ADVERTISEMENT

ಮನೆಯಲ್ಲಿ ಯೋಗ: ಮೊಬೈಲ್‌ನಲ್ಲಿ ವೀಕ್ಷಣೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 13:06 IST
Last Updated 21 ಜೂನ್ 2020, 13:06 IST
ಶಿರಸಿ ತಾಲ್ಲೂಕಿನ ಕುಳವೆಯ ಮೂರೂವರೆ ವರ್ಷದ ಬಾಲಕ ಸುಮುಖ ಶ್ರೀಧರ ನಾಯ್ಕ ಯೋಗ ಅಭ್ಯಾಸ ಮಾಡಿದ
ಶಿರಸಿ ತಾಲ್ಲೂಕಿನ ಕುಳವೆಯ ಮೂರೂವರೆ ವರ್ಷದ ಬಾಲಕ ಸುಮುಖ ಶ್ರೀಧರ ನಾಯ್ಕ ಯೋಗ ಅಭ್ಯಾಸ ಮಾಡಿದ   

ಶಿರಸಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲ್ಲೂಕಿನ 200ಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಮನೆಯಲ್ಲೇ ಯೋಗಾಭ್ಯಾಸ ಮಾಡಿದರು. ಝೂಮ್ ಆ್ಯಪ್‌ನಲ್ಲಿ ಭೇಟಿಯಾದರು.

ಉತ್ತರ ಕನ್ನಡ ಯೋಗ ಫೆಡರೇಷನ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘದ ಘಟಕ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಶಿರಸಿ ನಗರ, ಗ್ರಾಮೀಣ, ಹುಬ್ಬಳ್ಳಿ, ಕುಮಟಾ, ಶಿವಮೊಗ್ಗ ಸೇರಿ ಸುಮಾರು 70 ಕುಟುಂಬದವರು ಭಾಗವಹಿಸಿದ್ದರು.

ಬೆಳಿಗ್ಗೆ 6 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ಸುಮನ್ ಹೆಗಡೆ ಶಾಂತಿಮಂತ್ರ ಪಠಿಸಿದರು. ಪುಟಾಣಿಗಳಾದ ದಕ್ಷ್ ಮತ್ತು ರಕ್ಷಾ ದೀಪ ಬೆಳಗಿದರು. ಡಾ. ದಿನೇಶ ಹೆಗಡೆ ಮಾತನಾಡಿ, ‘ಕೋವಿಡ್ 19 ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮಹತ್ವದ್ದು. ಪ್ರಾಣಾಯಾಮದಿಂದ ಶ್ವಾಸಕೋಶವನ್ನು ಸದೃಢವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಯೋಗದಿಂದ ಮಾನಸಿಕ, ದೈಹಿಕ ಶಕ್ತಿ ಹೆಚ್ಚುತ್ತದೆ’ ಎಂದರು.

ADVERTISEMENT

‘ಎಲ್ಲರೂ ಝೂಮ್‌ ಆ್ಯಪ್‌ ಆನ್ ಇಟ್ಟುಕೊಂಡು ಅವರವರ ಮನೆಯಲ್ಲಿ ಕುಟುಂಬ ಸಮೇತರಾಗಿ ಯೋಗಾಭ್ಯಾಸ ಮಾಡಿದರು. ಒಂದೂವರೆ ತಾಸು ಸೂರ್ಯ ನಮಸ್ಕಾರ, 20ಕ್ಕೂ ಹೆಚ್ಚು ಆಸನಗಳನ್ನು ಮಾಡಿದರು. ಅನೇಕ ಮಕ್ಕಳು ಸಹ ಉತ್ಸಾಹದಿಂದ ಭಾಗವಹಿಸಿದ್ದು ಖುಷಿಕೊಟ್ಟಿತು. ಆ್ಯಪ್ ಮೂಲಕ ಸಾಮೂಹಿಕ ಪ್ರದರ್ಶನ ಮಾಡಿದ ಕಾರಣಕ್ಕೆ ಶಿರಸಿ ಮಾತ್ರವಲ್ಲದೇ, ಹೊರ ಜಿಲ್ಲೆ, ತಾಲ್ಲೂಕಿನ ಪರಿಚಯದವರೂ ನಮ್ಮ ಜೊತೆ ಸೇರಿಕೊಂಡರು’ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶಿವರಾಮ ತಿಳಿಸಿದರು. ಉತ್ತರ ಕನ್ನಡ ಯೋಗ ಫೆಡರೇಷನ್ ಅಧ್ಯಕ್ಷ ಅನಿಲ್ ಕರಿ ವಂದಿಸಿದರು.

ರಾಯರಪೇಟೆಯ ವೆಂಕಟರಮಣ ದೇವಾಲಯಲ್ಲಿ ಕೆಲವೇ ಮಂದಿ ಯೋಗ ಮಾಡಿದರೆ, ಇನ್ನುಳಿದವರು ಆನ್‌ಲೈನ್‌ನಲ್ಲಿ ಅವರಿಗೆ ಜೊತೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.