ADVERTISEMENT

ಕರ್ನಾಟಕ ಕಷ್ಟದಲ್ಲಿದ್ದಾಗ ಬಿಜೆಪಿಯ ತ್ರಿವಿಕ್ರಮರು ಎಲ್ಲಿದ್ದರು?: ಬಿ.ಕೆ‌.ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 6:24 IST
Last Updated 24 ಏಪ್ರಿಲ್ 2023, 6:24 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್    

ಕಾರವಾರ:  ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಎಂಬ ಬಿಜೆಪಿಯ ತ್ರಿವಿಕ್ರಮರು ಕರ್ನಾಟಕ ರಾಜ್ಯ ಕೋವಿಡ್, ನೆರೆ ಹಾವಳಿ ಎದುರಿಸಿದ ಸಮಯದಲ್ಲಿ ಎಲ್ಲಿದ್ದರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

'ರಾಜ್ಯದಲ್ಲಿ ಲಕ್ಷಾಂತರ ಜನರು ಕೋವಿಡ್ ನಿಂದ ಮೃತಪಟ್ಟರೆ, ಸಾವಿರಾರು ಜನರು ನೆರೆ ಹಾವಳಿಗೆ ಬೀದಿ ಪಾಲಾದರು. ಸಂತ್ರಸ್ತರಿಗೆ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ತ್ರಿವಿಕ್ರಮರು ಮಾಡಲಿಲ್ಲ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಜನರ ಮೇಲೆ ನಂಬಿಕೆ ಇಲ್ಲದ ಕಾರಣ ಬಿಜೆಪಿ ನಾಯಕರು ಜಾತಿ, ಧರ್ಮದ ವಿಚಾರ ಮುನ್ನೆಲೆಗೆ ತಂದು ಮತ ಕೇಳಲು ಆರಂಭಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನರು ತತ್ತರಿಸಿದ್ದಾರೆ. ಭ್ರಷ್ಟಾಚಾರದ ಸುಳಿಯೂ ಬಿಜೆಪಿ ಸುತ್ತಿಕೊಂಡಿದೆ' ಎಂದರು.

ADVERTISEMENT

'ಬಿಜೆಪಿಯ ಶ್ರೇಷ್ಠ ನಾಯಕತ್ವ ರಾಜ್ಯಕ್ಕೆ ಬಂದು ಹೇಳಿಕೆ ನೀಡುವುದನ್ನು ನೋಡಿದರೆ ಬಿಜೆಪಿಯ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಪ್ರಧಾನಿ ರಾಜ್ಯಕ್ಕೆ ಬರುವುದು ಒಳ್ಳೆಯದು. ಅವರು ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಈಗಾಲಾದರೂ ಅರಿತುಕೊಂಡು ಅದೇ ಮಾದರಿಯನ್ನು ಆಡಳಿತದಲ್ಲಿ ಅನುಸರಿಸಲಿ' ಎಂದರು.

'ನೆರೆ ಹಾವಳಿಯಿಂದ ₹35 ಸಾವಿರ ಕೋಟಿ ನಷ್ಟವಾಗಿದ್ದರೂ ರಾಜ್ಯಕ್ಕೆ ಕೇಂದ್ರ ಕೇವಲ ₹5 ಸಾವಿರ ಕೋಟಿ ಪರಿಹಾರ ನೀಡಿದೆ. ಇದು ಕರ್ನಾಟಕ ಮೇಲೆ ಬಿಜೆಪಿಗೆ ಇರುವ ಕಾಳಜಿ ತೋರಿಸಿದೆ' ಎಂದು ವ್ಯಂಗ್ಯವಾಡಿದರು.

ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮೊದಲ‌ ಸ್ಥಾನಕ್ಕೆ ಏರಿಸುತ್ತೇವೆ ಎಂದು ಒಂಬತ್ತು ವರ್ಷದಿಂದಲೂ ಚಂದಮಾಮ ಕಥೆ ಹೇಳುತ್ತಿದ್ದಾರೆ. ಈ ಬಾರಿ ರಾಜ್ಯದ ಜನ ತ್ರಿವಿಕ್ರಮರಿಗೆ ಪಾಠ ಕಲಿಸಲಿದ್ದಾರೆ' ಎಂದರು.

'ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿ ಮೋದಿ ಸಮಾವೇಶಕ್ಕೆ ಅವಕಾಶ ಕಲ್ಪಿಸಿದರೆ ದೂರು ಕೊಡಲಾಗುವುದು. ರಕ್ಷಣಾ ಇಲಾಖೆಯನ್ನು ಬಿಜೆಪಿ ಚುನಾವಣೆಗೆ ದುರುಪಯೋಗಪಡಿಸಿಕೊಂಡರೆ ಅದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದರು.

'ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಹಿರಂಗಪಡಿಸಲಿ. ಬಸನಗೌಡ ಪಾಟೀಲ್ ಯತ್ನಾಳ್ ₹2 ಸಾವಿರ ಕೊಟ್ಟವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಈ ಹಿಂದೆ ಹೇಳಿದ್ದರು. ಅಷ್ಟೊಂದು ಹಣ ಕೊಟ್ಟು ಸಿ.ಎಂ.ಆಗುವವರು ಯಾರು ಎಂದು ಬಿಜೆಪಿ ಬಹಿರಂಗಪಡಿಸಲಿ' ಎಂದರು.

'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯ ಹಲವು ಭ್ರಷ್ಟ ನಾಯಕರನ್ನು ಜೈಲಿಗೆ ಕಳಿಸುತ್ತೇವೆ' ಎಂದರು.

ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್, ಪ್ರಮುಖರಾದ ಭಾಸ್ಕರ ಪಟಗಾರ, ಕೆ.ಶಂಭು ಶೆಟ್ಟಿ, ಮಂಜುನಾಥ ನಾಯ್ಕ, ಸಮೀರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.