ADVERTISEMENT

ವಿದೇಶಿಯರಿಗೆ ‘ಗುಹೆ’ಗಳೇಕೆ ಇಷ್ಟ?

ಗೋಕರ್ಣದ ಗುಹೆಗಳು: ಕೆಲವರಿಗೆ ಧ್ಯಾನ, ಹಲವರಿಗೆ ಮೋಜಿನ ತಾಣ

ಗಣಪತಿ ಹೆಗಡೆ
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
ಗೋಕರ್ಣದ ಗೋಗರ್ಭ ಗುಹೆಯಲ್ಲಿ ವಿದೇಶಿ ಪ್ರವಾಸಿಗರು ಧ್ಯಾನ ಮಾಡುತ್ತ ಕುಳಿತಿರುವುದು. (ಸಂಗ್ರಹ ಚಿತ್ರ)
ಗೋಕರ್ಣದ ಗೋಗರ್ಭ ಗುಹೆಯಲ್ಲಿ ವಿದೇಶಿ ಪ್ರವಾಸಿಗರು ಧ್ಯಾನ ಮಾಡುತ್ತ ಕುಳಿತಿರುವುದು. (ಸಂಗ್ರಹ ಚಿತ್ರ)   

ಕಾರವಾರ: ಗೋಕರ್ಣದ ಗುಹೆಯೊಂದರಲ್ಲಿ ಇಬ್ಬರು ಮಕ್ಕಳೊಂದಿಗೆ ರಷ್ಯನ್ ಮಹಿಳೆಯೊಬ್ಬರು ವಾಸವಿದ್ದ ಘಟನೆಯ ಬೆನ್ನಲ್ಲೇ ಪ್ರವಾಸಿ ತಾಣದ ಗುಹೆಗಳನ್ನು ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.

ಅವಧಿ ಮೀರಿದ ವೀಸಾ ಹೊಂದಿದವರು, ಮಾದಕ ವ್ಯಸನದ ಗೀಳು ಅಂಟಿಸಿಕೊಂಡವರು, ಸ್ವತಂತ್ರ ಬದುಕು ಬಯಸುವ ಹಿಪ್ಪಿಗಳು ಗುಹೆಗಳಲ್ಲಿ ವಾಸವಿರಲು ಬಯಸುತ್ತಾರೆ. ಅಕ್ಟೋಬರ್‌ನಿಂದ ಮಾರ್ಚ್ ಅವಧಿಯಲ್ಲಿ ಗುಹೆಗಳಲ್ಲಿ ಒಬ್ಬರಲ್ಲ ಒಬ್ಬ ವಿದೇಶಿ ವಾಸವಿರುತ್ತಾರೆ.

ಗೋಕರ್ಣದ ಮುಖ್ಯ ಕಡಲತೀರದ ಪಕ್ಕದ ಗುಡ್ಡ, ಕುಡ್ಲೆ ಕಡಲತೀರದ ಮೇಲ್ಭಾಗದ ಗುಡ್ಡದಲ್ಲಿ ಐದಕ್ಕೂ ಹೆಚ್ಚು ಗುಹೆಗಳಿವೆ. ಅವುಗಳಲ್ಲಿ ರಾಮತೀರ್ಥ, ಗೋಗರ್ಭ ಗುಹೆಗಳು ಹೆಚ್ಚು ಪ್ರಚಲಿತ. ಇವು ಹೊರತುಪಡಿಸಿ ಕೆಲ ಗುಹೆಗಳಿವೆ. ಅವು ಕೆಲವೇ ಅಡಿ ವಿಸ್ತೀರ್ಣವಿದ್ದು, ರಸ್ತೆ ಸಂಪರ್ಕ ಹೊಂದಿಲ್ಲ.

ADVERTISEMENT

‘ಮಳೆಗಾಲದ ಬಳಿಕ ಗೋಕರ್ಣಕ್ಕೆ ಬರುವ ವಿದೇಶಿ ಪ್ರವಾಸಿಗರು ನಾಲ್ಕೈದು ತಿಂಗಳು ತಂಗುತ್ತಾರೆ. ಬೇಸಿಗೆಯಲ್ಲಿ ತಮ್ಮೂರಿಗೆ ಮರಳುತ್ತಾರೆ. ಇಲ್ಲಿದ್ದಷ್ಟು ದಿನ ಗುಹೆಗಳಲ್ಲಿ ಮೋಜು ಮಾಡುತ್ತಾರೆ. ಕೆಲವರು ಮಾತ್ರ ಧ್ಯಾನ, ಏಕಾಂತ ಬಯಸಿ ಗುಹೆಯಲ್ಲಿ ಇರುತ್ತಾರೆ’ ಎಂದು ಸ್ಥಳೀಯರು ತಿಳಿಸಿದರು.

‘ರಾಮತೀರ್ಥ, ಗೋಗರ್ಭ ಗುಹೆಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ರಷ್ಯಾ, ಸ್ವೀಡನ್, ಇಸ್ರೇಲ್ ಸೇರಿ ಕೆಲ ದೇಶಗಳ, ಆಧ್ಯಾತ್ಮಿಕತೆ ಬಗ್ಗೆ ಒಲವುಳ್ಳ ಪ್ರವಾಸಿಗರು ಇಲ್ಲಿ ಧ್ಯಾನಕ್ಕೆ ತಂಗುವುದು ಹೆಚ್ಚು. ಇವುಗಳ ಅಕ್ಕಪಕ್ಕದಲ್ಲೇ ಸಣ್ಣ ಗುಹೆಗಳಿವೆ. ಅಲ್ಲಿ ಏಕಾಂತ ಬಯಸುವ ಹಿಪ್ಪಿಗಳು ಮತ್ತು ಮಾದಕ ವ್ಯಸನಿ ಪ್ರವಾಸಿಗರು ಇವುಗಳಲ್ಲಿ ತಂಗುತ್ತಾರೆ’ ಎಂದು ಬಂಕಿಕೊಡ್ಲದ ನಿತ್ಯಾನಂದ ರಾಯ್ಕರ್ ಹೇಳಿದರು.

‘2018ರಲ್ಲಿ ರಷ್ಯನ್ ಪ್ರವಾಸಿಗನೊಬ್ಬ, ವೀಸಾ ಅವಧಿ ಮುಗಿದರೂ ಇಲ್ಲಿ ವಾಸವಿದ್ದ. ರಾಮತೀರ್ಥ ಗುಹೆಯಲ್ಲೇ ಸಿಕ್ಕಿಬಿದ್ದಿದ್ದ. ವೀಸಾ ಅವಧಿ ಮೀರಿದ ನಂತರವೂ ಉಳಿಯುವ ಪ್ರವಾಸಿಗರು ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ತಂಗಲು ಹಿಂಜರಿಯುತ್ತಾರೆ. ಅಲ್ಲಿ ವಿದೇಶಿಗರು ಸಿ–ಫಾರಂ (ದೃಢೀಕರಣ ಪತ್ರ) ಭರ್ತಿ ಮಾಡಬೇಕು. ಇದೇ ಕಾರಣಕ್ಕೆ ಗುಹೆ, ಜನ ಸಂಚಾರ ಇಲ್ಲದ ಗುಡ್ಡ, ಕಡಲತೀರದ ಪ್ರದೇಶಗಳನ್ನು ಆಯ್ದು ಅಲ್ಲಿಯೇ ತಿಂಗಳುಗಟ್ಟಲೆ ವಾಸ್ತವ್ಯ ಹೂಡುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಾಣಿ ಗೌಡ ಹೇಳಿದರು.

ಗೋಕರ್ಣದ ಗೋಗರ್ಭ ಗುಹೆ.
ಮಳೆಗಾಲದಲ್ಲಿ ಗುಹೆಗಳಲ್ಲಿ ವಾಸ ಕಷ್ಟ. ಅಕ್ಟೋಬರ್ ಬಳಿಕ ಪ್ರವಾಸಿಗರು ಅಲ್ಲಿಗೆ ತೆರಳುವ ಸಾಧ್ಯತೆ ಹೆಚ್ಚು. ನಿಗಾ ಇರಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ
ಜಿ.ಕೃಷ್ಣಮೂರ್ತಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ಮಾದಕ ವ್ಯಸನ ಹೆಚ್ಚು

‘ಗೋಕರ್ಣದಲ್ಲಿ ಗುಡ್ಡದ ಮೇಲಿರುವ ಗುಹೆಗಳಿಗೆ ಸಾಗಲು ಹಲವು ದೂರ ಕಾಲ್ನಡಿಗೆ ಅನಿವಾರ್ಯ. ಕಡಿದಾದ ದಾರಿ ಕುರುಚಲು ಪೊದೆಗಳನ್ನು ದಾಟಿ ಸಾಗಬೇಕು.. ಪೊಲೀಸರು ಇಂತಹ ಸ್ಥಳಗಳಿಗೆ ಬರುವುದು ವಿರಳ. ಇದೇ ಕಾರಣಕ್ಕೆ ಗುಹೆ ಗುಡ್ಡದ ಪ್ರದೇಶದಲ್ಲಿ ಮಾದಕ ವ್ಯಸನ ಚಟುವಟಿಕೆಗಳು ನಡೆಯುವುದು ಹೆಚ್ಚು. ಪೊಲೀಸರು ಭೇಟಿ ನೀಡಿದಾಗ ಧ್ಯಾನಸ್ಥರಾಗಿ ಕೂತಂತೆ ನಟಿಸುತ್ತಾರೆ’ ಎಂದು ಹೋಟೆಲ್ ಉದ್ಯಮಿಯೊಬ್ಬರು ಹೇಳಿದರು.

ಬಂಧನ ಕೇಂದ್ರದಲ್ಲಿ ಮಹಿಳೆ

‘ರಾಮತೀರ್ಥ ಗುಹೆಯಲ್ಲಿ ಜುಲೈ 9ರಂದು ಪತ್ತೆಯಾಗಿದ್ದ ರಷ್ಯನ್ ಮಹಿಳೆ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ಬೆಂಗಳೂರಿನ ವಿದೇಶಿಗರ ವಿಭಾಗೀಯ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಒಯ್ದಿದ್ದರು. ಅಲ್ಲಿ ವಿದೇಶಿ ಮಹಿಳೆಗೆ ಸುತ್ತಾಟ ನಿರ್ಬಂಧಿಸಿ ಸೂಚನೆ ನೀಡಲಾಗಿದೆ. ಸದ್ಯ ಅವರನ್ನು ತುಮಕೂರಿನ ವಿದೇಶಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದ ಸೂಚನೆ ಬಂದ ಬಳಿಕ ಆಕೆಯನ್ನು ದೇಶಕ್ಕೆ ವಾಪಸ್ ಕಳಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.