ADVERTISEMENT

ಕಾರವಾರ: ಗಡಿಗಳಲ್ಲಿ ಭದ್ರತೆ ಹೆಚ್ಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:45 IST
Last Updated 19 ಜುಲೈ 2022, 15:45 IST
ರಾಜ್ಯದ ಗಡಿಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಒತ್ತಾಯಿಸಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು
ರಾಜ್ಯದ ಗಡಿಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಒತ್ತಾಯಿಸಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು   

ಕಾರವಾರ: ‘ಕಾರವಾರವೂ ಸೇರಿದಂತೆ ರಾಜ್ಯದ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳ ಜೊತೆಗೇ ಸಿ.ಐ.ಎಸ್.ಎಫ್ ಅಥವಾ ಇನ್ಯಾವುದೇ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮಂಗಳವಾರ ಅವರು ಮನವಿ ಸಲ್ಲಿಸಿದರು.

‌‘ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೇನರ್, ಮಾಜಾಳಿಯ ಚೆಕ್‌ಪೋಸ್ಟ್ ದಾಟಿ ಒಳಗೆ ಕಾರವಾರದ ಮೂಲಕ ಸಾಗಿದೆ. ನಡುವೆ ಸದಾಶಿವಗಡದಲ್ಲಿ ಹಾಗೂ ನಗರದ ಲಂಡನ್ ಬ್ರಿಜ್ ಬಳಿ ಪೊಲೀಸ್ ನಾಕಾಗಳಿವೆ. ಅವುಗಳನ್ನೂ ದಾಟಿ ಮುಂದೆ ಸಾಗಿದ ಕಂಟೇನರ್ ಅನ್ನು ಪೊಲೀಸರು ಬಿಣಗಾದಲ್ಲಿ ವಶ ಪಡಿಸಿಕೊಂಡಿದ್ದಾರೆ. ಇದರಿಂದ ತಪಾಸಣೆಯಲ್ಲಿ ಆಗುತ್ತಿರುವ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಲಾರಿಯಲ್ಲಿ ಔಷಧಿ ಸಾಗಿಸುತ್ತಿರುವುದಾಗಿ ಲಾರಿ ಚಾಲಕ ತಿಳಿಸಿದ್ದಕ್ಕೆ ತಪಾಸಣೆ ಮಾಡದೇ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಔಷಧಿಯ ನೆಪದಲ್ಲಿ ಮುಂದೊಂದು ದಿನ ಸ್ಫೋಟಕಗಳು, ಶಸ್ತ್ರಾಸ್ತ್ರಗಳನ್ನು ಸಾಗಿಸಿದರೆ ದುಷ್ಕರ್ಮಿಗಳು ತಂದರೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಭಾರತೀಯ ನೌಕಾನೆಲೆಯಿದೆ. ತಾಲ್ಲೂಕಿನ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಹಾಗೂ ಬೃಹತ್ ಜಲಾಶಯಗಳಿವೆ. ಭದ್ರತೆಯ ದೃಷ್ಟಿಯಿಂದ ಈ ಭಾಗ ಅತ್ಯಂತ ಸೂಕ್ಷ್ಮವಾಗಿದೆ. ಈ ರೀತಿಯ ನಿರ್ಲಕ್ಷ್ಯಗಳು ದೇಶದ ಭದ್ರತೆಗೆ ಸವಾಲಾಗಬಲ್ಲವು. ಆದ್ದರಿಂದ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.