
ಕಾರವಾರ: ಕೈಗಾದ ಅಣು ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಕೈಗಾ ಹೋರಾಟಗಾರರ ವೇದಿಕೆ ಶನಿವಾರದಿಂದ ಪಾದಯಾತ್ರೆ ಆರಂಭಿಸಿದೆ.
ನಗರದ ಸುಭಾಷ್ ವೃತ್ತದಿಂದ ಆರಂಭಗೊಂಡಿರುವ ಪಾದಯಾತ್ರೆಯು ಸೋಮವಾರ ಕೈಗಾಕ್ಕೆ ತಲುಪಲಿದೆ. ಮೊದಲ ದಿನ ನಗರದಿಂದ 12 ಕಿ.ಮೀ ದೂರದ ಗೋಪಶಿಟ್ಟಾ ಗ್ರಾಮಕ್ಕೆ ಹೋರಾಟಗಾರರು ಪಾದಯಾತ್ರೆ ನಡೆಸುತ್ತ ಸಾಗಿದರು.
ಸುಭಾಷ್ ವೃತ್ತದಲ್ಲಿನ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಗೆ ಗೌರವ ಅರ್ಪಿಸಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಹೋರಾಟಗಾರರ ವೇದಿಕೆ ಅಧ್ಯಕ್ಷ ರಾಘು ನಾಯ್ಕ, ‘ಹಲವು ವರ್ಷಗಳಿಂದ ಅಣು ವಿದ್ಯುತ್ ನಿಗಮದಿಂದ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಲ್ಲಿನ ನೆಲ, ಜಲ ಬಳಸಿಕೊಂಡು ಉದ್ಯೋಗ, ಸೌಲಭ್ಯಗಳನ್ನು ಹೊರರಾಜ್ಯದವರಿಗೆ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಇಲ್ಲಿನ ಯುವಕರು ಉದ್ಯೋಗಕ್ಕೆ ಅನ್ಯ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಬೃಹತ್ ರಾಷ್ಟ್ರೀಯ ಯೋಜನೆ ಇದ್ದರೂ ಉದ್ಯೋಗ ಕಲ್ಪಿಸದ ಕಾರಣಕ್ಕೆ ಹೋರಾಟ ಕೈಗೆತ್ತಿಕೊಂಡಿದ್ದೇವೆ’ ಎಂದರು.
ಜನಾರ್ಧನ ಗಾಂವಕರ ಮಾತನಾಡಿ, ‘ರಾಜ್ಯದ ಗಡಿಭಾಗವಾಗಿರುವ ಕಾರವಾರದಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸ ಸರ್ಕಾರಗಳಿಂದ ನಡೆಯುತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದ ಪೀಳಿಗೆಗೆ ವಂಚಿಸಿದಂತಾಗುತ್ತದೆ’ ಎಂದರು.
ಸುವರ್ಣಾ ಮಾಜಾಳಿಕರ, ಎಚ್.ಎಫ್.ದೊಡ್ಡಣ್ಣನವರ, ಶಬ್ಬೀರ ಶೇಖ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.