ADVERTISEMENT

ಅಂಕೋಲ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಸೂತಿ, ಸ್ತ್ರೀರೋಗ ತಜ್ಞರಿಲ್ಲದೇ ಸಂಕಷ್ಟ

ಅಂಕೋಲಾ ತಾಲ್ಲೂಕಿನ ರೋಗಿಗಳು ಕಾರವಾರಕ್ಕೆ ಹೋಗುವ ಅನಿವಾರ್ಯತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 20:30 IST
Last Updated 23 ಸೆಪ್ಟೆಂಬರ್ 2020, 20:30 IST
ಅಂಕೋಲಾ ತಾಲ್ಲೂಕು ಆಸ್ಪತ್ರೆ
ಅಂಕೋಲಾ ತಾಲ್ಲೂಕು ಆಸ್ಪತ್ರೆ   

ಅಂಕೋಲಾ: ತಾಲ್ಲೂಕು ಆಸ್ಪತ್ರೆಯಲ್ಲಿ ಒಂಬತ್ತು ತಿಂಗಳಿನಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಇಲ್ಲ. ಇದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಡಾ. ಆಶಾ ಭಟ್, 2019ರ ಜುಲೈ 1ರಂದು ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಲು ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ, ಆರು ತಿಂಗಳು ಕಳೆದರೂ ಅದು ಅಂಗೀಕಾರವಾಗದ ಕಾರಣ ಈ ವರ್ಷದ ಜನವರಿಯಿಂದ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ. 21 ವರ್ಷಗಳ ಸುದೀರ್ಘ ವೈದ್ಯಕೀಯ ಅನುಭವ ಹೊಂದಿದ್ದ ಅವರು ತಾಲ್ಲೂಕಿನಲ್ಲಿ ಪ್ರಸಿದ್ಧರಾಗಿದ್ದರು.

ಈ ವರ್ಷ ಜನವರಿಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಿಲ್ಲ. ಹಾಗಾಗಿ ಹೆರಿಗೆ, ಸ್ತ್ರೀರೋಗ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯ ಮೊರೆ ಹೋಗಬೇಕಾಗಿದೆ. ಖಾಸಗಿ ಆಸ್ಪತ್ರೆ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಡವರಿಗೆ ಹಣ ಹೊಂದಿಸಲು ಪರದಾಡಬೇಕಿದೆ. ತುರ್ತು ಸಂದರ್ಭದಲ್ಲಿ ಕಾರವಾರಕ್ಕೆ ಹೋಗುವುದೂ ಕಷ್ಟಕರವಾಗಿದೆ. ಈ ಮೊದಲು ತಿಂಗಳಿಗೆ 50ರಿಂದ 60 ಸಾಮಾನ್ಯ ಹಾಗೂ 20ರಿಂದ 25 ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಗಳು ಆಗುತ್ತಿದ್ದವು.

ADVERTISEMENT

ತಾಲ್ಲೂಕಿನ ಜನರು ಎದುರಿಸುತ್ತಿರುವ ಈ ಸಮಸ್ಯೆಯ ಬಗ್ಗೆ ಆರೋಗ್ಯ ಇಲಾಖೆಯು ತಕ್ಷಣ ಸ್ಪಂದಿಸಬೇಕು. ಪ್ರಸೂತಿ ತಜ್ಞರನ್ನು ನೇಮಿಸಬೇಕು. ಆಸ್ಪತ್ರೆಯಲ್ಲಿ ಫಿಜಿಸಿಯನ್ (ಮೆಡಿಸಿನ್), ಚರ್ಮರೋಗ ತಜ್ಞರು, ಕಣ್ಣಿನ ತಜ್ಞರು, ದಂತವೈದ್ಯರ ಕೊರತೆ ಇದೆ. ಇದನ್ನೂ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಮನವಿ ಸಲ್ಲಿಸಲಾಗಿದೆ’:‘ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಕೊರತೆ ಇದೆ. ಇದರಿಂದ ಹೆರಿಗೆ, ಇತರ ರೋಗಿಗಳನ್ನು ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ತೊಂದರೆಯಾಗಿರುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ’ ಎಂದು ಮುಖ್ಯ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಂದ್ರ ನಾಯಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.