ಕಾರವಾರ: ‘ತಾಲ್ಲೂಕಿನ ಕಣಸಗಿರಿ ಗ್ರಾಮದಲ್ಲಿ ನಿರ್ಮಾಣಗೊಂಡ ಗೋಶಾಲೆ ಕಟ್ಟಡವು ಕಳಪೆಯಾಗಿದ್ದು, ಕಟ್ಟಡ ನಿರ್ಮಿಸಿದ ಜಿಲ್ಲಾ ನಿರ್ಮಿತಿ ಕೇಂದ್ರದ ವಿರುದ್ಧ ತನಿಖೆ ನಡೆಸಬೇಕು’ ಎಂದು ಹಿಂದೂ ಜನಜಾಗೃತಿ ರಾಜ್ಯ ಸಮಿತಿ ವಕ್ತಾರ ಮೋಹನ ಗೌಡ ಒತ್ತಾಯಿಸಿದರು.
‘ಗೋಶಾಲೆ ನಿರ್ಮಿಸಲು ₹50 ಲಕ್ಷದ ಅಂದಾಜು ವೆಚ್ಚ ಪತ್ರಿಕೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗಿತ್ತು. ಆದರೆ, ಕಾಮಗಾರಿಗೆ ₹42.12 ಲಕ್ಷ ವೆಚ್ಚ ಮಾಡಿದ್ದಾಗಿ ನಿರ್ಮಿತಿ ಕೇಂದ್ರ ತಿಳಿಸಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ್ದ ಮಾಹಿತಿಗೆ ₹38.90 ಲಕ್ಷ ಬಿಲ್ ಮಾಹಿತಿ ಮಾತ್ರ ನೀಡಲಾಗಿದೆ. ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಶಂಕೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಗೊತ್ತಾಗಲಿದೆ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಟ್ಟಡ ನಿರ್ಮಾಣಗೊಂಡು ಕೆಲ ತಿಂಗಳು ಕಳೆಯುವಷ್ಟರಲ್ಲಿಯೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳಪೆ ಮಟ್ಟದ ಬಣ್ಣವನ್ನು ಗೋಡೆಗೆ ಬಳಿಯಲಾಗಿದೆ. ಅಂದಾಜು ಪಟ್ಟಿಯಲ್ಲಿ 5,300 ಸಿಮೆಂಟ್ ಬ್ಲಾಕ್ ಬಳಕೆ ಮಾಡುವುದಾಗಿ ತೋರಿಸಿದ್ದು, ಬಿಲ್ ದಾಖಲೆಗಳಲ್ಲಿ 3,120 ಬ್ಲಾಕ್ ಬಳಸಿರುವ ಮಾಹಿತಿ ಇದೆ. ಹಲವು ಸಾಮಗ್ರಿಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸಗಳಾಗಿವೆ’ ಎಂದರು.
‘ಗೋಶಾಲೆ ಕಾಮಗಾರಿಯಲ್ಲಿ ನಡೆದಿರಬಹುದಾದ ಅವ್ಯವಹಾರಗಳ ತನಿಖೆ ನಡೆಸುವ ಜೊತೆಗೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ, ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೂ ದೂರು ನೀಡಲಾಗುತ್ತಿದೆ’ ಎಂದರು.
ಸಂದೀಪ್ ಗೋಕರ್ಣಕರ, ಗಜೇಂದ್ರ ನಾಯ್ಕ, ಶರದ ಬಾಂದೇಕರ, ಅಮಿತ್ ಮಾಳ್ಸೇಕರ, ಸೂರ್ಯಕಾಂತ ಕಳಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.