ADVERTISEMENT

ಕಾರವಾರ: ತರಕಾರಿ ಮಾರುಕಟ್ಟೆಗೆ ತಾತ್ಕಾಲಿಕ ನೆಲೆ

ಬೀದಿಬದಿಯಲ್ಲಿದ್ದ ಅಂಗಡಿಕಾರರ ಸ್ಥಳಾಂತರ: ಗೊಂದಲಕ್ಕೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:06 IST
Last Updated 21 ಸೆಪ್ಟೆಂಬರ್ 2025, 4:06 IST
ಕಾರವಾರದ ಈಜುಕೊಳದ ಹಿಂಭಾಗದಲ್ಲಿನ ಮಾರುಕಟ್ಟೆಯಲ್ಲಿ ತರಕಾರಿ ವಹಿವಾಟಿಗೆ ವ್ಯವಸ್ಥೆ ಕಲ್ಪಿಸಿರುವುದು
ಕಾರವಾರದ ಈಜುಕೊಳದ ಹಿಂಭಾಗದಲ್ಲಿನ ಮಾರುಕಟ್ಟೆಯಲ್ಲಿ ತರಕಾರಿ ವಹಿವಾಟಿಗೆ ವ್ಯವಸ್ಥೆ ಕಲ್ಪಿಸಿರುವುದು   

ಕಾರವಾರ: ನಗರದ ಎಂ.ಜಿ.ರಸ್ತೆಯಲ್ಲಿನ ಈಜುಕೊಳದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಹೂವು ಹಣ್ಣಿನ ಮಾರುಕಟ್ಟೆಗೆ ತರಕಾರಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿದೆ. ವ್ಯಾಪಾರಿಗಳ ನಡುವೆ ಜಾಗದ ವಿಚಾರವಾಗಿ ಏರ್ಪಟ್ಟ ಗೊಂದಲವನ್ನು ನಗರಸಭೆ ಅಧಿಕಾರಿಗಳು ಶನಿವಾರ ಬಗೆಹರಿಸಿದ್ದಾರೆ.

ಸುಮಾರು ನಾಲ್ಕು ವರ್ಷದ ಹಿಂದೆ ಈಜುಕೊಳದ ಹಿಂಭಾಗದಲ್ಲಿ ತರಕಾರಿ, ಹೂವು ಮತ್ತು ಹಣ್ಣು ಮಾರಾಟಗಾರರಿಗೆ ನಿರ್ಮಾಣಗೊಂಡ ಕಟ್ಟಡವು ಬಳಕೆಯಾಗದೆ ಸಾಮಗ್ರಿಗಳ ದಾಸ್ತಾನು ಕೇಂದ್ರವಾಗಿತ್ತು. ಸದ್ಯ ಈ ಕಟ್ಟಡದಲ್ಲಿಯೇ ತರಕಾರಿ ವ್ಯಾಪಾರಿಗಳಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದೇ ಕಟ್ಟಡದ ಎದುರಿನ ರಸ್ತೆಯ ಬದಿಗಳಲ್ಲಿ 10 ತಿಂಗಳಿಂದ ವ್ಯಾಪಾರ ನಡೆಸುತ್ತಿದ್ದ 15ಕ್ಕೂ ಹೆಚ್ಚು ತರಕಾರಿ ವ್ಯಾಪಾರಿಗಳಿಗೆ ಕಟ್ಟಡದಲ್ಲಿ ಅವಕಾಶ ನೀಡಲಾಯಿತು. ಮಳಿಗೆಗೆ ಮೀಸಲಿಟ್ಟ ಜಾಗದ ವಿಚಾರವಾಗಿ ವ್ಯಾಪಾರಿಗಳ ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ಪೌರಾಯುಕ್ತ ಜಗದೀಶ ಹುಲಗೆಜ್ಜಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು.

ADVERTISEMENT

‘ಪೊಲೀಸ್ ಠಾಣೆಯ ಬಳಿ ಇದ್ದ ತರಕಾರಿ ಕಟ್ಟಡ ಮರುನಿರ್ಮಾಣಕ್ಕೆ ಇನ್ನಷ್ಟು ಸಮಯಾವಕಾಶ ತಗುಲಬಹುದು. ಅಲ್ಲಿಯವರೆಗೆ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಇದೇ ಕಟ್ಟಡದಲ್ಲಿ ಅವಕಾಶ ನೀಡಲಡಾಗಿದೆ. ವ್ಯಾಪಾರಿಗಳು ಈಗಾಗಲೆ ಕಾಯ್ದಿಟ್ಟುಕೊಂಡ ಜಾಗದಲ್ಲೇ ವಹಿವಾಟು ನಡೆಸಬೇಕು. ಬೀದಿಬದಿಯಲ್ಲಿ ವಹಿವಾಟು ನಡೆಸಬಾರದು’ ಎಂದು ಪೌರಾಯುಕ್ತ ಜಗದೀಶ ಹುಲಗೆಜ್ಜಿ ಸೂಚಿಸಿದರು.

‘ಕಟ್ಟಡದಲ್ಲಿ ಈಜುಕೊಳದಿಂದ ಮಲೀನ ನೀರು ಹರಿದು ಬರುತ್ತಿದೆ. ಶುಚಿತ್ವ ಕಾಯ್ದುಕೊಂಡಿಲ್ಲ. ಶೌಚಾಲಯ ವ್ಯವಸ್ಥೆ ಸರಿಪಡಿಸಿಕೊಡಬೇಕು’ ಎಂದು ವ್ಯಾಪಾರಿಗಳು ದೂರು ಸಲ್ಲಿಸಿದರು.

ಹಂತಹಂತವಾಗಿ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನಗರಸಭೆ ಅಧಿಕಾರಿಗಳು ನೀಡಿದರು. ಕಂದಾಯ ಅಧಿಕಾರಿ ರವಿ ನಾಯ್ಕ, ಆರೋಗ್ಯ ನಿರೀಕ್ಷಕ ಯಾಕೂಬ್ ಶೇಖ್, ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಜೀಜ್ ಶೇಖ್, ವರ್ತಕರಾದ ಸಂಗಮೆಶ ಕಲ್ಯಾಣಿ, ಇತರರು ಇದ್ದರು.

ಬೀದಿಬದಿಯಲ್ಲಿದ್ದ ತರಕಾರಿ ವ್ಯಾಪಾರಸ್ಥರಿಗೆ ವ್ಯವಸ್ಥಿತ ಜಾಗದಲ್ಲಿ ಸೌಲಭ್ಯ ಮಾಡಿಕೊಡಲಾಗಿದೆ. ಗೂಡಂಗಡಿಕಾರರಿಗೂ ರಸ್ತೆಬದಿಯಲ್ಲಿ ಒತ್ತುವರಿ ಮಾಡದಂತೆ ಸೂಚನೆ ಕೊಡಲಾಗುತ್ತಿದೆ
ಜಗದೀಶ ಹುಲಗೆಜ್ಜಿ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.