ADVERTISEMENT

ಕಾಳಿ: ಜಲಾಶಯದಿಂದ ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:42 IST
Last Updated 20 ಆಗಸ್ಟ್ 2025, 4:42 IST
<div class="paragraphs"><p>ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ 6 ಗೇಟ್‌ಗಳ ಮೂಲಕ ಕಾಳಿನದಿಗೆ ನೀರು ಹರಿಸಲಾಯಿತು.</p></div>

ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ 6 ಗೇಟ್‌ಗಳ ಮೂಲಕ ಕಾಳಿನದಿಗೆ ನೀರು ಹರಿಸಲಾಯಿತು.

   

ಕಾರವಾರ: ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಕಾಳಿನದಿಯ ಜಲಾಶಯಗಳಿಂದ ನದಿಗೆ ನೀರು ಹರಿಸಲಾಗುತ್ತಿದೆ.

ಕರಾವಳಿ ಭಾಗದಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದ್ದರೆ, ಮಲೆನಾಡು ಪ್ರದೇಶದಲ್ಲಿ ಎಡೆಬಿಡದೆ ಮಳೆ ಬೀಳುತ್ತಿದೆ. ಹಿಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗ 18 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ಭರ್ತಿಯಾಗುತ್ತಿದ್ದು ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದೆ.

ಕಾಳಿನದಿಯಲ್ಲಿ ನಿರಂತರವಾಗಿ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಕೊಡಸಳ್ಳಿ ಮತ್ತು ಕದ್ರಾ ಜಲಾಶಯಗಳಿಂದ ತಲಾ 6 ಗೇಟ್‌ಗಳ ಮೂಲಕ ನಿರಂತರವಾಗಿ ನದಿಗೆ ನೀರು ಹರಿಸಲಾಗುತ್ತಿದೆ.

ಕೊಡಸಳ್ಳಿ ಜಲಾಶಯದಿಂದ 42,430 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಕಾಳಿನದಿಯ ಕೊನೆಯ ಜಲಾಶಯವಾಗಿರುವ ಕದ್ರಾದಿಂದ 51,329 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಈ ಜಲಾಶಯದ ಗೇಟ್‌ಗಳ ಮೂಲಕ 30,198 ಕ್ಯೂಸೆಕ್ ಮತ್ತು ವಿದ್ಯುತ್ ಉತ್ಪಾದನೆ ಘಟಕದಿಂದ ಹೆಚ್ಚುವರಿಯಾಗುವ 21,131 ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದೆ. ಜನರು ಸನ್ನದ್ಧ ಸ್ಥಿತಿಯಲ್ಲಿರುವಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದೆ. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದ್ದರೂ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರಿಕೆ ತೆರಳಿದ್ದ ಸಾಂಪ್ರದಾಯಿಕ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದ ಐವರು ಮೀನುಗಾರರನ್ನು ಕಡಲತೀರದಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.