ADVERTISEMENT

ನವೀಕೃತ ಗ್ರಂಥಾಲಯದಲ್ಲಿ ‘ಓದುವ ಬೆಳಕು’- 9,692 ವಿದ್ಯಾರ್ಥಿಗಳಿಗೆ ಪ್ರಯೋಜನ

ಪ್ರಯೋಜನ ಪಡೆಯತ್ತಿರುವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 14:51 IST
Last Updated 10 ಮಾರ್ಚ್ 2021, 14:51 IST
ಅಂಕೋಲಾ ತಾಲ್ಲೂಕಿನ ವಂದಿಗೆ ಗ್ರಾಮ ಗ್ರಂಥಾಲಯದ ನೋಟ
ಅಂಕೋಲಾ ತಾಲ್ಲೂಕಿನ ವಂದಿಗೆ ಗ್ರಾಮ ಗ್ರಂಥಾಲಯದ ನೋಟ   

ಕಾರವಾರ: ಜಿಲ್ಲೆಯ ವಿವಿಧ ಗ್ರಾಮಗಳ ಗ್ರಂಥಾಲಯಗಳನ್ನು ಜಿಲ್ಲಾ ಪಂಚಾಯಿತಿಯು ‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ಅಭಿವೃದ್ಧಿ ಪಡಿಸಿದೆ. ನವೀಕೃತ ಗ್ರಂಥಾಲಯಗಳು ಈಗ ಓದುಗರನ್ನು ಆಕರ್ಷಿಸುತ್ತಿವೆ.

ಜಿಲ್ಲೆಯಲ್ಲಿ ಒಟ್ಟು 33 ಗ್ರಂಥಾಲಯವನ್ನು ನವೀಕರಿಸಲಾಗಿದ್ದು,ಪ್ರತಿ ತಾಲ್ಲೂಕಿನಲ್ಲಿ ಮೂರನ್ನು ‘ಬ್ರ್ಯಾಂಡಿಂಗ್’ ಮಾಡಲಾಗಿದೆ. ಅಂಕೋಲಾ 591, ಭಟ್ಕಳ 477, ಶಿರಸಿ 558, ಮುಂಡಗೋಡ 264, ದಾಂಡೇಲಿ 350, ಹಳಿಯಾಳ 1,123, ಸಿದ್ದಾಪುರ 567, ಹೊನ್ನಾವರ 293, ಕಾರವಾರ 115, ಯಲ್ಲಾಪುರ 493, ಜೊಯಿಡಾ 392, ಕುಮಟಾದಲ್ಲಿ 1,130 ವಿದ್ಯಾರ್ಥಿಗಳು ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ಸೋಂಕಿನಿಂದಾಗಿ ಮಕ್ಕಳು ಸಾಮಾಜಿಕವಾಗಿ, ಭಾವನಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದಾರೆ. ಶಾಲೆಗಳು ಮುಚ್ಚಿದ್ದ ಕಾರಣ ಅವರ ಶೈಕ್ಷಣಿಕ ಬೆಳವಣಿಗೆ ಹಿನ್ನಡೆಯಾಗಿತ್ತು. ಅಲ್ಲದೇ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗೆ ತುತ್ತಾಗಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಓದುವ ಬೆಳಕು’ ಯೋಜನೆ ಜಾರಿ ಮಾಡಿದೆ.

ADVERTISEMENT

ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ 6ರಿಂದ 18 ವರ್ಷದ ಮಕ್ಕಳಿಗಾಗಿಯೇ ಪ್ರತ್ಯೇಕ ವಿಭಾಗಗಳಲ್ಲಿ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ದಾನಿಗಳು, ಸ್ವಯಂ ಸೇವಾ ಸಂಸ್ಥೆಯವರು ಹಾಗೂ ಕಾರ್ಪೆರೇಟ್ ಸಂಸ್ಥೆಗಳು ನೀಡುವ ಹೊಸ ಹಾಗೂ ಜೋಪಾನವಾಗಿ ಬಳಸಿದ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಇಡಲಾಗಿದೆ.

ಗುರುತಿಸಲಾದ ಮಕ್ಕಳ ಪಟ್ಟಿಯನ್ನು ವಾರ್ಡ್, ಗ್ರಾಮವಾರು ವಿಂಗಡಿಸಿಕೊಂಡು ನಂತರ ಸಮಯವನ್ನು ನಿಗದಿಪಡಿಸಿ ನೋಂದಣಿ ಅಭಿಯಾನ ಮಾಡಲಾಗುತ್ತದೆ. ಇದಕ್ಕೆ ನ.14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹಿಸಲಾಗುವ ಗ್ರಂಥಾಲಯ ಸೆಸ್‌ನಿಂದ ಎಲ್ಲ ಮಕ್ಕಳಿಗೆ ಒಂದು ಪುಸ್ತಕವನ್ನು ನೀಡಲು ಸದಸ್ಯತ್ವ ಭದ್ರತಾ ಠೇವಣಿಯನ್ನು ಭರಿಸಲಾಗುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸ್ವಯಂ ಸೇವಾ ಸಂಸ್ಥೆಗಳು, ನಿವೃತ್ತ ಶಿಕ್ಷಕರಿಂದ ಗ್ರಂಥಾಲಯಗಳಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ಈ ಯೋಜನೆಯ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.