ADVERTISEMENT

ಕಾರವಾರ | ಕಾಂಡ್ಲಾ ನಡಿಗೆ ಪಥ ನಿರ್ವಹಣೆಗಿಲ್ಲ ಅನುದಾನ

ನಿರ್ಮಾಣಗೊಂಡ 6 ವರ್ಷದಲ್ಲೇ ಮೂಲೆಗುಂಪು: ನಿರ್ಲಕ್ಷಕ್ಕೆ ಪ್ರವಾಸಿಗರ ಬೇಸರ

ಗಣಪತಿ ಹೆಗಡೆ
Published 5 ಫೆಬ್ರುವರಿ 2026, 6:15 IST
Last Updated 5 ಫೆಬ್ರುವರಿ 2026, 6:15 IST
ಕಾರವಾರದ ಕಾಳಿ ದ್ವೀಪದಲ್ಲಿ ಕಾಂಡ್ಲಾ ನಡಿಗೆಗೆ ಮರದ ಹಲಗೆಗಳನ್ನು ಜೋಡಿಸಿ ನಿರ್ಮಿಸಿದ ಸೇತುವೆ.
ಕಾರವಾರದ ಕಾಳಿ ದ್ವೀಪದಲ್ಲಿ ಕಾಂಡ್ಲಾ ನಡಿಗೆಗೆ ಮರದ ಹಲಗೆಗಳನ್ನು ಜೋಡಿಸಿ ನಿರ್ಮಿಸಿದ ಸೇತುವೆ.   

ಕಾರವಾರ: ನದಿ ಸಮುದ್ರ ಸೇರುವೆ ಅಳಿವೆ ಪ್ರದೇಶದಲ್ಲಿ ಹಬ್ಬಿಕೊಳ್ಳುವ ಕಾಂಡ್ಲಾ ವನ ನೋಡಲು ಸೊಬಗು. ಈ ವನದ ನಡುವೆ ನಿರ್ಮಿಸಿದ ಕಿರು ಸೇತುವೆಯ ಮೇಲೆ ಸಾಗುವುದೇ ಚೆಂದ. ಇಂತಹ ಅಪರೂಪದ ಅನುಭವ ಪಡೆಯಲು ನಗರದಲ್ಲಿ ಅವಕಾಶ ಇದ್ದರೂ ಅರಣ್ಯ ಇಲಾಖೆ ಕೈಚೆಲ್ಲಿದೆ.

ರಾಜ್ಯದಲ್ಲಿ ಹೊನ್ನಾವರ ಹೊರತುಪಡಿಸಿದರೆ ಎರಡನೇ ಕಾಂಡ್ಲಾ ನಡಿಗೆ ಪಥ (ಮ್ಯಾಂಗ್ರೋವ್ ಬೋರ್ಡ್ ವಾಕ್) ಇಲ್ಲಿನ ಕಾಳಿ ದ್ವೀಪದಲ್ಲಿ ಇತ್ತು. ಆದರೆ, ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಈ ಸೌಲಭ್ಯ ಪ್ರವಾಸಿಗರಿಂದ ದೂರವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಸುಮಾರು ₹20 ಲಕ್ಷ ವೆಚ್ಚದಲ್ಲಿ ದ್ವೀಪದಲ್ಲಿ 2020ರಲ್ಲಿ ಕಾಂಡ್ಲಾ ಗಿಡಗಳ ನಡುವೆ 240 ಮೀಟರ್ ಉದ್ದಕ್ಕೆ ಮರದ ಹಲಗೆಗಳನ್ನು ಜೋಡಿಸಿ ನಿರ್ಮಿಸಿದ ಸೇತುವೆ ಐದೇ ವರ್ಷಕ್ಕೆ ಹಾಳಾಗಿದೆ. ಕಾಂಡ್ಲಾ ವನದ ಸೊಬಗನ್ನು ಈ ನಡಿಗೆ ಪಥದ ಮೂಲಕ ಪಡೆದಿದ್ದ ಪ್ರವಾಸಿಗರು ಮರುಬಾರಿ ವೀಕ್ಷಣೆಗೆ ಬರುವಷ್ಟರಲ್ಲಿ ಮುರಿದ ಹಲಗೆಗಳು, ಮುಚ್ಚಿದ ನಡಿಗೆ ಪಥದ ಬಾಗಿಲಷ್ಟೇ ನೋಡಲು ಸಿಕ್ಕಿದೆ.

ADVERTISEMENT

‘ಕಾಳಿಮಾತಾ ದೇವಾಲಯಕ್ಕೆ ಭೇಟಿ ನೀಡಿದ್ದಾಗ ಪಕ್ಕದಲ್ಲೇ ರೂಪುಗೊಂಡ ಆಕರ್ಷಣೀಯ ಸೌಲಭ್ಯ ಕಂಡು ಖುಷಿಪಟ್ಟಿದ್ದೆವು. ಸ್ನೇಹಿತರ ಗುಂಪು ಕಾಂಡ್ಲಾ ನಡಿಗೆಯ ಮೂಲಕ ಇಲ್ಲಿನ ಪ್ರಾಕೃತಿಕ ಸೊಬಗನ್ನು ಸವಿದ ಹೊಸ ಅನುಭವ ಪಡೆದಿದ್ದೆವು. ಕೆಲ ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದಾಗ ನಿರ್ಲಕ್ಷಕ್ಕೆ ಗುರಿಯಾದ ಕಾಂಡ್ಲಾ ನಡಿಗೆ ಪಥ ಕಂಡು ಬೇಸರವಾಯಿತು’ ಎಂದು ಕೋಡಿಬಾಗದ ರೂಪಾ ವಾರಕರ ಹೇಳಿದರು.

‘ಸಿಮೆಂಟ್ ಕಂಬಗಳನ್ನು ಅಳವಡಿಸಿ, ಮರದ ಹಲಗೆ ಜೋಡಿಸಿ ನಿರ್ಮಿಸಿದ ಸೇತುವೆ ಮಳೆಗಾಳಿಗೆ ಪ್ರತಿವರ್ಷ ಹಾನಿಗೆ ಒಳಗಾಗುತ್ತದೆ. ಸರಿಯಾಗಿ ನಿರ್ವಹಿಸಲು ಲಕ್ಷಾಂತರ ಮೊತ್ತ ವೆಚ್ಚವಾಗುತ್ತದೆ. ಆದರೆ, ಎರಡು ವರ್ಷದಿಂದ ನಿರ್ವಹಣೆಗೆ ಅನುದಾನ ಸಿಕ್ಕಿಲ್ಲ. ಇದರಿಂದ ಕಾಂಡ್ಲಾ ನಡಿಗೆ ಪ್ರವಾಸಿಗರಿಗೆ ಮುಕ್ತಗೊಳಿಸಲು ಕಷ್ಟವಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಕಾಂಡ್ಲಾ ನಡಿಗೆ ಪಥ ಕಳೆದ ವರ್ಷ ಅಲ್ಪಸ್ವಲ್ಪ ನಿರ್ವಹಣೆ ಮಾಡಲಾಗಿತ್ತು. ಆದರೆ ಸಂಪೂರ್ಣ ಸರಿಪಡಿಸಲು ಹೆಚ್ಚು ಅನುದಾನದ ಅಗತ್ಯವಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು
ಕಿರಣ್ ಮನವಾಚಾರಿ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ

ಕಡವಾಡದಲ್ಲಿ ಕಾಂಡ್ಲಾ ನಡಿಗೆ! ‘ಕಾಳಿ ದ್ವೀಪದಲ್ಲಿ ನಿರ್ಮಿಸಿದ ಕಾಂಡ್ಲಾ ನಡಿಗೆ ಪಥಕ್ಕೆ ಸಾಗಲು ದೋಣಿಗಳ ಅಗತ್ಯವಿದೆ. ಇದರಿಂದ ಪ್ರವಾಸಿಗರು ಸಾಗಲು ಸಮಸ್ಯೆ ಉಂಟಾಗಿತ್ತು. ಕಡವಾಡ ಗ್ರಾಮದಲ್ಲಿ ಕಡವಾಡ–ಸುಂಕೇರಿ ಸೇತುವೆ ಪಕ್ಕದಲ್ಲಿ ದಟ್ಟ ಕಾಂಡ್ಲಾ ವನಗಳಿದ್ದು ಅಲ್ಲಿ ಕಾಂಡ್ಲಾ ನಡಿಗೆ ಪಥ ನಿರ್ಮಿಸಲು ಸ್ಥಳೀಯರ ಒತ್ತಾಯವಿದೆ. ಕೆಲ ತಿಂಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಇಲ್ಲಿ ಕಾಂಡ್ಲಾ ನಡಿಗೆ ಪಥ ಆರಂಭಿಸಿದರೆ ಪ್ರವಾಸಿಗರನ್ನು ಸೆಳೆಯಲು ಹೆಚ್ಚು ಅನುಕೂಲ ಆಗಬಹುದು. ಹೀಗಾಗಿ ಹೊಸ ಪ್ರಸ್ತಾವ ಇಲಾಖೆಗೆ ಸಲ್ಲಿಸಲಾಗುತ್ತಿದೆ’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.