ADVERTISEMENT

ಹಸಿ ಅಡಿಕೆ ಟೆಂಡರ್: ದಾಖಲೆ ಆವಕ

ನಿತ್ಯ 1,500 ಕ್ವಿಂಟಲ್‍ಗೂ ಹೆಚ್ಚು ವಹಿವಾಟು

ರಾಜೇಂದ್ರ ಹೆಗಡೆ
Published 18 ಡಿಸೆಂಬರ್ 2025, 3:21 IST
Last Updated 18 ಡಿಸೆಂಬರ್ 2025, 3:21 IST
ಶಿರಸಿಯ ಸಹಕಾರ ಸಂಘವೊಂದರ ಹಸಿ ಅಡಿಕೆ ಟೆಂಡರ್ ನಡೆಯುವ ಜಾಗದಲ್ಲಿ ಮಾರಲು  ಹಸಿ ಅಡಿಕೆ ತರಲಾಗಿತ್ತು
ಶಿರಸಿಯ ಸಹಕಾರ ಸಂಘವೊಂದರ ಹಸಿ ಅಡಿಕೆ ಟೆಂಡರ್ ನಡೆಯುವ ಜಾಗದಲ್ಲಿ ಮಾರಲು  ಹಸಿ ಅಡಿಕೆ ತರಲಾಗಿತ್ತು   

ಶಿರಸಿ: ಪ್ರಸಕ್ತ ಸಾಲಿನಲ್ಲಿ ರಾಶಿ ಹಾಗೂ ಚಾಲಿ ಅಡಿಕೆ ಮಾಡಲು ಬಹುತೇಕ ಬೆಳೆಗಾರರು ವಿವಿಧ ಕಾರಣಗಳಿಗೆ ಆಸಕ್ತಿ ಕಳೆದುಕೊಂಡ ಕಾರಣ ಶಿರಸಿಯ ಹಸಿ ಅಡಿಕೆ ಮಾರುಕಟ್ಟೆಯಲ್ಲಿ ದಾಖಲೆಯ ಆವಕ ಆಗುತ್ತಿದೆ. ನಿತ್ಯ 1,500 ಕ್ವಿಂಟಲ್‍ಗೂ ಹೆಚ್ಚಿನ ಅಡಿಕೆ ಮಾರಾಟ ಆಗುತ್ತಿದೆ. 

‘ರೋಗಬಾಧೆಗಳಿಂದ ಅಡಿಕೆಯ ಗುಣಮಟ್ಟ ಇಳಿಕೆ, ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಕೊರತೆ, ಕೊಯ್ಲಿನ ಒತ್ತಡದಂಥ ವಿವಿಧ ಕಾರಣಕ್ಕೆ ಈ ಬಾರಿ ಹಸಿ ಅಡಿಕೆ ಮಾರಾಟ ಮಾಡುವವರ ಸಂಖ್ಯೆ ಅಧಿಕವಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಬೆಳೆಗಾರರು ಹಸಿ ಅಡಿಕೆ ಟೆಂಡರ್ ವ್ಯವಸ್ಥೆಗೆ ಬಂದಿದ್ದಾರೆ’ ಎಂಬುದು ಸಹಕಾರ ಸಂಘಗಳ ಪ್ರಮುಖರ ಮಾತು. 

‘ರಾಶಿ ಹಾಗೂ ಚಾಲಿ ಅಡಿಕೆಗೆ ಉತ್ತಮ ದರ ಇರುವ ಕಾರಣ ಈ ಬಾರಿ ಹಸಿ ಅಡಿಕೆಗೆ ಆರಂಭದಲ್ಲಿ ಉತ್ತಮ ದರ ಸಿಗುತ್ತಿದೆ. ಕಳೆದ ವರ್ಷ ಕಾಯಿ ಅಡಿಕೆ ಸರಾಸರಿ ಪ್ರತಿ ಕ್ವಿಂಟಲ್‍ಗೆ ₹4,700 ದರ ಪಡೆದುಕೊಂಡಿದ್ದು, ಗರಿಷ್ಠ ₹5,108 ವರೆಗೂ ಇತ್ತು. ಈ ಬಾರಿ ಸರಾಸರಿ ಪ್ರತಿ ಕ್ವಿಂಟಲ್‍ಗೆ ₹6 ಸಾವಿರ, ಗರಿಷ್ಠ ₹6,400 ದರ ಲಭಿಸುತ್ತಿದೆ. ಗೋಟು ಅಡಿಕೆ (ಹಣ್ಣು) ಸರಾಸರಿ ₹7,400 ದರ ಪಡೆದುಕೊಂಡಿದೆ. ಗರಿಷ್ಠ ₹7,800 ದರವಿದೆ. ಈ ದರವೂ ರೈತರನ್ನು ಆಕರ್ಷಿಸಿದೆ’ ಎಂಬುದು ಟೆಂಡರ್ ವ್ಯವಸ್ಥೆಯಲ್ಲಿ ಪಾಲ್ಗೊಂಡ ವರ್ತಕ ಮಂಜುನಾಥ ಭಟ್ ಮಾತು. 

ADVERTISEMENT

‘ಅಡಿಕೆ ಬೆಳೆ ಕೊಯ್ಲು ಮತ್ತು ಸಂಸ್ಕರಣೆಗೆ ಕೂಲಿಕಾರ್ಮಿಕರ ಕೊರತೆ ದೊಡ್ಡ ಚಿಂತೆಯಾಗಿದೆ. ಹೀಗಾಗಿ ಹಸಿ ಅಡಿಕೆ ಖರೀದಿಗೆ ಈ ಹಿಂದಿಗಿಂತಲೂ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಈಗಾಗಲೇ ತಾಲ್ಲೂಕಿನ ಹಲವು ಸಹಕಾರ ಸಂಘಗಳಲ್ಲಿ ಹಸಿ ಅಡಿಕೆ ಖರೀದಿ ಆರಂಭಗೊಂಡಿದ್ದು, ಈವರೆಗೆ 30 ಸಾವಿರ ಕ್ವಿಂಟಲ್‌ಗಿಂತ ಅಧಿಕ ಅಡಿಕೆ ಮಾರಾಟ ಕಂಡಿದೆ. ಹಳ್ಳಿಗಳಿಂದ ದಿನವೂ ಹಸಿ ಅಡಿಕೆ ತುಂಬಿಕೊಂಡ ವಾಹನಗಳು ನೂರಾರು ಸಂಖ್ಯೆಯಲ್ಲಿ ಬರುತ್ತವೆ’ ಎನ್ನುತ್ತಾರೆ ಅವರು. 

‘ಕೊಯ್ಲು ಮಾಡಲು ಕೊನೆಗೌಡರನ್ನು ಹೊಂದಿಸುವುದು ಕಷ್ಟವಾಯಿತು. ಅಡಿಕೆ ಸುಲಿಯಲು ಕೆಲಸದವರು ಸಿಗುತ್ತಿಲ್ಲ.  ಸಂಸ್ಕರಣೆಯ ಉಳಿದ ಹಂತಗಳನ್ನು ಕೈಗೊಳ್ಳಲು ನಮ್ಮಿಂದ ಕಷ್ಟ. ಹೀಗಾಗಿ ಹಸಿ ಅಡಿಕೆಯನ್ನೇ ಮಾರಾಟ ಮಾಡಿದ್ದೇವೆ’ ಎಂದು ಅಡಿಕೆ ಬೆಳೆಗಾರ ಮಂಜುನಾಥ ನಾಯ್ಕ ಸಮಸ್ಯೆ ಹೇಳಿದರು. 

ಪ್ರತಿದಿನ ಶಿರಸಿ ಮಾರುಕಟ್ಟೆಯೊಂದರಲ್ಲೇ ಸರಾಸರಿ 1200 ಕ್ವಿಂಟಲ್‍ನಿಂದ 1500 ಕ್ವಿಂಟಲ್ ಅಡಿಕೆ ವಹಿವಾಟು ನಡೆಯುತ್ತಿದೆ. ಇದು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. 
ವಿನಯ ಹೆಗಡೆ ಶಿರಸಿ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ

ಜಿಂಗಿನ ತೂಕ ಬಿಡಲು ಒತ್ತಾಯ

  ‘ಕಳೆದ ವರ್ಷಗಳಲ್ಲಿ ಒಂದು ಕ್ವಿಂಟಲ್ ಹಸಿ ಅಡಿಕೆ ಖರೀದಿ ಮೇಲೆ 10 ಕೆಜಿ ಜಿಂಗು (ಅಡಿಕೆ ಕಾಯಿಗಳನ್ನು ಹಿಡಿದಿಡುವ ಗೊನೆಯ ಭಾಗ) ವೇಸ್ಟೇಜ್ ತೆಗೆಯಲಾಗುತ್ತಿತ್ತು. ಆದರೆ ಈ ಬಾರಿ ನಗರದ ಟಿಎಸ್ಎಸ್ ಸಂಸ್ಥೆಯಲ್ಲಿ ಈ ವೇಸ್ಟೇಜ್ ತೆಗೆಯುತ್ತಿಲ್ಲ. ಇದರಿಂದ ಖರೀದಿದಾರರಿಗೆ ನಷ್ಟವಾಗುತ್ತಿದೆ’ ಎಂದು ಕೆಲ ವರ್ತಕರ ಆರೋಪಿಸಿದ್ದು ಇದಕ್ಕೆ ಟಿಎಸ್ಎಸ್ ನಿರ್ದೇಶಕ ಡಿ.ಎಸ್.ಹೆಗಡೆ ಕಡವೆ ‘ಈ ಹಿಂದಿನ ವ್ಯವಸ್ಥೆಯಂತೆ ಈಗಲೂ ನಡೆಯುತ್ತಿದೆ. ಕೆಲ ಸ್ವಹಿತಾಸಕ್ತಿ ವ್ಯಕ್ತಿಗಳಿಂದ ಗೊಂದಲ ಸೃಷ್ಟಿಯಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.