ADVERTISEMENT

ಕಾರವಾರ: ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಕೆರವಡಿ, ಮಲ್ಲಾಪುರ ಭಾಗಕ್ಕೆ ಸಮಯಕ್ಕೆ ಸರಿಯಾಗಿ ಸಂಚರಿಸದ ಬಸ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:59 IST
Last Updated 2 ಸೆಪ್ಟೆಂಬರ್ 2025, 2:59 IST
<div class="paragraphs"><p>ಸಕಾಲಕ್ಕೆ ಬಸ್ ಬಿಡದ ಹಿನ್ನೆಲೆಯಲ್ಲಿ ಕಾರವಾರ ಬಸ್ ನಿಲ್ದಾಣದಿಂದ ಮುಡಗೇರಿಗೆ ಸಂಚರಿಸುವ ಬಸ್ ಎದುರು ನಿಂತು ಕೆರವಡಿ, ಮಲ್ಲಾಪುರ ಭಾಗದ ವಿದ್ಯಾರ್ಥಿಗಳು, ಸಹ ಪ್ರಯಾಣಿಕರು ಪ್ರತಿಭಟಿಸಿದರು</p></div>

ಸಕಾಲಕ್ಕೆ ಬಸ್ ಬಿಡದ ಹಿನ್ನೆಲೆಯಲ್ಲಿ ಕಾರವಾರ ಬಸ್ ನಿಲ್ದಾಣದಿಂದ ಮುಡಗೇರಿಗೆ ಸಂಚರಿಸುವ ಬಸ್ ಎದುರು ನಿಂತು ಕೆರವಡಿ, ಮಲ್ಲಾಪುರ ಭಾಗದ ವಿದ್ಯಾರ್ಥಿಗಳು, ಸಹ ಪ್ರಯಾಣಿಕರು ಪ್ರತಿಭಟಿಸಿದರು

   

ಕಾರವಾರ: ಇಲ್ಲಿನ ಬಸ್ ನಿಲ್ದಾಣದಿಂದ ಕೆರವಡಿ, ಮಲ್ಲಾಪುರ ಭಾಗಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಿಡದ ಕಾರಣಕ್ಕೆ ಸೋಮವಾರ ಸಂಜೆ ಹಲವು ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ಕೆರವಡಿ ಮಾರ್ಗವಾಗಿ ಮಲ್ಲಾಪುರಕ್ಕೆ ಸಂಚರಿಸಬೇಕಿದ್ದ ಬಸ್‌ಗಳನ್ನು ಬಿಡದ ಹಿನ್ನೆಲೆಯಲ್ಲಿ ಮೂರು ತಾಸುಗಳ ಕಾಲ ಕಾದು ನಿಂತಿದ್ದೇವೆ ಎಂದು ಆರೋಪಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದಕ್ಕೆ ಅದೇ ಮಾರ್ಗದಲ್ಲಿ ಸಾಗಬೇಕಿದ್ದ ಇತರ ಪ್ರಯಾಣಿಕರು ಸಾಥ್ ನೀಡಿದರು.

ADVERTISEMENT

‘ಮಧ್ಯಾಹ್ನ 3 ಗಂಟೆಯಿಂದ ಬಸ್‌ಗಾಗಿ ಕಾದು ನಿಂತರೂ ಕೆರವಡಿ, ಮಲ್ಲಾಪುರ ಮಾರ್ಗಕ್ಕೆ ಬಸ್ ಬಿಟ್ಟಿಲ್ಲ. ಸಂಜೆ 5.15ಕ್ಕೆ ಬಿಡುವ ಬಸ್ ಕೂಡ ವಿಳಂಬವಾಗಿದೆ. ಮಧ್ಯಾಹ್ನವೇ ತರಗತಿ ಮುಗಿಸಿ ಬಂದರೆ ಸಂಜೆಯಾದರೂ ಮನೆ ತಲುಪಲು ಸಾಧ್ಯವಾಗದಿದ್ದರೆ ಪಾಲಕರು ಆತಂಕಕ್ಕೆ ಒಳಗಾಗುತ್ತಾರೆ. ಹಲವು ಬಾರಿ ಇಂತಹ ಸಮಸ್ಯೆ ಎದುರಿಸಿದ್ದೇವೆ’ ಎಂದು ವಿದ್ಯಾರ್ಥಿಗಳು ದೂರಿದರು.

‘ನಗೆಕೋವೆ, ಶಿರ್ವೆ ಸೇರಿದಂತೆ ದೂರದ ಗ್ರಾಮಗಳಿಗೆ ಸಾಗುವ ವಿದ್ಯಾರ್ಥಿಗಳು ತಂಗುದಾಣದಿಂದ ಐದಾರು ಕಿ.ಮೀ ದೂರದ ವರೆಗೆ ಕಾಲ್ನಡಿಗೆಯಲ್ಲಿ ಸಾಗಬೇಕು. ಬಸ್ ಸಕಾಲಕ್ಕೆ ಬಿಡದಿದ್ದರೆ ಅವರು ಮನೆ ತಲುಪಲು ರಾತ್ರಿಯಾಗಬಹುದು. ಯುವತಿಯರ ಸುರಕ್ಷತೆ ದೃಷ್ಟಿಯಿಂದಲಾದರೂ ಸಕಾಲಕ್ಕೆ ಬಸ್ ಬಿಡಲು ಒತ್ತಾಯಿಸುತ್ತಿದ್ದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ’ ಎಂದು ಪ್ರಯಾಣಿಕರು ದೂರಿದರು.

ಬಸ್‌ ಬಿಡದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜನರು ಮುಡಗೇರಿ, ಕಡವಾಡ ಗ್ರಾಮಗಳಿಗೆ ಸಂಚರಿಸುತ್ತಿದ್ದ ಬಸ್‌ಗಳನ್ನು ಕೆಲ ನಿಮಿಷ ಅಡ್ಡಗಟ್ಟಿ ಪ್ರತಿಭಟಿಸಿದರು.

‘ಮಧ್ಯಾಹ್ನ ಮಲ್ಲಾಪುರ ಭಾಗಕ್ಕೆ ಸಂಚರಿಸಬೇಕಿದ್ದ ಒಂದು ಬಸ್‌ ಮಾತ್ರ ಕಾರಣಾಂತರದಿಂದ ರದ್ದುಗೊಂಡಿತ್ತು. 5.15ಕ್ಕೆ ಸಂಚರಿಸಬೇಕಿದ್ದ ಬಸ್ 5.25ಕ್ಕೆ ಬಿಡಲಾಗಿದೆ’ ಎಂದು ಕಾರವಾರ ಸಾರಿಗೆ ಘಟಕದ ವ್ಯವಸ್ಥಾಪಕಿ ಸೌಮ್ಯಾ ನಾಯಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.