ADVERTISEMENT

ಗಾಳಿಯ ಅಬ್ಬರ: ಲಂಗರು ಕಡಿದು ದಡಕ್ಕೆ ಬಂದ ದೋಣಿಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 8:57 IST
Last Updated 21 ಸೆಪ್ಟೆಂಬರ್ 2020, 8:57 IST
ದಡದಲ್ಲಿ ಮುಗುಚಿ ಬಿದ್ದಿರುವ ದೋಣಿ
ದಡದಲ್ಲಿ ಮುಗುಚಿ ಬಿದ್ದಿರುವ ದೋಣಿ   

ಕಾರವಾರ: ನಗರದಲ್ಲಿ ಭಾನುವಾರ ತಡರಾತ್ರಿ ಬೀಸಿದ ರಭಸದ ಗಾಳಿಗೆ ಮೀನುಗಾರರು ತತ್ತರಿಸಿ ಹೋಗಿದ್ದಾರೆ. ಉಡುಪಿ ಜಿಲ್ಲೆ ಮಲ್ಪೆಯ 'ಪ್ರಾವಿಡೆನ್ಸ್' ಹೆಸರಿನ ಯಾಂತ್ರೀಕೃತ ದೋಣಿ ಮತ್ತು ಪಾತಿ ದೋಣಿಯೊಂದು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಬಂದಿವೆ.

ಮಲ್ಪೆಯ ದೋಣಿಯು ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಸಮುದ್ರ ಮತ್ತಷ್ಟು ಪ್ರಕ್ಷುಬ್ಧವಾಯಿತು. ಹಾಗಾಗಿ ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನ ಬಳಿ ಲಂಗರು ಹಾಕಲಾಗಿತ್ತು. ಗಾಳಿಯ ರಭಸಕ್ಕೆ ಲಂಗರು ಕಡಿದು ದಡಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಪಾತಿ ದೋಣಿಯು ದಡ ಮೇಲೆ ಬಂದು ಬಿದ್ದಿದ್ದು, ಸ್ವಲ್ಪ ಹಾನಿಯಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಅಲೆಗಳ ಅಬ್ಬರಕ್ಕೆ ಸಿಲುಕಿದ ಮಲ್ಪೆಯ 'ಭ್ರಾಮರಿ' ಹೆಸರಿನ ದೋಣಿಯು ಕಾರವಾರ ಸಮೀಪ ಭಾನುವಾರ ಮುಳುಗಿದೆ. ಮಲ್ಪೆಯ ಜಾಹ್ನವಿ ಕೋಟ್ಯಾನ್ ಎಂಬುವವರಿಗೆ ಈ ದೋಣಿ ಸೇರಿದೆ. ಅದರಲ್ಲಿದ್ದ ಭಟ್ಕಳ ಮತ್ತು ಉಡುಪಿಯ ಏಳು ಮಂದಿ ಮೀನುಗಾರರು ಸಮೀಪದಲ್ಲಿದ್ದ ಮೀನುಗಾರಿಕಾ ದೋಣಿಗಳನ್ನು ಏರಿ ದಡ ಸೇರಿದರು.

ADVERTISEMENT

ಜಿಲ್ಲೆಯ ಕರಾವಳಿಯಲ್ಲಿ ಭಾನುವಾರ ರಾತ್ರಿ ಅಬ್ಬರಿಸಿದ್ದ ಮಳೆ, ಸೋಮವಾರ ಬೆಳಿಗ್ಗೆ ಕೆಲಕಾಲ ಬಿಡುವು ನೀಡಿತ್ತು. ಆದರೆ, ನಂತರ ಆಗಾಗ ಜೋರಾದ ಗಾಳಿಯೊಂದಿಗೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.