ADVERTISEMENT

ಕಾರವಾರ: ದೀಪಾವಳಿ ಸಾಮಗ್ರಿ ಖರೀದಿಗೆ ಮಳೆ ಅಡ್ಡಿ

ದೀಪಾವಳಿ ವಸ್ತುಗಳ ಮಾರಾಟ: ನಿರೀಕ್ಷಿತ ಮಟ್ಟದಲ್ಲಿ ನಡೆಯದ ವಹಿವಾಟು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:11 IST
Last Updated 20 ಅಕ್ಟೋಬರ್ 2025, 6:11 IST
ಕಾರವಾರದ ಮಾರುಕಟ್ಟೆಯಲ್ಲಿ ಗ್ರಾಹಕರು ಆಕಾಶ ಬುಟ್ಟಿ ಖರೀದಿಯಲ್ಲಿ ತೊಡಗಿದ್ದರು
ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ಕಾರವಾರದ ಮಾರುಕಟ್ಟೆಯಲ್ಲಿ ಗ್ರಾಹಕರು ಆಕಾಶ ಬುಟ್ಟಿ ಖರೀದಿಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್   

ಕಾರವಾರ: ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಭಾನುವಾರ ಜೋರಾಗಿತ್ತು. ಆದರೆ, ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ವಹಿವಾಟು ಕುಸಿತ ಕಂಡಿದೆ ಎಂಬ ಅಳಲು ವ್ಯಾಪಾರಿಗಳದ್ದಾಗಿತ್ತು.

ಮಧ್ಯಾಹ್ನದವರೆಗೂ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡುಬರಲಿಲ್ಲ. ಸಂಜೆಯಾಗುತ್ತಿದ್ದಂತೆ ವ್ಯಾಪಾರ ಚಿಗಿತುಕೊಳ್ಳಬಹುದು ಎಂಬ ವ್ಯಾಪಾರಿಗಳ ನಿರೀಕ್ಷೆಗೆ ಮಳೆ ತಣ್ಣೀರು ಎರಚಿತು. ಗುಡುಗು ಸಹಿತ ಮಳೆ ಬಿದ್ದ ಪರಿಣಾಮ ಮಾರುಕಟ್ಟೆಯತ್ತ ಮುಖ ಮಾಡಿದವರ ಸಂಖ್ಯೆ ಕಡಿಮೆ ಇತ್ತು.

ಹಬ್ಬಕ್ಕೆ ಬೇಕಿರುವ ಹಿಂಡಲಕಾಯಿ, ಭತ್ತದ ತೆನೆ, ಸೌತೆಕಾಯಿ, ಮೊಗೆಕಾಯಿ ಖರೀದಿ ಜೋರಾಗಿತ್ತು. ಹೂವು–ಹಣ್ಣುಗಳ ದರ ಸ್ಥಿರವಾಗಿದ್ದರೂ ಖರೀದಿ ಅಷ್ಟಕ್ಕಷ್ಟೇ ಎಂಬಂತಿತ್ತು. ಸಿಹಿತಿನಿಸುಗಳ ವ್ಯಾಪಾರ ಮಾತ್ರ ಚೆನ್ನಾಗಿ ನಡೆಯಿತು. ಕಾಯಂ ಅಂಗಡಿಗಳ ಹೊರತಾಗಿ ಪ್ರಮುಖ ವೃತ್ತಗಳಲ್ಲಿ, ಅಂಗಡಿಗಳ ಎದುರು ಪೆಂಡಾಲ್ ಹಾಕಿ ಸಿಹಿತಿನಿಸು, ಡ್ರೈಫ್ರುಟ್ಸ್‌ಗಳನ್ನು ಮಾರಾಟ ಮಾಡಲಾಯಿತು.

ADVERTISEMENT

ಮಣ್ಣಿನ ಹಣತೆಗಳ ಮಾರಾಟಗಾರರ ಸಂಖ್ಯೆ ಈ ಬಾರಿ ಹೆಚ್ಚಿರುವುದು ಕಂಡುಬಂತು. ಈಚಿನ ವರ್ಷಗಳಲ್ಲಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಅವುಗಳನ್ನು ತಯಾರಿಸುವವರ ಸಂಖ್ಯೆ ಇಳಿಕೆಯಾಗುತ್ತಿದೆ. ಹಬ್ಬದ ವೇಳೆ ಬೇಡಿಕೆಗೆ ತಕ್ಕಷ್ಟು ಪೂರೈಕೆಗೆ ಕೊರತೆ ಉಂಟಾಗುತ್ತಿಲ್ಲ ಎಂದು ಹಣತೆ ವ್ಯಾಪಾರಿ ಮಹಾದೇವ ಮಿರಾಶಿ ಹೇಳಿದರು.

ಸವಿತಾ ವೃತ್ತ, ಶಿವಾಜಿ ವೃತ್ತ ಸೇರಿ ವಿವಿಧೆಡೆ ಮಣ್ಣಿನ ಹಣತೆ, ಲಾಟೀನು ಮಾದರಿಯ ಹಣತೆಗಳ ಮಾರಾಟ ಜೋರಾಗಿತ್ತು. ಡಜನ್‌ಗೆ ₹60 ರಿಂದ ಆರಂಭಿಸಿ ₹1,200 ದರದವರೆಗಿನ ಮಣ್ಣಿನ ಕಲಾಕೃತಿಗಳ ಹಣತೆಗಳ ಮಾರಾಟ ನಡೆದವು.

ವೈವಿಧ್ಯಮಯ ಆಕಾಶ ಬುಟ್ಟಿಗಳ ಮಾರಾಟವೂ ನಡೆದಿತ್ತು. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಧವಿಧದ ಆಕಾಶ ಬುಟ್ಟಿಗಳ ಖರೀದಿಯಲ್ಲಿ ಜನರು ತೊಡಗಿದ್ದರು. ₹150 ರಿಂದ ಆರಂಭಿಸಿ, ₹1,500 ದರದವರೆಗಿನ ಆಕಾಶ ಬುಟ್ಟಿಗಳು ಲಭ್ಯವಿದ್ದವು.

‘ಆನ್‌ಲೈನ್ ಖರೀದಿ ಹೆಚ್ಚಿರುವುದು ಅಂಗಡಿಕಾರರ ಜೀವನೋಪಾಯಕ್ಕೆ ಅಡ್ಡಿಯಾಗಿದೆ. ಈ ಮೊದಲು ಹಬ್ಬ ಬಂತೆಂದರೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಾಣಿಸುತ್ತಿತ್ತು. ದೀಪಾವಳಿಗೆ ನಿರೀಕ್ಷಿತ ವಹಿವಾಟು ನಡೆದಿಲ್ಲ’ ಎಂದು ವ್ಯಾಪಾರಿ ಶ್ರೀಕಾಂತ ನಾಯ್ಕ ಹೇಳಿದರು.

ದೀಪಾವಳಿ ಹಬ್ಬಕ್ಕೆ ಹಿಂಡಲಕಾಯಿ ಭತ್ತದ ತೆನೆಗಳ ಮಾರಾಟದಲ್ಲಿ ಮಹಿಳೆಯರು ತೊಡಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.