ADVERTISEMENT

ಲಾಕ್‌ಡೌನ್ ಪರಿಣಾಮ: ಕಾರವಾರ ಹೋಟೆಲ್‌ಗಳಲ್ಲಿ ನೌಕರರ ವೇತನಕ್ಕೂ ಪರದಾಡುವ ಸ್ಥಿತಿ

ಇನ್ನೂ ಚೇತರಿಕೆ ಕಾಣದ ಹೋಟೆಲ್ ಉದ್ಯಮ

ಸದಾಶಿವ ಎಂ.ಎಸ್‌.
Published 28 ಆಗಸ್ಟ್ 2020, 11:17 IST
Last Updated 28 ಆಗಸ್ಟ್ 2020, 11:17 IST
ಕಾರವಾರದ ಹೋಟೆಲ್ ಒಂದರಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿರುವುದು. ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್
ಕಾರವಾರದ ಹೋಟೆಲ್ ಒಂದರಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿರುವುದು. ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್   

ಕಾರವಾರ: ಲಾಕ್‌ಡೌನ್ ನಿಯಮಗಳ ಸಡಿಲಿಕೆಯಾದರೂ ಹೋಟೆಲ್ ಉದ್ಯಮ ಚೇತರಿಕೆ ಕಾಣದೇ ಮಾಲೀಕರು, ನೌಕರರು ಚಿಂತೆಗೀಡಾಗಿದ್ದಾರೆ. ಕಾರ್ಮಿಕರ ವೇತನಕ್ಕೂ ಕೈಯಿಂದಲೇ ಖರ್ಚು ಮಾಡುವಂಥ ಸ್ಥಿತಿಯಲ್ಲಿದ್ದಾರೆ.

ಕಾರವಾರ ಹೋಟೆಲ್‌ ಮಾಲೀಕರ ಸಂಘದಲ್ಲಿ (ಖಾರಾ) ಸುಮಾರು 35 ಸದಸ್ಯ ಹೋಟೆಲ್‌ಗಳಿವೆ. ಬಹುತೇಕ ಎಲ್ಲವುಗಳ ಸ್ಥಿತಿಯೂ ಇದೇ ರೀತಿಯಲ್ಲೇ ಇದೆ. ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಸಂಪೂರ್ಣ ವ್ಯವಹಾರವನ್ನೇ ಸ್ಥಗಿತಗೊಳಿಸಿದ ಉದಾಹರಣೆಗಳೂ ಇವೆ.

‘ಹೋಟೆಲ್‌ ಉದ್ಯಮವು ಲಾಕ್‌ಡೌನ್ ತೆರವಾದ ಬಳಿಕ ಶೇ 10ರಿಂದ ಶೇ 20ರಷ್ಟು ಮಾತ್ರ ವ್ಯವಹಾರ ಕಾಣುತ್ತಿದೆ. ಕೊರೊನಾಕ್ಕೂ ಮೊದಲಿನ ರೀತಿಯ ವಹಿವಾಟು ದಾಖಲಿಸಲು ಇನ್ನೂ ಅದೆಷ್ಟು ತಿಂಗಳು ಬೇಕೋ ಗೊತ್ತಿಲ್ಲ. ನ್ಯಾಯಾಲಯಗಳು, ಶಾಲೆ ಕಾಲೇಜುಗಳು ಕಾರ್ಯಾರಂಭ ಮಾಡಬೇಕು. ಪ್ರವಾಸಿಗರು, ಬೇರೆ ಊರುಗಳಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚುವ ತನಕ ಉದ್ಯಮ ಕಷ್ಟದಲ್ಲಿ ಇರಲಿದೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಶ್ಯಾಮ್ ಬಸ್ರೂರು.

ADVERTISEMENT

‘ನಗರದಲ್ಲಿರುವ ಹೋಟೆಲ್‌ಗಳ ಬಹುಪಾಲು ನೌಕರರು ಗ್ರಾಮೀಣ ಭಾಗದವರು. ಸರ್ಕಾರಿ ಬಸ್‌ಗಳೇ ಅವರ ಸಂಚಾರಕ್ಕೆ ಆಧಾರ. ಆದರೆ, ಹಳ್ಳಿಗಳಿಗೆ ಬಸ್ ಸಂಚಾರ ಸರಿಯಾಗಿ ಆರಂಭವಾಗದಿರುವ ಕಾರಣ ನೌಕರರಿಗೆ ಬರಲೂ ಸಮಸ್ಯೆಯಾಗಿದೆ’ ಎಂದು ಅವರು ಬೇಸರಿಸುತ್ತಾರೆ.

ಇದೇ ರೀತಿಯ ಅಭಿಪ್ರಾಯ ನಗರದ ಶ್ರುತಿ ಸಾಗರ ಹೋಟೆಲ್ ಮಾಲೀಕ ಪಿ.ಆರ್.ರಾವ್ ಅವರದ್ದೂ ಆಗಿದೆ.

‘ಜನರು ಹೋಟೆಲ್‌ಗಳಿಗೆ ಬರಲು ಅಂಜುತ್ತಿದ್ದಾರೆ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ದಿನನಿತ್ಯದ ವ್ಯವಹಾರ ನಡೆಸಲೂ ಕಷ್ಟವಾಗಿದೆ. ಹೋಟೆಲ್‌ಗೆ ಮೊದಲಿನ ರೀತಿಯಲ್ಲಿ ಹೆಚ್ಚು ತರಕಾರಿ, ದಿನಸಿಯನ್ನು ಈಗ ತರಿಸುವುದೇ ಇಲ್ಲ. ಈ ಸ್ಥಿತಿ ಇನ್ನೆಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ’ ಎನ್ನುತ್ತಾರೆ ಅವರು.

‘ಕಾರವಾರದಲ್ಲಿ ಭಾನುವಾರದ ಸಂತೆ ಆರಂಭವಾದರೆ ಹೋಟೆಲ್‌ಗೆ ಗ್ರಾಹಕರ ಸಂಖ್ಯೆ ಹೆಚ್ಚಬಹುದು. ಆದರೆ, ಅದು ಯಾವಾಗ ಆರಂಭವಾಗುತ್ತದೆ ಎಂದು ಗೊತ್ತಿಲ್ಲ’ ಎಂದೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸ್ಯಾನಿಟೈಸರ್ ಬಳಕೆ ಕಡ್ಡಾಯ

ಕಾರವಾರದ ಹೋಟೆಲ್‌ಗಳಲ್ಲಿ ಗ್ರಾಹಕರ ಸುರಕ್ಷತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೇಶದ್ವಾರದ ಬಳಿಯೇ ‘ಪೆಡಲ್ ಸ್ಯಾನಿಟೈಸರ್’ ಇಡಲಾಗಿದ್ದು, ಅದರ ಬಳಕೆ ಕಡ್ಡಾಯ ಮಾಡಲಾಗಿದೆ.

ವಿವಿಧ ಹೋಟೆಲ್‌ಗಳಲ್ಲಿ ಕೈತೊಳೆಯುವ ನೀರಿನ ನಲ್ಲಿಗಳನ್ನೂ ಕೈಯಿಂದ ಮುಟ್ಟದಿರುವಂತೆ ಮಾರ್ಪಾಟು ಮಾಡಲಾಗಿದೆ. ನೀರಿನ ಪೈಪ್‌ಗೆ ಕಾಲಿನಲ್ಲಿ ಒತ್ತಿದಾಗ ನೀರು ಬರುವ ಮಾದರಿಯ ಸಲಕರಣೆಯನ್ನು ಅಳವಡಿಸಲಾಗಿದೆ.

ಹೋಟೆಲ್‌ಗಳ ಸಿಬ್ಬಂದಿಗೆ ಫೇಸ್‌ ಶೀಲ್ಡ್, ಮುಖಗವಸು, ದಿನಕ್ಕೆ ಎರಡು ಮೂರು ಬಾರಿ ಇಡೀ ಹೋಟೆಲ್‌ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.