ADVERTISEMENT

ಕಾರವಾರ | ಅತಿ ಭಾರದ ವಾಹನ ತಡೆದು ಪ್ರತಿಭಟನೆ

ಸಂಚಾರದಿಂದ ರಸ್ತೆ ಹಾಳು: ಮಲ್ಲಾಪುರದ ಹಿಂದೂವಾಡಾ ಭಾಗದ ಜನತೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:54 IST
Last Updated 26 ನವೆಂಬರ್ 2025, 4:54 IST
ಕೈಗಾ ಅಣು ಸ್ಥಾವರ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಮಲ್ಲಾಪುರದ ಹಿಂದೂವಾಡಾದಲ್ಲಿ ಗ್ರಾಮಸ್ಥರು ತಡೆದು ನಿಲ್ಲಿಸಿರುವುದು
ಕೈಗಾ ಅಣು ಸ್ಥಾವರ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಮಲ್ಲಾಪುರದ ಹಿಂದೂವಾಡಾದಲ್ಲಿ ಗ್ರಾಮಸ್ಥರು ತಡೆದು ನಿಲ್ಲಿಸಿರುವುದು   

ಕಾರವಾರ: ಅತಿಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ಮಲ್ಲಾಪುರದ ಹಿಂದೂವಾಡಾ ಭಾಗದ ಜನರು ಮಂಗಳವಾರ ಕೈಗಾ ಅಣುಸ್ಥಾವರ ನಿರ್ಮಾಣ ಕಾರ್ಯಕ್ಕೆ ಸಾಮಗ್ರಿ ಪೂರೈಸುವ ವಾಹನಗಳನ್ನು ತಡೆಹಿಡಿದು, ಪ್ರತಿಭಟಿಸಿದರು.

ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣ ಕಾಮಗಾರಿ ಸಲುವಾಗಿ ಜಲ್ಲಿ, ಇತರ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 15ಕ್ಕೂ ಹೆಚ್ಚು ವಾಹನಗಳನ್ನು ಗ್ರಾಮಸ್ಥರು ತಡೆದಿದ್ದರಿಂದ ನಾಲ್ಕು ತಾಸಿಗೂ ಹೆಚ್ಚು ಕಾಲ ನಿಲ್ಲಿಸಲಾಗಿತ್ತು.

‘ನಿಗದಿತ ಮಿತಿಗಿಂತ ಹೆಚ್ಚು ಭಾರ ಹೊತ್ತು ವಾಹನಗಳು ಸಂಚರಿಸುತ್ತಿವೆ. ಉತ್ತಮ ಸ್ಥಿತಿಯಲ್ಲಿ ಇಲ್ಲದ ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಇಂತಹ ವಾಹನಗಳ ನಿರಂತರ ಓಡಾಟದಿಂದ ರಸ್ತೆ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ವಾಹನ ಸಂಚಾರಕ್ಕೆ ಯೋಗ್ಯವಲ್ಲದಂತಾಗುತ್ತಿದೆ. ಭಾರಿ ವಾಹನಗಳ ಓಡಾಟದಿಂದ ಇತರ ವಾಹನ ಸವಾರರು ಆತಂಕದಲ್ಲಿ ಸಂಚರಿಸುತ್ತಿದ್ದಾರೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ, ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಬಾಂದೇಕರ ಆರೋಪಿಸಿದರು.

ADVERTISEMENT

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಹನಗಳ ಭಾರದ ಮಿತಿ ತಪಾಸಣೆ ನಡೆಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಪ್ರತಿಭಟನೆಯ ಒತ್ತಡಕ್ಕೆ ಮಣಿದು ಸಾರಿಗೆ ಇಲಾಖೆಯ ಬ್ರೇಕ್ ಇನ್‌ಸ್ಪೆಕ್ಟರ್ ರವಿ ಬಿಸ್ರಳ್ಳಿ ಸ್ಥಳಕ್ಕೆ ತೆರಳಿದರು.

ವಾಹನಗಳು ನಿಗದಿತ ಮಿತಿಗಿಂತ ಹೆಚ್ಚು ಭಾರ ಹೊತ್ತು ಸಾಗದಂತೆ ಇನ್ನುಮೇಲೆ ನಿಗಾ ವಹಿಸಲಾಗುವುದು’ ಎಂದು ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಕೈಗಾ ಅಣುಸ್ಥಾವರ ನಿರ್ಮಾಣಕ್ಕೆ ಸಾಮಗ್ರಿ ಪೂರೈಸುವ ವಾಹನಗಳು 15ಕ್ಕೂ ಹೆಚ್ಚು ವಾಹನಗಳಿಗೆ ನಾಲ್ಕು ತಾಸು ತಡೆ ಸ್ಥಳಕ್ಕೆ ಸಾರಿಗೆ ಅಧಿಕಾರಿಗಳ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.