
ಕಾರವಾರ: ಇಲ್ಲಿನ ವಾಣಿಜ್ಯ ಬಂದರಿಗೆ ಸರಕು ಹೊತ್ತು ತರುವ ಹಡಗುಗಳ ಪ್ರಮಾಣ ಇಳಿಕೆಯಾಗುತ್ತಿರುವುದು ಒಂದೆಡೆಯಾದರೆ, ರಾತ್ರಿ ವೇಳೆ ಹಡಗು ಸಂಚಾರಕ್ಕೆ (ನೈಟ್ ನ್ಯಾವಿಗೇಶನ್) ಅನುಮತಿ ಸಿಕ್ಕು ಹಲವು ವರ್ಷ ಕಳೆದರೂ ಈವರೆಗೆ ಚಟುವಟಿಕೆ ಆರಂಭಗೊಂಡಿಲ್ಲ.
ವಾರ್ಷಿಕ 30 ಲಕ್ಷ ಟನ್ ಸರಕು ವಹಿವಾಟು ಸಾಮರ್ಥ್ಯ ಹೊಂದಿರುವ ಬಂದರು ವ್ಯಾಪ್ತಿಯಲ್ಲಿ ಆಮದು, ರಫ್ತು ಚಟುವಟಿಕೆಗೆ ವಾರ್ಷಿಕವಾಗಿ ಸರಾಸರಿ 120 ರಿಂದ 140 ಹಡಗುಗಳು ಸಂಚರಿಸುತ್ತವೆ. ಆದರೆ, ಮೂರು ವರ್ಷಗಳ ಹಿಂದೆ ಮೂರು ಹಡಗುಗಳು ಮಾತ್ರ ರಾತ್ರಿ ವೇಳೆ ಬಂದರಿಗೆ ಬಂದಿದ್ದವು. ಅದನ್ನು ಹೊರತುಪಡಿಸಿದರೆ ಈ ಚಟುವಟಿಕೆ ಸ್ತಬ್ಧಗೊಂಡಿದೆ.
‘ವಾಣಿಜ್ಯ ಬಂದರಿನಲ್ಲಿ ನೈಟ್ ನ್ಯಾವಿಗೇಶನ್ ಚಟುವಟಿಕೆ ಕೈಗೊಳ್ಳಲು ಅನುಮತಿ ಪಡೆದುಕೊಂಡ ಬಂದರು ಜಲಸಾರಿಗೆ ಮಂಡಳಿಯು ಲಕ್ಷಾಂತರ ಮೊತ್ತ ವ್ಯಯಿಸಿ ರಾತ್ರಿ ವೇಳೆ ಬೆಳಕು ಸೂಸಬಲ್ಲ ಬೋಯ್, ಬಂದರಿನಲ್ಲಿ ಬೆಳಕಿನ ವ್ಯವಸ್ಥೆ ಕೈಗೊಂಡಿದೆ. ಆದರೆ, ಅದಕ್ಕೆ ತಕ್ಕಂತೆ ನೈಟ್ ನ್ಯಾವಿಗೇಶನ್ ಚಟುವಟಿಕೆ ಮಾತ್ರ ಕೈಗೊಳ್ಳಲಾಗುತ್ತಿಲ್ಲ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.
‘ಇರಾಕ್, ಇರಾನ್ ಸೇರಿದಂತೆ ವಿದೇಶಗಳಿಂದ ಬಂದರಿನತ್ತ ಧಾವಿಸುವ ಹಡಗುಗಳು ರಾತ್ರಿಯಾದರೆ ದೇವಗಡ ದ್ವೀಪದ ಬಳಿಯೇ ಲಂಗರು ಹಾಕುತ್ತವೆ. ಬೆಳಕು ಹರಿಯುತ್ತಿದ್ದಂತೆ ಅಲ್ಲಿಂದ ವಾಣಿಜ್ಯ ಬಂದರಿನತ್ತ ಬರುತ್ತವೆ. ಹಡಗು ಸಂಚಾರದ ಮಾರ್ಗ ಹೆಚ್ಚು ಆಳವಿಲ್ಲದ ಕಾರಣ ನೀಡಿ ನಾವಿಕರು ಹಡಗನ್ನು ರಾತ್ರಿ ವೇಳೆ ಬಂದರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ’ ಎಂದೂ ಹೇಳಿದರು.
‘ಹೇಳಲಷ್ಟೆ ಬಂದರಿನಲ್ಲಿ ನೈಟ್ ನ್ಯಾವಿಗೇಶನ್ ಸೌಲಭ್ಯವಿದೆ. ಆದರೆ, ಸಂಜೆಯ ಬಳಿಕ ಹಡಗು ತರಲು ಅಧಿಕಾರಿಗಳು ಒಪ್ಪುವುದಿಲ್ಲ. ಇಲ್ಲಿ ಸೌಲಭ್ಯದ ಕೊರತೆ ಇದೆ ಎಂಬ ನೆಪವೊಡ್ಡಿ ಹಡಗಿನ ಕ್ಯಾಪ್ಟನ್‌ಗಳು ಬರಲು ಒಪ್ಪುವುದಿಲ್ಲ’ ಎಂದು ರಫ್ತುದಾರ ಉದ್ಯಮಿಯೊಬ್ಬರು ಹೇಳಿದರು.
ರಫ್ತು–ಆಮದು ಇಳಿಮುಖ ‘
ವಾಣಿಜ್ಯ ಬಂದರಿನಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಮೊಲಾಸಿಸ್‌ಗೆ ಹೆಚ್ಚು ಸುಂಕ ವಿಧಿಸಿದ ಪರಿಣಾಮ ರಫ್ತು ಚಟುವಟಿಕೆ ಕುಸಿತಗೊಂಡಿದೆ. ಬಿಟುಮಿನ್ (ಡಾಂಬರು) ಬೇಡಿಕೆಯೂ ಕಡಿಮೆಯಾಗಿದ್ದರಿಂದ ಅರಬ್ ರಾಷ್ಟ್ರಗಳಿಂದ ಅವುಗಳ ಆಮದು ಪ್ರಮಾಣದಲ್ಲೂ ಗಣನೀಯ ಕಡಿಮೆಯಾಗಿದೆ. ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಬೆರಳೆಣಿಕೆಯಷ್ಟು ಹಡಗುಗಳು ಬಂದರಿಗೆ ಬಂದಿವೆ’ ಎನ್ನುತ್ತಾರೆ ಬಂದರು ಬಳಕೆದಾರ ಉದ್ಯಮಿಯೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.