ADVERTISEMENT

ತಾತ್ಕಾಲಿಕ ದುರಾಸೆಗೆ ಬಲಿಯಾದರೆ ಶಾಶ್ವತ ವಿನಾಶ: ಸರ್ಕಾರಗಳಿಗೆ ಎಚ್ಚರಿಕೆ

ಜನ ಸಮಾವೇಶ: ನದಿ ಜೋಡಣೆ ಯೋಜನೆಗಳ ವಿರುದ್ಧ ಸರ್ಕಾರಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:33 IST
Last Updated 12 ಜನವರಿ 2026, 7:33 IST
ಶಿರಸಿಯಲ್ಲಿ ನದಿ ಜೋಡಣೆ ವಿರೋಧಿಸಿ ನಡೆದ ಜನ ಸಮಾವೇಶದಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು
ಶಿರಸಿಯಲ್ಲಿ ನದಿ ಜೋಡಣೆ ವಿರೋಧಿಸಿ ನಡೆದ ಜನ ಸಮಾವೇಶದಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು   

ಶಿರಸಿ: ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಕೊಡಲಿ ಪೆಟ್ಟು ನೀಡುವ ಹಾಗೂ ಪರಿಸರದ ಸಮತೋಲನ ಕದಡುವ ನದಿ ಜೋಡಣೆ ಯೋಜನೆಗಳ ವಿರುದ್ಧ ಶಿರಸಿಯಲ್ಲಿ ಬೃಹತ್ ಜನಜಾಗೃತಿ ಮತ್ತು ಪ್ರತಿರೋಧದ ಅಲೆ ಎಬ್ಬಿಸಿತು. ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಗರದ ಎಂಇಎಸ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನ ಸಮಾವೇಶವು, ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು.

ಪಶ್ಚಿಮಘಟ್ಟದ ಅಸ್ತಿತ್ವಕ್ಕೇ ಸಂಚಕಾರ ತರಬಲ್ಲ ಈ ಯೋಜನೆಗಳನ್ನು ‘ಮರಣ ಶಾಸನ’ ಎಂದು ಬಣ್ಣಿಸಿದ ಸಮಾವೇಶವು, ಯಾವುದೇ ಕಾರಣಕ್ಕೂ ಇವುಗಳ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂಬ ದೃಢ ಸಂಕಲ್ಪವನ್ನು ಪ್ರಕಟಿಸಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ‘ನದಿ ಜೋಡಣೆಗೆ ಜನರ ವಿರೋಧ ಇರುವುದನ್ನು ಜನಪ್ರತಿನಿಧಿಗಳು ಸರ್ಕಾರಕ್ಕೆ ತಲುಪಿಸಬೇಕು. ಜನಪ್ರತಿನಿಧಿಗಳು ಮುಂದಿನ ಹೋರಾಟದ ನೇತೃತ್ವ ವಹಿಸಬೇಕು. ಜನಪ್ರತಿನಿಧಿಗಳು ಸಂಘಟಿತರಾಗಿ ಹೋರಾಡದಿದ್ದರೆ ಮುಂಬರುವ ದಿನಗಳಲ್ಲಿ ಸಾಮೂಹಿಕವಾಗಿ ಇಡೀ ಜಿಲ್ಲೆಯ ಚುನಾವಣೆಯನ್ನೇ ಜನರು ಬಹಿಷ್ಕರಿಸುವ ಕಾಲ ಬರಬಹುದು’ ಎಂದು ಎಚ್ಚರಿಸಿದರು. 

ADVERTISEMENT

‘ನದಿ ಜೋಡಣೆ ಯೋಜನೆಗಳ ಅನುಷ್ಠಾನ ಅತಾರ್ಕಿಕ ಮತ್ತು ಅವೈಜ್ಞಾನಿಕ. ತಾತ್ಕಾಲಿಕ ದುರಾಸೆಗೆ ಬಲಿಯಾದರೆ ಶಾಶ್ವತವಾದ ವಿನಾಶ ಕಟ್ಟಿಟ್ಟ ಬುತ್ತಿ. ಇದು ಸರ್ಕಾರಕ್ಕೆ ಅರ್ಥವಾಗಿಲ್ಲ ಎಂಬುದೇ ಆಶ್ಚರ್ಯದ ಸಂಗತಿ. ಈ ಯೋಜನೆಯಿಂದ ಬಯಲು ಸೀಮೆಯ ಜನರಿಗೂ ನೀರು ಲಭಿಸದು. ಹಾಗಾಗಿ ಈ ಹೋರಾಟದಲ್ಲಿ ಅವರು ಕೂಡ ಭಾಗಿಯಾಗಬೇಕು’ ಎಂದರು.

‘ನದಿ ಜೋಡಣೆಯ ವಿರುದ್ಧದ ಈ ಹೋರಾಟವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಾದುದಲ್ಲ. ಇದು ಕೇವಲ ಪ್ರಕೃತಿ ಮತ್ತು ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗಿ ಅರಣ್ಯ ಅತಿಕ್ರಮಣದಾರರು ಮತ್ತೆ ಒಕ್ಕಲೆಬ್ಬಿಸಲ್ಪಡುವ ಭೀತಿಯಲ್ಲಿದ್ದಾರೆ. ದೇಶದಲ್ಲಿ ಹಲವು ನದಿ ಯೋಜನೆಗಳಿವೆ, ನಾವು ಅವುಗಳನ್ನೆಲ್ಲ ವಿರೋಧಿಸುತ್ತಿಲ್ಲ. ಆದರೆ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳಿಗೆ ನಮ್ಮ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ‘ಸೃಷ್ಟಿಗೆ ವಿರೋಧವಾಗಿ ನದಿ ತಿರುವು ಯೋಜನೆ ಮಾಡುವುದಕ್ಕೆ ವಿರೋಧವಿದೆ. ಜಿಲ್ಲೆಯ ಜನರಿಗೆ ಬೇಡವಾದ ಈ ಯೋಜನೆ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಆಗ ಇಲ್ಲಿನ ಜನಪ್ರತಿನಿಧಿಗಳು ಸುಮ್ಮನಿದ್ದರು. ಆಗಲೇ ವಿರೋಧಿಸಿದ್ದರೆ ಇಂದು ಇಂಥ ಸ್ಥಿತಿ ಬರುತ್ತಿರಲಿಲ್ಲ. ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಡಬೇಕು. ನದಿ ಜೋಡಣೆ ಇದು ಇಡೀ ಜಿಲ್ಲೆಯ ಸಮಸ್ಯೆ. ಈ ಯೋಜನೆ ಕೈಬಿಡಬೇಕು. ಪಕ್ಷಾತೀತವಾಗಿ ದನಿಗೂಡಿಸಬೇಕು’ ಎಂದರು. 

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,‘ರಾಜ್ಯ, ದೇಶಕ್ಕೆ ಹಲವು ಯೋಜನೆ ಮೂಲಕ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ಇಂಥ ಜಿಲ್ಲೆಯಲ್ಲಿ ಜನರ ಭಾವನೆಗೆ, ಬದುಕಿಗೆ ಭಾರವಾಗುವ ಯೋಜನೆ ಅನುಷ್ಠಾನ ಮಾಡುವ ಮುನ್ನ ಯೋಚಿಸಬೇಕು. ಅಧಿಕಾರ ಬರುತ್ತದೆ ಹೋಗುತ್ತದೆ, ಆದರೆ ಈ ಯೋಜನೆಯಾದರೆ ಶಾಶ್ವತ ನಷ್ಟವಾಗುತ್ತದೆ. ಹಾಗಾಗಿ ಯೋಜನೆ ಸ್ಥಗಿತಕ್ಕೆ ಬೆಂಬಲ ಸೂಚಿಸಬೇಕಿದೆ’ ಎಂದರು.

ನೆಲಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪರಿಸರ ಹಾಗೂ ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ, ಎಂಎಲ್ ಸಿ ಶಾಂತಾರಾಮ ಸಿದ್ದಿ ಇದ್ದರು. ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ಸ್ವಾಗತಿಸಿದರು.

ಶಿರಸಿಯಲ್ಲಿ ನಡೆದ ಜನ ಸಮಾವೇಶದಲ್ಲಿ ಪಾಲ್ಗೊಂಡ ಪರಿಸರ ಕಾರ್ಯಕರ್ತರು

Quote - ಸರ್ಕಾರಗಳು ಜಿಲ್ಲೆಯ ಜನತೆಯನ್ನು ಅವರ ಪಾಡಿಗೆ ಬದುಕಲು ಬಿಡಬೇಕು. ಯೋಜನೆಗಳ ದುಷ್ಪರಿಣಾದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವ ಅಗತ್ಯವಿದೆ. ಶಿವರಾಮ ಹೆಬ್ಬಾರ ಶಾಸಕ

ನಿಮ್ಮ ಬಳಿ ಯಾವ ಪರಿಹಾರವಿದೆ?

‘ನದಿ ಜೋಡಣೆ ಯೋಜನೆಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಆಗುವ ಉಪಯೋಗವಾದರೂ ಏನು? ನಮ್ಮ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳಿಗೆ ನಿಮ್ಮ ಬಳಿ ಯಾವ ಪರಿಹಾರವಿದೆ?’ ಎಂದು ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು. ಜನ ಸಮಾವೇಶದಲ್ಲಿ ರಾಜಕಾರಣಿಗಳ ನಡೆಯನ್ನು ತೀವ್ರವಾಗಿ ಖಂಡಿಸಿದ ಅವರು ‘ನಾವು ಸರ್ಕಾರವನ್ನು ಕೇಳಿದ್ದು ಕೇವಲ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಆದರೆ ಜನರ ಜೀವ ಉಳಿಸುವ ಆಸ್ಪತ್ರೆ ಕಟ್ಟಲು ಮನಸ್ಸು ಮಾಡದ ಸರ್ಕಾರ ಕೇಳದೆಯೇ ಜಿಲ್ಲೆಗೆ ಒಂದಾದ ಮೇಲೆ ಒಂದರಂತೆ ಮಾರಕ ಯೋಜನೆಗಳನ್ನು ಹೇರುತ್ತಿದೆ. ನಾವೂ ಸಹ ತೆರಿಗೆ ಪಾವತಿಸುವ ನಾಗರಿಕರಲ್ಲವೇ? ನಮ್ಮ ನೀರನ್ನು ಕೊಂಡೊಯ್ಯುವ ಹಕ್ಕು ನಿಮಗಿದ್ದರೆ ನಮಗೆ ಬೇಕಾದ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ನಿಮಗಿಲ್ಲವೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘​ನದಿ ಜೋಡಣೆಯಂತಹ ಗಂಭೀರ ವಿಚಾರಗಳಲ್ಲಿ ನಿಮ್ಮ ಪಕ್ಷಗಳ ಅಧಿಕೃತ ನಿಲುವು ಏನು ಮತ್ತು ನಿಮ್ಮ ವೈಯಕ್ತಿಕ ಅಭಿಪ್ರಾಯ ಮುಖ್ಯವಲ್ಲ. ಜನಪ್ರತಿನಿಧಿಗಳಾದ ಮೇಲೆ ಜನರ ಭಾವನೆಗಳನ್ನು ಪ್ರತಿನಿಧಿಸಬೇಕೇ ಹೊರತು ವೈಯಕ್ತಿಕ ಹಿತಾಸಕ್ತಿಗಲ್ಲ’ ಎಂದರು.

ಹೋರಾಟ ನಿತಂತರ

‘ಪ್ರಕೃತಿಯನ್ನು ಸಂರಕ್ಷಿಸಿ ಅದರ ಜತೆಗೆ ಸಾಗುವ ಸರ್ಕಾರ ಉತ್ತಮ ಸರ್ಕಾರ ಎನಿಸಿಕೊಳ್ಳುತ್ತದೆ. ಆದರೆ ಪ್ರಸ್ತುತ ಸರ್ಕಾರವು ಬೇಡ್ತಿ ಮತ್ತು ಅಘನಾಶಿನಿ ನದಿಗಳಿಗೆ ಹಾಗೂ ಇಲ್ಲಿನ ಪರಿಸರಕ್ಕೆ ಹಿಂಸೆ ನೀಡುವಂತಹ ಯೋಜನೆಗಳನ್ನು ಜಾರಿಗೆ ತರಲು ಹವಣಿಸುತ್ತಿದೆ. ಇಂತಹ ಪ್ರಕೃತಿ ವಿರೋಧಿ ಧೋರಣೆಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ’ ಎಂದು ಸಭೆಯ ಸಾನ್ನಿಧ್ಯವಹಿಸಿದ್ದ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.

ಡಿಪಿಆರ್ ಸಿದ್ಧಪಡಿಸಲು ವಿರೋಧ

ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸುವುದನ್ನೂ ನಾವು ಬಲವಾಗಿ ವಿರೋಧಿಸುತ್ತೇವೆ. ತಜ್ಞರು ಸರ್ಕಾರದ ಪರವಾಗಿಯೇ ವರದಿ ನೀಡುವ ಸಾಧ್ಯತೆ ಇರುತ್ತದೆ. ನಮ್ಮ ಜನಪ್ರತಿನಿಧಿಗಳು ಜನರ ಭಾವನೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಅವರು ಈ ಹೋರಾಟದ ಮುಂಚೂಣಿಯಲ್ಲಿ ನಿಂತು ಜನರ ಧ್ವನಿಯಾಗಬೇಕು ಎಂದು ಕರೆ ನೀಡಿದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ‘ಇದೊಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿದ್ದು ಸರ್ಕಾರ ನಿರ್ಧಾರ ಬದಲಿಸದಿದ್ದರೆ ಸತತವಾಗಿ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

20 ಸಾವಿರಕ್ಕೂ ಅಧಿಕ ಜನ

ಸಮಾವೇಶದಲ್ಲಿ ಭಾಗವಹಿಸಿದ್ದ 20 ಸಾವಿರಕ್ಕೂ ಅಧಿಕ ಜನರು ನದಿಗಳ ತಿರುವು ಯೋಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಏಕಕಂಠದಿಂದ ಧ್ವನಿ ಎತ್ತಿದರು. ಪಶ್ಚಿಮಾಭಿಮುಖವಾಗಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳು ಕೇವಲ ನೀರಿನ ಮೂಲಗಳಲ್ಲ ಅವು ಈ ಭಾಗದ ಸಾವಿರಾರು ಎಕರೆ ಕೃಷಿ ಭೂಮಿ ಅಡಿಕೆ ತೋಟಗಳು ಹಾಗೂ ಅಪಾರ ಅರಣ್ಯ ಸಂಪತ್ತಿನ ಜೀವನಾಡಿಗಳಾಗಿವೆ. ಈ ನದಿಗಳ ನೀರನ್ನು ಪೂರ್ವಕ್ಕೆ ತಿರುಗಿಸುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗದ ಪರಿಸರ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಲಿದೆ. ತಕ್ಷಣ ಯೋಜನೆ ಸ್ಥಗಿತದ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಫೆಬ್ರವರಿಯಲ್ಲಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಗದ ಮೂಲಕ ಕೇಂದ್ರದಲ್ಲಿ ಸಂಬಂಧಪಟ್ಟ ಸಚಿವರ ಭೇಟಿ ಮಾಡಿ ಯೋಜನೆ ಸ್ಥಗಿತಕ್ಕೆ ಮನವರಿಕೆ ಮಾಡಲಾಗುವುದು
–ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಹಿಂದಿನ ಹಲವು ಮಾರಕ ಯೋಜನೆಗಳಲ್ಲಿ ಅರಣ್ಯವಾಸಿಗಳು ಬುಡಕಟ್ಟು ಜನರು ವನವಾಸಿಗಳು ಹೆಚ್ಚಿನ ಸಂತ್ರಸ್ತರಾಗಿದ್ದಾರೆ. ಈಗಲೂ ಅಂಥದ್ದೇ ಸ್ಥಿತಿಯಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ
–ಶಾಂತಾರಾಮ ಸಿದ್ದಿ, ಎಂಎಲ್‍ಸಿ
ನದಿ ಜೋಡಣೆಯಿಂದ ಜನರ ಬದುಕೇ ತಿರುವು ಮುರುವು ಆಗುತ್ತದೆ. ಜನರ ಬದುಕಿನ ನಾಡಿಯಾದ ನದಿಗಳು ತಾಯಿಗೆ ಸಮಾನ. ಅರಣ್ಯ ನಾಶ ಆಗುವ ನದಿ ತಿರುವು ಯೋಜನೆ ಅಭಿವೃದ್ಧಿ ಹೇಗೆ ಆಗುತ್ತದೆ
–ಮಾಧನಾನಂದ ಭಾರತೀ ಸ್ವಾಮೀಜಿ, ನೆಲಮಾವು ಮಠ
ಜಾತಿ ಮತ ಪಂಥ ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದೆ. ಈ ಯೋಜನೆ ಖಂಡಿತ ಸ್ಥಗಿತವಾಗುತ್ತದೆ. ಈ ಹೋರಾಟದ ಪ್ರಜ್ಞೆ ಮುಂದುವರಿಯಲಿ.
–ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಶಿರಳಗಿ ರಾಜಾರಾಮ ಕ್ಷೇತ್ರ