ಕಾರವಾರದಲ್ಲಿ ಕುಸಿದು ಬಿದ್ದಿದ್ದ ಕಾಳಿ ನದಿಯ ಹಳೆ ಸೇತುವೆ ಅವಶೇಷಗಳ ಬಹುತೇಕ ತೆರವುಗೊಂಡಿದ್ದು, ಪಕ್ಕದ ಇನ್ನೊಂದು ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ
–ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕುಸಿದು ಬಿದ್ದಿದ್ದ, ಕಾಳಿ ನದಿ ಹಳೆ ಸೇತುವೆ ಅವಶೇಷಗಳ ತೆರವು ಕಾರ್ಯ ಆರು ತಿಂಗಳಲ್ಲೇ ಪೂರ್ಣಗೊಳ್ಳಲಿದೆ. ಆದರೆ ಹೊಸ ಸೇತುವೆ ನಿರ್ಮಾಣಕ್ಕೆ ಸುದೀರ್ಘ ಸಮಯ ಬೇಕಾಗಬಹುದು.
‘ರಾಷ್ಟ್ರೀಯ ಹೆದ್ದಾರಿ–66ರಲ್ಲಿ, 2017ರಲ್ಲಿ ನಿರ್ಮಿತ ಸೇತುವೆ ಮೇಲೆ ವಾಹನಗಳ ಸಂಚಾರ ಮುಂದಿನ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚಾಗಬಹುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದಾಜಿಸಿದೆ.
41 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ 665 ಮೀಟರ್ ಉದ್ದದ ಸೇತುವೆ 2024ರ ಆಗಸ್ಟ್ 7ರ ತಡರಾತ್ರಿ ಕುಸಿದು ಬಿದ್ದಿತ್ತು. ಸೇತುವೆ ಕುಸಿದು ಬಿದ್ದ ಒಂದು ತಿಂಗಳ ಬಳಿಕ (ಸೆಪ್ಟೆಂಬರ್ 9) ಅವಶೇಷ ತೆರವು ಕಾರ್ಯ ಆರಂಭಗೊಂಡಿತ್ತು. 600 ಮೀಟರ್ ಉದ್ದದಷ್ಟು ಸೇತುವೆಯ ಭಾಗ, 6 ಕಾಂಕ್ರೀಟ್ ಕಂಬ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ವೇಳೆ ಬಿದ್ದ ಸೇತುವೆಯ ಅಲ್ಪ ಭಾಗ ತೆರವು ಕಾರ್ಯ ಮಾತ್ರ ಬಾಕಿ ಉಳಿದಿದೆ.
‘ಕುಸಿದು ಬಿದ್ದ ಸೇತುವೆಯ ಅವಶೇಷಗಳನ್ನು ಏಪ್ರಿಲ್ ಒಳಗೆ ತೆರವುಗೊಳಿಸಲು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿರುವ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ಸೂಚಿಸಲಾಗಿತ್ತು. ನಿರೀಕ್ಷಿತ ಅವಧಿಗೂ ಮುನ್ನವೇ ಅವಶೇಷ ತೆರವು ಕೆಲಸ ಮುಗಿಯುವ ಸಾಧ್ಯತೆ ಇದೆ. ಸ್ವಲ್ಪವೇ ಕೆಲಸ ಬಾಕಿ ಉಳಿದಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾರವಾರದಲ್ಲಿ ಕುಸಿದು ಬಿದ್ದಿದ್ದ ಕಾಳಿ ನದಿಯ ಹಳೆ ಸೇತುವೆ ಅವಶೇಷಗಳ ಬಹುತೇಕ ತೆರವುಗೊಂಡಿದ್ದು ಪಕ್ಕದ ಇನ್ನೊಂದು ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ –ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
ಜಾಗ ನೀಡದ ಜಿಲ್ಲಾಡಳಿತ
‘ಸೇತುವೆ ಅವಶೇಷಗಳನ್ನು ದಾಸ್ತಾನು ಮಾಡಲು 8 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಿದ್ದೆವು. ಜಾಗ ಸಿಗದಿದ್ದಕ್ಕೆ ಸೇತುವೆ ಕುಸಿದು ಬಿದ್ದ ಸ್ಥಳದ ಸಮೀಪದಲ್ಲೇ ಅವಶೇಷಗಳನ್ನು ನದಿ ತೀರದ ಜಟ್ಟಿಗೆ ಹಾಸಲಾಗಿದೆ’ ಎಂದು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಅಧಿಕಾರಿಯೊಬ್ಬರು ಹೇಳಿದರು. ‘ಜಾಗ ಹುಡುಕಾಟಕ್ಕೆ ಸಾಕಷ್ಟು ಪ್ರಯತ್ನಿಸಲಾಗಿದೆ. ಒಂದೇ ಕಡೆ 8 ಎಕರೆ ಸರ್ಕಾರಿ ಜಾಗ ಸಿಗದ ಕಾರಣ ಜಾಗ ಒದಗಿಸಲು ಸಾಧ್ಯವಾಗಿಲ್ಲ’ ಎಂದು ತಹಶೀಲ್ದಾರ್ ನಿಶ್ಚಲ್ ನೊರ್‍ಹೋನಾ ತಿಳಿಸಿದರು.
ಹಳೆ ಸೇತುವೆ ಕುಸಿದು ಬಿದ್ದ ಜಾಗದಲ್ಲೇ ಹೊಸದಾಗಿ ಉಕ್ಕಿನ ಕಮಾನಿನ ಸೇತುವೆ ನಿರ್ಮಿಸಲು ಪ್ರಸ್ತಾವ ಕಳಿಸಲು ಯೋಜಿಸಲಾಗಿದೆ–ಕೆ.ಶಿವಕುಮಾರ್, ಯೋಜನಾ ನಿರ್ದೇಶಕ ಎನ್‌ಎಚ್‌ಎಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.