂದ್ರ ಹೆಗಡೆ
Published 27 ಅಕ್ಟೋಬರ್ 2025, 2:42 IST
Last Updated 27 ಅಕ್ಟೋಬರ್ 2025, 2:42 IST
ಶಿರಸಿ ತಾಲ್ಲೂಕಿನ ಗಣೇಶಪಾಲ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ 
ಶಿರಸಿ ತಾಲ್ಲೂಕಿನ ಗಣೇಶಪಾಲ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ    

ಶಿರಸಿ: ತಾಲ್ಲೂಕಿನ ಗಣೇಶಪಾಲ್ ಸೇತುವೆ ನಿರ್ಮಾಣ ಕಾಮಗಾರಿಯು ಕೇವಲ ಅರೆಬರೆ ಕಂಬ ನಿರ್ಮಾಣದವರೆಗಷ್ಟೇ ನಡೆದಿದೆ. 11 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಯು ಮೂರು ವರ್ಷ ಕಳೆದರೂ ಶೇ 30ರಷ್ಟು ಮಾತ್ರ ನಡೆದಿದೆ.

ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿರಸಿಯ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಸೇತುವೆ ಕಾಮಗಾರಿಯು ಎರಡೂ ತಾಲ್ಲೂಕಿನ ಸಾರ್ವಜನಿಕರ ಹಲವು ದಶಕದ ಬೇಡಿಕೆಯಾಗಿತ್ತು.

ಈ ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಕೆಆರ್‌ಡಿಸಿಎಲ್ ಮೂಲಕ ₹12 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2023ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು.

ADVERTISEMENT

‘ಮೂರು ವರ್ಷಗಳಲ್ಲಿ ಸೇತುವೆಯ ಕೆಲವು ಕಂಬಗಳನ್ನು ನಿರ್ಮಿಸಲಾಗಿದ್ದು, ಉಳಿದ ಕಂಬಗಳ ನಿರ್ಮಾಣ ಕಾಮಗಾರಿ ಆಗಬೇಕಿದೆ. ಮಳೆಗಾಲದ ಕಾರಣಕ್ಕೆ ಮೇ ತಿಂಗಳ ಅಂತ್ಯದಿಂದ ಈವರೆಗೆ ಯಾವುದೇ ಕಾಮಗಾರಿ ನಡೆಸಿಲ್ಲ. ಹೊಳೆ ತಟದ ಬಳಿ ನೀರು ಕಡಿಮೆ ಇರುವ ಕಡೆ ಸಧ್ಯ ಗ್ರಿಲ್ಲಿಂಗ್ ಕಾಮಗಾರಿ ನಡೆದಿದೆ. ಬೇಸಿಗೆ ವೇಳೆ ವಿವಿಧ ಕಾರಣ ನೀಡಿ ಗುತ್ತಿಗೆ ಕಂಪನಿ ವಿಳಂಬ ಮಾಡುತ್ತಿದೆ’ ಎಂಬುದು ಸ್ಥಳೀಯರ ಆರೋಪ.

‘ಈ ಹಿಂದೆ ಕೂಡ ಅನುದಾನದ ಕೊರತೆ, ನೀಲನಕ್ಷೆ ತಯಾರಿಸಿ ಗುತ್ತಿಗೆ ಕಂಪನಿಗೆ ಹಸ್ತಾಂತರ ವಿಳಂಬ, ಜಾಗ ಗುರುತಿಸುವಿಕೆಯಲ್ಲಿ ಗೊಂದಲ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಮಗಾರಿ ಆರಂಭಿಸಲು ವಿಳಂಬವಾಗಿತ್ತು. ಇವೆಲ್ಲ ಗೊಂದಲಗಳು ನಿವಾರಣೆಯಾಗಿ ಗುತ್ತಿಗೆ ಕಂಪೆನಿಯು ಕಾಮಗಾರಿ ಆರಂಭಿಸಿತ್ತಾದರೂ ನಡುನಡುವೆ ಕಾರಣವಿಲ್ಲದೇ ಕಾಮಗಾರಿ ಸ್ಥಗಿತ ಮಾಡುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಸಮಂಜಸ ಉತ್ತರ ಬರುತ್ತಿಲ್ಲ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಸೇತುವೆ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರರ ವೇಗ ನೀಡಬೇಕು. ಇಲ್ಲವಾದರೆ ಸೇತುವೆ ಬಳಕೆ ಸಾರ್ವಜನಿಕರಿಗೆ ಕನಸಾಗಿಯೇ ಉಳಿಯಲಿದೆ
ಪ್ರವೀಣ ಹೆಗಡೆ ಸಾಮಾಜಿಕ ಕಾರ್ಯಕರ್ತ

ಪ್ರಮುಖ ಸಂಪರ್ಕ ಕೊಂಡಿ

ಯಲ್ಲಾಪುರ ಮತ್ತು ಶಿರಸಿ ತಾಲ್ಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಸೇತುವೆ ನಿರ್ಮಾಣವಾದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಸದ್ಯ ಸೋಂದಾ ಹಿತ್ಲಳ್ಳಿ ತುಡುಗುಣಿ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದಾರೆ. ಸೇತುವೆ ನಿರ್ಮಾಣವಾದ ಬಳಿಕ ಹಿತ್ಲಳ್ಳಿ ಉಮ್ಮಚಗಿ ಮಂಚಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಹಳ್ಳಿಗಳ ಜನರು ಶಿರಸಿಗೆ ಆಗಮಿಸಲು ಮತ್ತು ಕೊಡ್ನಗದ್ದೆ ವಾನಳ್ಳಿ ಭಾಗದ ನೂರಾರು ಗ್ರಾಮಸ್ಥರಿಗೆ ಯಲ್ಲಾಪುರ ಸಂಪರ್ಕಿಸಲು ಬಹಳ ಸಮೀಪವಾಗಲಿದೆ. ಕೊಡ್ನಗದ್ದೆ ವ್ಯಾಪ್ತಿಯ ಸಾವಿರಾರು ಅಡಿಕೆ ಬೆಳೆಗಾರರು ರಾಶಿ ಅಡಿಕೆಗೆ ಯಲ್ಲಾಪುರದ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಗಣೇಶಪಾಲ್ ಸೇತುವೆ ನಿರ್ಮಾಣವಾದರೆ ಯಲ್ಲಾಪುರ ತಲುಪಲು 20 ಕಿ.ಮೀ ಉಳಿತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.