
ಶಿರಸಿ: ‘ಭಾರತೀಯ ಶಿಕ್ಷಣ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತೀಯ ಶಿಕ್ಷಣ ಬೋರ್ಡ್ ರಚನೆ ಮಾಡಿದ್ದು, ಪತಂಜಲಿ ಯೋಗ ಪೀಠದ ನೇತೃತ್ವದಲ್ಲಿ ಇನ್ನು ಮುಂದೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಆಧುನಿಕ ಶಿಕ್ಷಣದ ಜತೆಗೆ ಗುರುಕುಲ ಪದ್ಧತಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ’ ಎಂದು ಪತಂಜಲಿ ಯೋಗ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥ ಭವರಲಾಲ್ ಆರ್ಯ ತಿಳಿಸಿದರು.
ತಾಲ್ಲೂಕಿನ ಯಡಳ್ಳಿಯಲ್ಲಿ ಶನಿವಾರ ಇಂಟರಾಕ್ಟಿವ್ ವರ್ಲ್ಡ್ ಸ್ಕೂಲ್ ಲೋಕಾರ್ಪಣೆಗೊಳಿಸಿ ಹಾಗೂ ಸುಕರ್ಮ ಯಾಗ ಶಾಲೆಯ ಆಹಾರ-ಆರೋಗ್ಯ-ಆಧ್ಯಾತ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಾಶವಾಗಿದ್ದ ಭಾರತದ ಪ್ರಾಚೀನ ಗುರುಕುಲ ಪರಂಪರೆಯನ್ನು ಮರಳಿ ಸ್ಥಾಪಿಸಲು ಸರ್ಕಾರ ಈ ಮಹತ್ವದ ನಿರ್ಧಾರ ತಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶದಾದ್ಯಂತ ಇಂತಹ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ’ ಎಂದರು.
‘ಈ ನೂತನ ಬೋರ್ಡ್‌ನಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಹಾಗೂ ವಿಷಯ ತಜ್ಞರು ನಿರ್ದೇಶಕರಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಧುನಿಕ ಶಿಕ್ಷಣದ ಜತೆಗೆ ಯೋಗ, ಧ್ಯಾನ, ಸಂಸ್ಕಾರ ಹಾಗೂ ಅಗ್ನಿಹೋತ್ರದಂತಹ ಆಚರಣೆಗಳನ್ನು ಕಲಿಸುವ ಮೂಲಕ ಭಾರತವನ್ನು ವಿಶ್ವಗುರು ಮಾಡುವ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದರು.
ಶಿರಸಿ ಡಿಎಸ್‍ಪಿ ಗೀತಾ ಪಾಟೀಲ ಮಾತನಾಡಿ, ‘ಶಾಲೆಗಳು ಕೇವಲ ಅಂಕ ಗಳಿಸುವ ಕೇಂದ್ರಗಳಾಗದೆ ಜ್ಞಾನ ಮತ್ತು ಸಂಸ್ಕಾರ ನೀಡುವ ಮೂಲಕ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಕಾರ್ಖಾನೆಗಳಾಗಬೇಕು’ ಎಂದರು. ಶಿಕ್ಷಣ ತಜ್ಞ ಕಂಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಸಂಸ್ಕೃತ ಭಾಷೆ ಮತ್ತು ಮನೆಯಲ್ಲಿನ ಭಜನಾ ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು.
ಇದೇ ವೇಳೆ ಸಾಧಕ ಬಾಣಸಿಗರಾದ ವೆಂಕಟರಮಣ ಹೆಗಡೆ ಹಾಗೂ ಶಿವಾನಂದ ದೂಪದಮಠ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ವಿನಯ ಹೆಗಡೆ, ನಿರ್ದೇಶಕಿ ಮಮತಾ ಹೆಗಡೆ, ಸುಕರ್ಮ ಯಾಗ ಶಾಲೆಯ ವಿ.ಡಿ.ಭಟ್ ಕರಸುಳ್ಳಿ ಹಾಗೂ ಇತತರು ಉಪಸ್ಥಿತರಿದ್ದರು. ಜನಾರ್ಧನ ಆಚಾರ್ಯ ಶರ್ಮ ಸ್ವಾಗತಿಸಿದರು. ಉಪನ್ಯಾಸಕಿ ಶ್ವೇತಾ ಅವಧಾನಿ ನಿರೂಪಿಸಿದರು.
ಇಂದಿನ ಶಿಕ್ಷಣ ಪದ್ಧತಿ ವಿಕೃತಿಯಾಗಿದ್ದು ಪಾಲಕರಿಗೆ ಮಕ್ಕಳ ಜತೆ ಸಮಯ ನೀಡಲು ಸಾಧ್ಯವಾಗದಿರುವುದು ಬೇಸರದ ವಿಷಯ. ಆದ್ದರಿಂದ ಗುರುಕುಲ ಮಾದರಿ ಶಿಕ್ಷಣ ಅತಿ ಅವಶ್ಯವಾಗಿದೆ.ಕಂಜಂಪಾಡಿ ಸುಬ್ರಹ್ಮಣ್ಯ ಭಟ್ ಶಿಕ್ಷಣ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.