ADVERTISEMENT

ಶಿಕ್ಷಕರಿಂದ ಇಲಾಖೆಗೆ ಅಸಹಕಾರ ಚಳವಳಿ: ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:30 IST
Last Updated 25 ಅಕ್ಟೋಬರ್ 2021, 14:30 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ಅವರಿಗೆ ಸೋಮವಾರ ಕಾರವಾರದಲ್ಲಿ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ಅವರಿಗೆ ಸೋಮವಾರ ಕಾರವಾರದಲ್ಲಿ ಮನವಿ ಸಲ್ಲಿಸಲಾಯಿತು   

ಕಾರವಾರ: ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಈ ಸಂಬಂಧ ಕಾರವಾರ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ಅವರ ಮೂಲಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೋಮವಾರ ಪತ್ರ ಕಳುಹಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಗಾಂವ್ಕರ್ ಮಾತನಾಡಿ, ‘ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಶಿಕ್ಷಕರಿಗೆ 15, 20 ಮತ್ತು 25 ವರ್ಷಗಳ ವೇತನ ಬಡ್ತಿ ನೀಡುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳು, ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಈ ಬಗ್ಗೆ ಮೂರು ತಿಂಗಳ ಹಿಂದೆಯೇ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಸ್ಪಂದಿಸಲಿಲ್ಲ‌’ ಎಂದು ದೂರಿದರು.

ADVERTISEMENT

‘ಶಿಕ್ಷಕರು ಮಕ್ಕಳ ಜೊತೆಗಿದ್ದು, ಅವರ ಬೋಧನೆಗೆ ತೊಂದರೆ ಮಾಡದೇ ಇಲಾಖೆಯ ಕಾರ್ಯಗಳಲ್ಲಿ ಅಸಹಕಾರ ಚಳವಳಿ ಹಮ್ಮಿಕೊಂಡಿದ್ದೇವೆ. ಅ.4ರಿಂದ ತರಬೇತಿಯನ್ನು ಬಹಿಷ್ಕರಿಸಲಾಗಿದೆ. ಅ.21ರಿಂದ 29ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. 30ರಿಂದ ನ.10ರ ತನಕ ಮಧ್ಯಾಹ್ನದ ಬಿಸಿಯೂಟದ ಮಾಹಿತಿಯನ್ನು ಅಪ್‌ಡೇಟ್ ಮಾಡುವುದಿಲ್ಲ. ನ.11ರಿಂದ 18ರವರೆಗೆ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್.ಎ.ಟಿ.ಎಸ್) ಮಾಹಿತಿ ಅಪ್‌ಲೋಡ್ ಮಾಡುವುದಿಲ್ಲ’ ಎಂದು ವಿವರಿಸಿದರು.

‘ಇಷ್ಟಾಗಿಯೂ ಬೇಡಿಕೆ ಈಡೇರಿಸದಿದ್ದರೆ ರಾಜ್ಯಮಟ್ಟದಲ್ಲಿ ಒಂದು ದಿನ ರ‍್ಯಾಲಿ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಈ ಹಂತದಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರದಂಥ ಹೋರಾಟಗಳಿಗೆ ಸಂಘಟನೆಯಿಂದ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ರತ್ನಾಕರ ನಾಯ್ಕ, ಸಾಧನಾ ಬರ್ಗಿ, ಗೌರವ ಕಾರ್ಯದರ್ಶಿ ಸುಧೀಶ ನಾಯ್ಕ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಆರ್.ಪಿ.ಗೌಡ, ರವೀಂದ್ರ ಕೃಷ್ಣ ಭಟ್ ಸೂರಿ, ಎಂ.ಜಿ.ನಾಯ್ಕ, ಉಲ್ಲಾಸ ನಾಯ್ಕ, ಎಂ.ಎನ್.ನಾಯ್ಕ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.