ADVERTISEMENT

ಕೊಂಕಿಕೋಟೆ ದಟ್ಟಾರಣ್ಯದಲ್ಲಿ ಭೂಕುಸಿತ

ಕಾಡಿನ ನಡುವೆ ನದಿಯಷ್ಟು ಅಗಲಕ್ಕೆ ಬಾಯ್ತೆರೆದ ಭೂಮಿ

ಗಣಪತಿ ಹೆಗಡೆ
Published 11 ಆಗಸ್ಟ್ 2021, 19:44 IST
Last Updated 11 ಆಗಸ್ಟ್ 2021, 19:44 IST
ಶಿರಸಿ ತಾಲ್ಲೂಕಿನ ಕೊಂಕಿಕೋಟೆ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭಿಸಿರುವುದು.
ಶಿರಸಿ ತಾಲ್ಲೂಕಿನ ಕೊಂಕಿಕೋಟೆ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭಿಸಿರುವುದು.   

ಶಿರಸಿ: ಜು.22, 23 ರಂದು ಸುರಿದ ವರ್ಷಧಾರೆ ತಾಲ್ಲೂಕಿನ ಕೊಂಕಿಕೋಟೆ ಸಮೀಪದ ದಟ್ಟ ಅಡವಿಯಲ್ಲಿ ಭಾರಿ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗಿರುವುದು ತಡವಾಗಿ ತಿಳಿದು ಬಂದಿದೆ.

ಹುಲೇಕಲ್ ಅರಣ್ಯ ವಲಯ ವ್ಯಾಪ್ತಿಗೊಳಪಡುವ ಈ ಕಾಡಿನ ನಡುವೆ ಚಿಕ್ಕ ಝರಿಯ ಅಕ್ಕಪಕ್ಕ ಸುಮಾರು 100 ಮೀಟರ್ ನಷ್ಟು ಅಗಲಕ್ಕೆ ಭೂಮಿ ಬಾಯ್ತೆರೆದುಕೊಂಡಿದೆ. ಒಂದು ಕಿ.ಮೀ.ಗೂ ಹೆಚ್ಚು ಉದ್ದದವರೆಗೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದು ಐದು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಸ್ಥರ ಗಮನಕ್ಕೆ ಬಂದಿದೆ.

ಕಾಡಿಗೆ ಹತ್ತಿರದ ಗದ್ದೆಹಳ್ಳಿ, ಬಾಳಗಿಮನೆ, ಸಮ್ರಳ್ಳಿ, ಕೊಂಕಿಕೋಟೆ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

ADVERTISEMENT

‘ಒಂದೆರಡು ಅಡಿಯಷ್ಟು ಅಗಲದ ಹಳ್ಳ ಕಾಡಿನ ನಡುವೆ ಹರಿದಿತ್ತು. ಈಗ ಅದು ನದಿಯ ಗಾತ್ರಕ್ಕೆ ಹಿಗ್ಗಿದೆ. ತೇಗ, ಸಾಗವಾನಿ ಸೇರಿದಂತೆ ನೂರಾರು ದೊಡ್ಡಗಾತ್ರದ ಮರಗಳು ಬುಡಸಮೇತ ತಿರುಚಿ ಬಿದ್ದಿರುವುದು ಕುಸಿತದ ಭೀಕರತೆ ತೋರಿಸುತ್ತದೆ. ಬೆಳಕು ಕಾಣದ ದಟ್ಟ ಕಾಡಿನಲ್ಲಿ ಎಕರೆಗಟ್ಟಲೆ ಪ್ರದೇಶ ಬಯಲಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಗದ್ದೆಹಳ್ಳಿಯ ಲಕ್ಷೀಕಾಂತ ಹೆಗಡೆ.

‘ಇಲ್ಲಿಂದ ಎರಡು ಕಿ.ಮೀ ದೂರದ ಒಂದು ಭಾಗದಲ್ಲಿ ಗಂಗಾವಳಿ ನದಿ ಹರಿಯುತ್ತಿದೆ. ಇನ್ನೊಂದು ಭಾಗದಲ್ಲಿ ಅಲ್ಲಲ್ಲಿ ಮನೆಗಳಿರುವ ನಾಲ್ಕಾರು ಗ್ರಾಮಗಳಿವೆ. ಗಣಿಗಾರಿಕೆಯಂತಹ ಪರಿಸರಕ್ಕೆ ಧಕ್ಕೆ ತರಬಹುದಾದ ಚಟುವಟಿಕೆಯಿಂದ ದೂರವಿದ್ದ ಪ್ರದೇಶದಲ್ಲಿ ಕುಸಿತ ಸಂಭವಿಸಿರುವುದು ಅಚ್ಚರಿ ಮೂಡಿಸುತ್ತದೆ. ಘಟನೆ ಮರುಕಳಿಸಿದರೆ ಗ್ರಾಮದ ಭೌಗೋಳಿಕ ಸನ್ನಿವೇಶವೇ ಬದಲಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ದುರ್ಗಮ ದಟ್ಟಾರಣ್ಯದಲ್ಲಿ ಕುಸಿತ ಉಂಟಾಗಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಹಾನಿ ಉಂಟಾಗಿರುವುದನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಣಯಿಸಲಾಗುವುದು’ ಎಂದು ಹುಲೇಕಲ್ ಆರ್.ಎಫ್.ಓ. ಮಂಜುನಾಥ ಹೆಬ್ಬಾರ ಪ್ರತಿಕ್ರಿಯಿಸಿದ್ದಾರೆ.

‘ಕಾಡು ಹೆಚ್ಚಿನ ಪ್ರಮಾಣದ ನೀರು ಇಂಗಿಸಿಕೊಳ್ಳುತ್ತದೆ. ಸತತ ಇಂಗುವಿಕೆಯಿಂದ ನೆಲದ ತಳಪದರ ಸಡಿಲಗೊಂಡು ಕುಸಿತವಾಗಿರುವ ಸಾಧ್ಯತೆಯೂ ಇರುತ್ತದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.