ಕಾರವಾರ: ‘ಉತ್ತರ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಕೈಗಾ ಅಣು ಸ್ಥಾವರ ಕಾರಣ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಲ್ಲಿಂದ ಹೊರ ಪರಿಸರಕ್ಕೆ ವಿಕಿರಣ ಹರಡುವುದೂ ಇಲ್ಲ, ಕಾಳಿನದಿಗೆ ವಿಕಿರಣ ಕಾರಕ ನೀರು ಹರಿಬಿಡಲಾಗುತ್ತಿಲ್ಲ’ ಎಂದು ಅಣು ವಿದ್ಯುತ್ ನಿಗಮದ ಕೈಗಾ ಘಟಕದ ಸ್ಥಳ ನಿರ್ದೇಶಕ ಬಿ.ವಿನೋದ ಕುಮಾರ್ ಸ್ಪಷ್ಟಪಡಿಸಿದರು.
‘ಕೈಗಾದ 1 ರಿಂದ 4ನೇ ಅಣು ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆ ಪ್ರಕ್ರಿಯೆಯ ವೇಳೆ ಸ್ಥಾವರಗಳ ತಾಪಮಾನ ನಿಯಂತ್ರಿಸಲು ಬಳಕೆಯಾಗುವ ನೀರನ್ನು ಶುದ್ಧೀಕರಿಸಿ, ವಿಕಿರಣಕಾರಕ ಅಂಶಗಳಿಲ್ಲದಂತೆ ಶುದ್ಧೀಕರಿಸಿದ ಬಳಿಕವೇ ನದಿಗೆ ಬಿಡಲಾಗುತ್ತಿದೆ. ಇದೇ ನದಿಯ ನೀರನ್ನು ಕೈಗಾ ಟೌನ್‌ಶಿಪ್‌ಗೆ ಬಳಕೆ ಮಾಡುತ್ತಿದ್ದೇವೆ. ಮೂರು ದಶಕಗಳಿಂದ ಇದೇ ನೀರನ್ನು ನಾವೂ ಸೇವಿಸುತ್ತಿದ್ದೇವೆ’ ಎಂದು ಮಂಗಳವಾರ ಕೈಗಾದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಉದ್ಯೋಗದಲ್ಲಿ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ ಎಂಬುದು ಅನಗತ್ಯ ಆರೋಪ. ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ 995 ಕಾಯಂ ನೌಕರರ ಪೈಕಿ 483 ಮಂದಿ ಕರ್ನಾಟಕದವರು. 2,057 ಹೊರಗುತ್ತಿಗೆ ನೌಕರರ ಪೈಕಿ 1,062 ಇದೇ ಜಿಲ್ಲೆಯವರಿದ್ದಾರೆ. ನಿಗಮಕ್ಕೆ ಕಾಯಂ ನೌಕರರ ಆಯ್ಕೆಗೆ ಕೇಂದ್ರ ಕಚೇರಿಯಿಂದಲೇ ಪರೀಕ್ಷೆ ನಡೆಸಲಾಗುತ್ತದೆ. ಸ್ಥಳೀಯವಾಗಿ ಸೌಕರ್ಯಗಳಿಲ್ಲದ ಕಾರಣಕ್ಕೆ ಹೊರಜಿಲ್ಲೆಯಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಕೈಗಾದ 1ರಿಂದ 4ನೇ ಅಣು ಸ್ಥಾವರ ಘಟಕಗಳು ಈವರೆಗೆ 1.3 ಲಕ್ಷ ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಿವೆ. ಕಲ್ಲಿದ್ದಲು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಪರಿಸರಕ್ಕೆ ಹಾನಿ ಹೆಚ್ಚು. ಅಣು ಸ್ಥಾವರಗಳಿಂದ ಪರಿಸರಕ್ಕೆ ಅಷ್ಟೇನೂ ಹಾನಿ ಇಲ್ಲ. ಹೀಗಾಗಿ ಗರಿಷ್ಠಮಟ್ಟದ ವಿದ್ಯುತ್ ಉತ್ಪಾದಿಸುವ ಮೂಲಕ ಪರಿಸರಕ್ಕೆ ಹಾನಿಯುಂಟಾಗುವ ಪ್ರಮಾಣವನ್ನೂ ಕೈಗಾದ ಘಟಕಗಳು ನಿಯಂತ್ರಿಸಿವೆ’ ಎಂದರು.
‘ಕೈಗಾದ ಅಣು ವಿದ್ಯುತ್ ಸ್ಥಾವರದಿಂದ ಅರಣ್ಯಕ್ಕೆ ಹಾನಿಯಾಗದೆ, ಈ ಭಾಗದ ಕಾಡುಗಳಲ್ಲಿ ವನ್ಯಜೀವಿ ಸಂತತಿ ಹೆಚ್ಚಿದೆ ಎಂಬುದನ್ನು ಡೆಹ್ರಾಡೂನ್‌ನ ರಾಷ್ಟ್ರೀಯ ವನ್ಯಜೀವಿ ಸಂಸ್ಥೆಯ ವರದಿ ತಿಳಿಸಿದೆ. ವನ್ಯಜೀವಿಗಳ ಸಂರಕ್ಷಣೆ, ಅರಣ್ಯೀಕರಣದ ಉದ್ದೇಶಕ್ಕೆ ₹27 ಕೋಟಿಯಷ್ಟು ನಿಧಿಯನ್ನು ವಿನಿಯೋಗಿಸಿದ್ದೇವೆ’ ಎಂದರು.
5, 6ನೇ ಘಟಕದ ಕುರಿತು ಮುಖ್ಯ ಎಂಜಿನಿಯರ್ ರಮೇಶ ಎಚ್.ಎನ್, 3, 4ನೇ ಘಟಕದ ಕುರಿತು ಯೋಜನಾಧಿಕಾರಿ ಚಿತ್ತರಂಜನ್, ವಿಕಿರಣದ ಕುರಿತು ಹೇಮಂತ್ ಹಳ್ದಾವನೇಕರ್ ವಿವರಿಸಿದರು.
ಹಿರಿಯ ಅಧಿಕಾರಿಗಳಾದ ಉಮೇದ ಯಾದವ್, ಎಸ್.ಕೆ.ಒಝಾ, ಜೆ.ಎಲ್.ಸಿಂಗ್, ಸುವರ್ಣಾ ಗಾಂವಕರ್ ಇದ್ದರು.
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕಾಯಂ ಹುದ್ದೆಗಳ ಆಯ್ಕೆಗೆ ನಡೆಯುವ ಪರೀಕ್ಷೆಗೆ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಕೇಂದ್ರ ಆರಂಭಿಸಿದ್ದೇವೆಬಿ.ವಿನೋದ ಕುಮಾರ್ ಅಣು ವಿದ್ಯುತ್ ನಿಗಮದ ಕೈಗಾ ಘಟಕದ ಸ್ಥಳ ನಿರ್ದೇಶಕ
ಅಭಿವೃದ್ಧಿ ಕೆಲಸಕ್ಕೆ ₹119 ಕೋಟಿ ವಿನಿಯೋಗ
‘ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕವು ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಕೈಗಾದಿಂದ 16 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ರೋಗ್ಯ ಶಿಕ್ಷಣ ಸ್ವಚ್ಛತೆ ಕೌಶಲಾಭಿವೃದ್ಧಿ ಚಟುವಟಿಕೆಗೆ ₹119 ಕೋಟಿಯಷ್ಟು ಮೊತ್ತ ವಿನಿಯೋಗಿಸಿದೆ. ಗ್ರಾಮೀಣ ಅಭಿವೃದ್ಧಿಗೆ ಅವುಗಳಲ್ಲಿ ₹110 ಕೋಟಿಯಷ್ಟು ವಿನಿಯೋಗಿಸಲಾಗಿದ್ದು ಶಾಲೆ ಕಟ್ಟಡ ಸೇತುವೆಗಳನ್ನು ನಿರ್ಮಿಸಲಾಗಿದೆ’ ಎಂದು ಸಿಎಸ್‌ಆರ್ ವಿಭಾಗದ ಅಧಿಕಾರಿ ಸಾಯಿನಾಥ ನಾಯ್ಕ ಹೇಳಿದರು. ‘ಸ್ಥಳಿಯವಾಗಿ ಮಾತ್ರವಲ್ಲದೇ ರಾಯಚೂರು ಯಾದಗಿರಿ ಜಿಲ್ಲೆಗಳಲ್ಲಿಯೂ ಆರೋಗ್ಯ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅನುದಾನ ವಿನಿಯೋಗಿಸಲಾಗಿದೆ. ಜೊಯಿಡಾ ಮುಂಡಗೋಡದಲ್ಲಿಯೂ ಹಲವು ಚಟುವಟಿಕೆ ಕೈಗೊಂಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.