ADVERTISEMENT

ಕಾರವಾರ: ನಗರದಲ್ಲಿ ಸಂತೆಯಿಲ್ಲದ ಒಂದು ತಿಂಗಳು!

ನಗರಸಭೆಗೆ ₹ 3 ಲಕ್ಷ ನಷ್ಟ: ಬೆಳೆಗಾರರು, ವರ್ತಕರಿಗೆ ಆದಾಯವಿಲ್ಲದೇ ಸಂಕಷ್ಟ

ಸದಾಶಿವ ಎಂ.ಎಸ್‌.
Published 19 ಏಪ್ರಿಲ್ 2020, 19:30 IST
Last Updated 19 ಏಪ್ರಿಲ್ 2020, 19:30 IST
ಕಾರವಾರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯ ದೃಶ್ಯ (ಸಂಗ್ರಹ ಚಿತ್ರ)
ಕಾರವಾರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯ ದೃಶ್ಯ (ಸಂಗ್ರಹ ಚಿತ್ರ)   

ಕಾರವಾರ:ಪ್ರತಿ ಭಾನುವಾರ ಸಂತೆ ಮಾರುಕಟ್ಟೆಯಾಗಿ ಬದಲಾಗುತ್ತಿದ್ದ ನಗರದ ಮಹಾತ್ಮ ಗಾಂಧಿ ರಸ್ತೆ ಮತ್ತು ಸುತ್ತಮುತ್ತಲಿನ ಬೀದಿಗಳುಒಂದು ತಿಂಗಳಿನಿಂದ ಖಾಲಿಯಾಗಿವೆ. ಲಾಕ್‌ಡೌನ್‌ನಿಂದಾಗಿ ರಸ್ತೆಗಳು ಜೀವಕಳೆ ಕಳೆದುಕೊಂಡಿವೆ. ಜತೆಗೇ ನಗರಸಭೆಯ ಆದಾಯಕ್ಕೆ ಸುಮಾರು ₹ 3 ಲಕ್ಷದಷ್ಟುಕತ್ತರಿಬಿದ್ದಿದೆ.

ನಗರದ ಸಂತೆ ಮಾರುಕಟ್ಟೆಯು ಕಾರವಾರಿಗರ ಮಾತ್ರವಲ್ಲದೇಸುತ್ತಮುತ್ತಲಿನ ಹತ್ತಾರು ಹಳ್ಳಿಗಳು ಹಾಗೂ ನೆರೆಯ ಗೋವಾದ ಜನರ ಊಟದ ರುಚಿ ಹೆಚ್ಚಿಸುತ್ತಿತ್ತು. ನೂರಾರು ವ್ಯಾಪಾರಿಗಳು ತರಕಾರಿ, ಸೊಪ್ಪು, ಹಣ್ಣು, ದಿನಸಿ, ಕೋಳಿ, ಒಣಮೀನು ಮಾರಾಟಮಾಡಿ ಒಂದಷ್ಟು ಆದಾಯ ಗಳಿಸುತ್ತಿದ್ದರು.

ಸುಮಾರು ಎರಡು ಕಿಲೋಮೀಟರ್ ಉದ್ದದ ಮಹಾತ್ಮ ಗಾಂಧಿ ರಸ್ತೆ ಹಾಗೂ ಅದಕ್ಕೆ ಗ್ರೀನ್‌ ಸ್ಟ್ರೀಟ್‌ನಿಂದ ಸೇರಿಕೊಳ್ಳುವ ಎಲ್ಲ ರಸ್ತೆಗಳಲ್ಲೂಜನರು ರಾತ್ರಿ 8ರವರೆಗೂ ಕಿಕ್ಕಿರಿದು ತುಂಬಿದ್ದು, ತಮಗೆ ಬೇಕಾದ್ದನ್ನು ಖರೀದಿಸುತ್ತಿದ್ದರು.

ADVERTISEMENT

ಸ್ಥಳೀಯ ವ್ಯಾಪಾರಿಗಳ ಜೊತೆಗೇ ಅಂಕೋಲಾ, ಗೋಕರ್ಣ, ಹಾವೇರಿ, ಬೆಳಗಾವಿ, ಹಾನಗಲ್, ಖಾನಾಪುರ ಭಾಗದ ವರ್ತಕರೂ ಇಲ್ಲಿ ವಹಿವಾಟು ನಡೆಸುತ್ತಿದ್ದರು. ಇದರಿಂದ ತರಕಾರಿ ಬೆಳೆದ ರೈತರಿಗೂ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಯಾಗುತ್ತಿತ್ತು.ಆದರೆ, ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜನರ ಸಂಚಾರ ನಿರ್ಬಂಧಿಸಿದ ಕಾರಣ, ಮಾ.22ರ ಬಳಿಕ ಸಂತೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಯಿತು.

‘ವಾರದ ಸಂತೆ ಹಾಗೂ ಬೀದಿಬದಿ ವ್ಯಾಪಾರಕ್ಕೆ ಅವಕಾಶವಿಲ್ಲದ ಕಾರಣ ಕಾರವಾರ ನಗರಸಭೆಗೆ ಒಂದು ತಿಂಗಳಿಗೆ ಸುಮಾರು ₹ 3 ಲಕ್ಷ ಆದಾಯ ಕಡಿತವಾಗಿದೆ. ಆದರೆ, ಈ ನಷ್ಟವನ್ನು ಅನುಭವಿಸುವುದು ಅನಿವಾರ್ಯ ಕೂಡ ಹೌದು’ಎನ್ನುತ್ತಾರೆ ನಗರಸಭೆಯಎಂಜಿನಿಯರ್ ಆರ್.ಪಿ.ನಾಯಕ.

‘ಸಂತೆಯಲ್ಲಿ ವ್ಯಾಪಾರ ಮಾಡುವವರಿಂದಸ್ಥಳವನ್ನು ಆಧರಿಸಿ ದಿನಕ್ಕೆ ₹ 25ರಿಂದ ₹ 100ವರೆಗೆ ಬಾಡಿಗೆ ಪಡೆಯಲಾಗುತ್ತದೆ. ಅದರಿಂದ ನಗರಸಭೆಗೆ ಪ್ರತಿ ವಾರ ಸುಮಾರು ₹ 50 ಸಾವಿರ ಆದಾಯ ಬರುತ್ತಿತ್ತು. ಇದೇರೀತಿ, ಬೀದಿಬದಿ ವ್ಯಾಪಾರಿಗಳಿಗೂ ಅವರ ತಳ್ಳುಗಾಡಿ ಅಥವಾ ವ್ಯಾಪಾರದ ಸ್ಥಳವನ್ನು ಆಧಾರವಾಗಿಟ್ಟುಕೊಂಡು ದಿನಕ್ಕೆ ₹ 30 ಮತ್ತು ₹ 50 ಬಾಡಿಗೆ ವಸೂಲಿ ಮಾಡಲಾಗುತ್ತದೆ. ಅದು ಪ್ರತಿದಿನ ₹ 6 ಸಾವಿರದಿಂದ ₹ 7 ಸಾವಿರ ಸಂಗ್ರಹವಾಗುತ್ತಿತ್ತು. ಆದರೆ, ಈಗತಿಂಗಳಿಗೆ ಸುಮಾರು ₹ 30 ಸಾವಿರ ನಷ್ಟವಾಗಿದೆ’ ಎಂದು ಅವರುಅಂಕಿ ಅಂಶ ಮುಂದಿಡುತ್ತಾರೆ.

‘ದರ ಪರಿಷ್ಕರಣೆಗೆ ತೀರ್ಮಾನ’:‘ಭಾನುವಾರದ ಸಂತೆಯ ಸ್ಥಳವನ್ನುಎರಡು ವರ್ಷಗಳಿಂದ ಹರಾಜು ಮಾಡಿರಲಿಲ್ಲ. ಕೊರೊನಾ ಹಾವಳಿ ಮುಗಿದ ಬಳಿಕ ಹರಾಜು ಮಾಡಿ, ಪರಿಷ್ಕೃತ ದರ ಜಾರಿ ಮಾಡಲಾಗುತ್ತದೆ’ ಎಂದು ಆರ್.ಪಿ.ನಾಯಕ ತಿಳಿಸಿದ್ದಾರೆ.

‘ಸಂತೆ ನಡೆಯುವ ಪ್ರದೇಶದಿಂದ ಪ್ರತಿವಾರನಾಲ್ಕೈದು ಟ್ರಕ್ ಲೋಡ್ ಕಸ ಸಂಗ್ರಹವಾಗುತ್ತದೆ.ಅದನ್ನು ಸ್ವಚ್ಛಗೊಳಿಸಲು ನಾಲ್ಕು ವಾಹನಗಳು, ಇಬ್ಬರು ಸೂಪರ್‌ವೈಸರ್‌ಗಳು, 10 ಮಂದಿ ಕಾರ್ಮಿಕರು ಬೇಕು. ಈ ವೆಚ್ಚವುಪ್ರಸ್ತುತ ಇರುವ ಬಾಡಿಗೆಯಿಂದ ಹೊಂದಿಕೆಯಾಗುತ್ತಿಲ್ಲ. ಹಾಗಾಗಿದರ ಪರಿಷ್ಕರಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಕಾರವಾರ ಸಂತೆ: ಅಂಕಿ ಅಂಶ

650:ಸಂತೆಯಲ್ಲಿ ವ್ಯಾಪಾರಿಗಳು

287:ಬೀದಿಬದಿವ್ಯಾಪಾರಿಗಳು

₹ 25ರಿಂದ ₹ 100:ಸಂತೆಗೆ ನೆಲ ಬಾಡಿಗೆ

₹ 30 ಮತ್ತು ₹ 50:ಬೀದಿಬದಿ ವ್ಯಾಪಾರಕ್ಕೆ ದಿನ ಬಾಡಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.