ADVERTISEMENT

ಕರಾವಳಿ ಉತ್ಸವ | ₹6 ಕೋಟಿ ಬಿಡುಗಡೆಗೆ ಸಿಎಂ ಭರವಸೆ: ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 4:51 IST
Last Updated 17 ಡಿಸೆಂಬರ್ 2025, 4:51 IST
ಮಂಕಾಳ ವೈದ್ಯ
ಮಂಕಾಳ ವೈದ್ಯ   

ಕಾರವಾರ: ‘ಟ್ಯಾಗೋರ್ ಕಡಲತೀರದಲ್ಲಿ ಡಿ.22ರಿಂದ 28ರ ವರೆಗೆ ಅದ್ದೂರಿಯಾಗಿ ಕರಾವಳಿ ಉತ್ಸವ ಆಚರಿಸಲು ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

‘ಉತ್ಸವಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ₹1 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹5 ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಉತ್ಸವ ಆಯೋಜನೆಗೆ ಕಡಿಮೆ ಸಮಯವಿದ್ದು, ವಿವಿಧ ಸಮಿತಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು’ ಎಂದು ಮಂಗಳವಾರ ವರ್ಚುವಲ್ ಮೂಲಕ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ‘ಇವೆಂಟ್ ಮ್ಯಾನೇಜ್‌‍ಮೆಂಟ್ ಅವರು ಕಾರ್ಯಕ್ರಮದ ಸಂಗೀತ ಪ್ರದರ್ಶನ ನೀಡಲು ಕಲಾವಿದರ ಪಟ್ಟಿ ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಡಿ.22 ರಂದು ಶಂಕರ ಮಹಾದೇವನ್, 23 ರಂದು ಮೀಕಾ ಸಿಂಗ್, 24 ರಂದು ಸೋನು ನಿಗಮ್, 25 ರಂದು ರಫ್ತಾರ್, 27 ರಂದು ಮಹಮ್ಮದ್ ದಾನೀಶ್, 28 ರಂದು ದಲೇರ್ ಮೆಹಂದಿ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ’ ಎಂದರು.

ADVERTISEMENT

‘ಸ್ಥಳೀಯ ಕಲಾವಿದರಿಗೆ ಪ್ರತಿ ದಿನ ಸಂಜೆ 5.30 ಗಂಟೆಯಿಂದ 7.30ರವರೆಗೆ ಅವಕಾಶ ನೀಡಲಾಗಿದ್ದು, ಸ್ಥಳೀಯ ಕಲಾವಿದರು ಈಗಲೂ ಅರ್ಜಿ ಸಲ್ಲಿಕೆ ಮಾಡುತ್ತಿರುವದರಿಂದ ಅವರಿಗೂ ಅವಕಾಶ ಕಲ್ಪಿಸಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ‘ಡಿ.24 ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, 25 ರಂದು ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆಯು3, 5 ಮತ್ತು 10 ಕಿ.ಮೀ. ವಿಭಾಗದಲ್ಲಿ ನಡೆಯಲಿದೆ. 26 ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು 27 ರಂದು ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.