ADVERTISEMENT

ಅಲ್ಪಸಂಖ್ಯಾತರ ಓಲೈಕೆಗಾಗಿ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಕಾಂಗ್ರೆಸ್: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 31 ಮೇ 2022, 13:35 IST
Last Updated 31 ಮೇ 2022, 13:35 IST
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್   

ಅಂಕೋಲಾ: ‘ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಮಾತನಾಡದಿದ್ದರೆ ಕಾಂಗ್ರಸ್ಸಿಗರಿಗೆ ತಿಂದಿದ್ದು ಜೀರ್ಣಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು.

ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಪರ ಅಂಕೋಲಾದಲ್ಲಿ ಮಂಗಳವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಇವರ ಜಟಾಪಟಿಯಲ್ಲಿ ಕಾಂಗ್ರೆಸ್, ನಾಯಕರಿಲ್ಲದೆ ಮುಳುಗುವ ಹಡಗಿನಂತಾಗಿದೆ. ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಹಾಗಾಗಿ ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅದು ದೇಶದ ಉತ್ತಮ ಸಂಘಟನೆ. ನಾನು, ಯಡಿಯೂರಪ್ಪ, ಪ್ರಧಾನಿ ಮೋದಿ, ರಾಷ್ಟ್ರಪತಿ ಎಲ್ಲರೂ ಆರ್.ಎಸ್.ಎಸ್.ನವರು’ ಎಂದರು.

‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಪ್ರಾರಂಭಕ್ಕೆ ಜಿಲ್ಲೆಯ ಪರಿಸರವಾದಿಗಳೇ ತೊಡಕಾಗಿದ್ದಾರೆ. ಬೇಲೆಕೇರಿ ಬಂದರು ಅಭಿವೃದ್ಧಿಯಾದರೆ ಇಡೀ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕೇವಲ ಹಿಂದುತ್ವದ ಬಗ್ಗೆ ಮಾತಾಡುತ್ತಾರೆ ಎನ್ನುವ ಕಾರಣಕ್ಕೆ ಚಕ್ರವರ್ತಿ ಸೂಲಿಬೆಲೆ ಸಾಹಿತಿ ಅಲ್ಲ ಎಂದು ಭಾವಿಸುವುದು ಸರಿ ಅಲ್ಲ. ಭೈರಪ್ಪ ಅವರ ಸಾಹಿತ್ಯದಲ್ಲಿಯೂ ಹಿಂದುತ್ವದ ಅಂಶಗಳು ಅಡಕವಾಗಿದೆ. ಅವರು ಸಾಹಿತಿ ಅಲ್ಲವೇ’ ಎಂದು ಪಠ್ಯಪುಸ್ತಕ ಪರಿಷ್ಕರಣೆ ಕುರಿತ ಪ್ರಶ್ನೆಗೆ ಶೆಟ್ಟರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.