ADVERTISEMENT

ಉತ್ತರ ಕನ್ನಡ | ಲಾಕ್‌ಡೌನ್‌ ಪರಿಣಾಮ: ವಸತಿ ಮನೆ ನಿರ್ಮಾಣಕ್ಕೆ ಹಿನ್ನಡೆ

ಜೋಪಡಿಯಲ್ಲೇ ಮಳೆಗಾಲ ಕಳೆಯಬೇಕಾದ ಪರಿಸ್ಥಿತಿ

ಸಂಧ್ಯಾ ಹೆಗಡೆ
Published 27 ಮೇ 2020, 20:30 IST
Last Updated 27 ಮೇ 2020, 20:30 IST
ಶಿರಸಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆ ಮನೆ
ಶಿರಸಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆ ಮನೆ   

ಶಿರಸಿ: ಕೊರೊನಾ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಇದ್ದ ಕಾರಣ ತಾಲ್ಲೂಕಿನಲ್ಲಿ ವಸತಿ ಮನೆಗಳ ನಿರ್ಮಾಣ ಹಿಂದೆ ಬಿದ್ದಿದೆ. ಮಳೆಗಾಲ ಶುರುವಾಗುವಷ್ಟರಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗದೆಂಬ ಚಿಂತೆಯಲ್ಲಿ ಫಲಾನುಭವಿಗಳಿದ್ದಾರೆ.

ಮಲೆನಾಡಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತದೆ. ಜೂನ್‌ನಲ್ಲಿ ಮಳೆಗಾಲ ಶುರುವಾದರೆ, ಆಗಸ್ಟ್‌ವರೆಗೂ ಬಿಡುವಿಲ್ಲದೇ ಮಳೆಯಾಗುತ್ತದೆ. ಈ ನಡುವೆ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದು ಸಾಧ್ಯವಾಗದು. ಹೀಗಾಗಿ, ವಸತಿ ಮನೆಗಳ ಫಲಾನುಭವಿಗಳು, ಭರದಲ್ಲಿ ಮನೆ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಲ್ಲದೇ, ಸಿಮೆಂಟ್, ಶೀಟ್‌ನಂತಹ ಕಚ್ಚಾ ಸಾಮಗ್ರಿಗಳ ಲಭ್ಯತೆ ಇರಲಿಲ್ಲ. ಕೆಲಸಗಾರರು ಕೆಲಸಕ್ಕೆ ಬರುತ್ತಿರಲಿಲ್ಲ. ಎರಡನೇ ಹಂತದ ಲಾಕ್‌ಡೌನ್‌ ವೇಳೆಗೆ ಸರ್ಕಾರದಿಂದ ಕಂತಿನ ಹಣ ಬಿಡುಗಡೆಯಾಗಿದ್ದರೂ, ಕಟ್ಟಡ ಮುಂದುವರಿಸಲಾಗದ ಸ್ಥಿತಿ ಇತ್ತು. ಈಗ 15 ದಿನಗಳಿಂದ ಮತ್ತೆ ಕೆಲಸ ಶುರುವಾಗಿದೆ’ ಎನ್ನುತ್ತಾರೆ ಫಲಾನುಭವಿಯೊಬ್ಬರು.

ADVERTISEMENT

‘ಚಾವಣಿ ಹಂತಕ್ಕೆ ಬಂದಿರುವ ಮನೆಗಳನ್ನು ಪೂರ್ಣಗೊಳಿಸಬಹುದು. ಆದರೆ, ತಳಪಾಯ ಹಾಕಿರುವ, ಗೋಡೆ ಎಬ್ಬಿಸಿರುವ ಮನೆಗಳನ್ನು ಮಳೆಗಾಲದ ಒಳಗೆ ಪೂರ್ಣ ಮಾಡುವುದು ಕಷ್ಟ. ಹೆಚ್ಚಿನವರು ಇದ್ದ ಸಣ್ಣ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು, ಹೊಸ ಮನೆ ಕಟ್ಟುತ್ತಿರುತ್ತಾರೆ. ಅಂತಹವರು ಜೋಪಡಿಯಲ್ಲೇ ಈ ಮಳೆಗಾಲ ಕಳೆಯಬೇಕಾಗಿದೆ’ ಎಂದು ಅವರು ಹೇಳಿದರು.

2016-17ರಿಂದ ಈವರೆಗೆ ನಾಲ್ಕು ವರ್ಷಗಳಲ್ಲಿ ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಝನೆ, ದೇವರಾಜ ಅರಸು ವಸತಿ ಯೋಜನೆ, ಕುಶಲಕರ್ಮಿ ಯೋಜನೆ ಸೇರಿ ವಸತಿ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿಗೆ 2489 ಮನೆಗಳು ಮಂಜೂರು ಆಗಿವೆ. ಆದರೆ, ಅವುಗಳಲ್ಲಿ 270 ಮನೆಗಳ ನಿರ್ಮಾಣ ಇನ್ನಷ್ಟೇ ಆರಂಭವಾಗಬೇಕಾಗಿದೆ. ಕೆಲ ವಲಸಿಗರು ವಸತಿ ಯೋಜನೆ ಫಲಾನುಭವಿಯಾಗಿದ್ದರು. ಅವರು ಮನೆ ನಿರ್ಮಾಣಕ್ಕೆ ಹಿಂದೇಟು ಹಾಕಿದರು. ಅರ್ಜಿ ಸಲ್ಲಿಸಿದವರಲ್ಲಿ ಕೆಲವರು ಮರಣ ಹೊಂದಿದ್ದು, ತಾಂತ್ರಿಕ ಕಾರಣಕ್ಕೆ ಅವರು ಕುಟುಂಬಕ್ಕೆ ಮನೆ ನಿರ್ಮಿಸಿಕೊಳ್ಳಲು ಆಗಲಿಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು.

325 ಮನೆಗಳು ತಳಪಾಯದ ಹಂತದಲ್ಲಿದ್ದರೆ, 278 ಮನೆಗಳು ಲಿಂಟಲ್‌ವರೆಗೆ, 349 ಮನೆಗಳು ಚಾವಣಿಯ ಹಂತ ತಲುಪಿವೆ. 1267 ಮನೆಗಳು ಪೂರ್ಣಗೊಂಡಿವೆ. 2019–20ರಲ್ಲಿ ಮಂಜೂರು ಆಗಿರುವ ಮನೆಗಳು, ಕೋವಿಡ್ 19 ಕಾರಣಕ್ಕೆ ಕಾಮಗಾರಿ ಆರಂಭವಾಗಲು ವಿಳಂಬವಾಗಿವೆ. 2010ರಲ್ಲಿ ಮನೆ ಮಂಜೂರು ಆಗಿದ್ದರೂ, ಮನೆ ನಿರ್ಮಿಸದ ಫಲಾನುಭವಿಗಳ ಮಂಜೂರು ಆದೇಶ ಹಿಂಪಡೆಯಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

**

ಮನೆ ಮಂಜೂರು ಆಗಿ 90 ದಿನಗಳೊಳಗೆ ಕಾಮಗಾರಿ ನಡೆಸಬೇಕು. ಪ್ರಸ್ತುತ ಲಾಕ್‌ಡೌನ್ ಇದ್ದ ಕಾರಣ ವಿಳಂಬವಾಗಿರುವ ಮನೆ ನಿರ್ಮಾಣಕ್ಕೆ ಕಾಲಾವಕಾಶ ನೀಡಲಾಗಿದೆ. ಈಗಲೂ ಮನೆ ಕಟ್ಟದಿದ್ದರೆ ಅನುಮತಿ ವಾಪಸ್ ಪಡೆಯಲಾಗುವುದು
–ಎಫ್.ಜಿ.ಚಿನ್ನಣ್ನನವರ್,ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.