ADVERTISEMENT

ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ಮತಹಕ್ಕಿಗೆ ನೂರಾರು ಸಂಘಗಳು ಅನರ್ಹ?

ರಾಜೇಂದ್ರ ಹೆಗಡೆ
Published 23 ಆಗಸ್ಟ್ 2025, 4:17 IST
Last Updated 23 ಆಗಸ್ಟ್ 2025, 4:17 IST
ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಕಚೇರಿ 
ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಕಚೇರಿ    

ಶಿರಸಿ: ಇಲ್ಲಿನ ಕೆನರಾ ಡಿಸ್ಟ್ರಿಕ್ಟ್‌ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್‍ಗೆ ನಡೆಯಲಿರುವ ಚುನಾವಣೆಯ ಮತದಾರರ ಪಟ್ಟಿ ಅಂತಿಮಗೊಳ್ಳುತ್ತಿದೆ. 100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ತಮ್ಮ ಮತದಾನದ ಹಕ್ಕಿನಿಂದ ವಂಚಿತವಾಗುವ ಸಾಧ್ಯತೆ ಇದೆ.

ಅಕ್ಟೋಬರ್ ತಿಂಗಳ ಕೊನೆಯಲ್ಲಿ ನಿಗದಿಯಾಗಿರುವ ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ಸಿದ್ಧತೆ ನಡೆದಿದೆ. ಒಟ್ಟೂ ನಿರ್ದೇಶಕ 16 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಪ್ರಾಥಮಿಕ ಕೃಷಿ ಪತ್ತಿನ ಸಂಘ (ಪ್ಯಾಕ್ಸ್) ಹಾಗೂ 5 ವಿವಿಧ ವಲಯಗಳ ನಿರ್ದೇಶಕ ಸ್ಥಾನಕ್ಕೆ ಮತದಾನ ನಡೆಯಲಿದೆ.

ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ, ಮತ ಹಕ್ಕು ಚಲಾವಣೆ ಮಾಡುವವರ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ADVERTISEMENT

‘ಒಟ್ಟೂ 763 ಷೇರು ಸದಸ್ಯ ಸಂಸ್ಥೆಗಳು (ಮತದಾನದ ಹಕ್ಕು ಇರುವ ಸಂಘಗಳು) ಬ್ಯಾಂಕ್ ಅಡಿ ಬರುತ್ತವೆ. ಇವುಗಳ ಲೆಕ್ಕಾಚಾರ ಮಾಡಿಯೇ ಅಭ್ಯರ್ಥಿಗಳು ಗೆಲುವು, ಸೋಲಿನ ಪರಾಮರ್ಶೆ ಮಾಡುತ್ತಾರೆ. ಪ್ರಸ್ತುತ 763 ಮತಗಳಲ್ಲಿ 114 ಮತಗಳು ಅನರ್ಹತೆಗೊಳ್ಳುವ ಸಾಧ್ಯತೆ ಇದೆ’ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮತದಾನದ ಹಕ್ಕು ಉಳಿಸಿಕೊಳ್ಳಲು ಕೆಲವು ಸಂಘಗಳು ಈಗ ಸಾಲ ಮರುಪಾವತಿಯ ಮಾತನಾಡುತ್ತಿವೆ. ಕೆಲವರು ಕೋರ್ಟ್ ಮೆಟ್ಟಿಲೇರಿ ಮತದಾನದ ಹಕ್ಕು ಪಡೆಯಲು ಸಹ ತಯಾರಿ ನಡೆಸಿದ್ದಾರೆ. ಆದರೂ, ನೂರಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಮತದಾನದ ಹಕ್ಕಿಂದ ದೂರ ಉಳಿಯಬಹುದು’ ಎಂದು ಮೂಲಗಳು ತಿಳಿಸಿವೆ.

‘ಬ್ಯಾಂಕ್‍ನ ಹಾಲಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹಾಗೂ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನಡುವೆ ಪ್ರಸ್ತುತ ಚುನಾವಣೆಯಲ್ಲಿ ನೇರ ಹಣಾಹಣಿಯಿದೆ. ಎರಡೂ ತಂಡದವರು ತಮ್ಮ ಸ್ಥಾನ ಭದ್ರಗೊಳಿಸಿಕೊಳ್ಳಲು ತಮಗೆ ಮತ ಹಾಕುವವರಿಗೆ ಮತ ಚಲಾವಣೆ ಹಕ್ಕು (ಡೆಲಿಗೇಶನ್) ಕೊಡಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.‌ ಇದು ಸಂಘ ಸಂಸ್ಥೆಗಳಲ್ಲಿ ಈವರೆಗೆ ಇರದಿದ್ದ ಬಣ ಸೃಷ್ಟಿಯಾಗಲು ಕಾರಣವಾಗುತ್ತಿದೆ’ ಎಂದು ಸಹಕಾರ ಸಂಘದ ಪ್ರಮುಖರೊಬ್ಬರು ಹೇಳಿದರು.

ಮತ ಹಕ್ಕು ಚಲಾವಣೆ ಮಾಡುವವರ ಹೆಸರನ್ನು ಅಂತಿಮಗೊಳಿಸಲು ಆಯಾ ಶೇರುದಾರ ಸಂಘಗಳಿಗೆ ಪತ್ರ ಬರೆಯಲಾಗಿದ್ದು ಶೇ 90 ರಷ್ಟು ಹೆಸರು ಅಂತಿಮವಾಗಿದೆ
ಹೆಸರು ಹೇಳಲಿಚ್ಛಿಸದ ಬ್ಯಾಂಕ್ ಅಧಿಕಾರಿ

ಮತದಾನದಿಂದ ಯಾರು ಅನರ್ಹ?

‘ಮೊದಲ ಹಂತದಲ್ಲಿ ಕೆಡಿಸಿಸಿ ಬ್ಯಾಂಕ್‍ನ ಎರಡು ವಾರ್ಷಿಕ ಸರ್ವ ಸಾಧಾರಣ ಸಭೆಗೆ ಗೈರಾದ ಹಾಗೂ ಬ್ಯಾಂಕ್‍ನಿಂದ ಕನಿಷ್ಠ ಸೇವೆ ಪಡೆಯದವರನ್ನು ಮತದಾನದ ಹಕ್ಕಿನಿಂದ ಹೊರಗಿಡಲಾಗಿದೆ. ನಂತರದಲ್ಲಿ ಸಮಾಪನೆಯಾದ ಆಡಳಿತಾಧಿಕಾರಿ ನೇಮಕಗೊಂಡ ಹಾಗೂ ಸಾಲ ಮರುಪಾವತಿ ಮಾಡದ ಸಂಘಗಳನ್ನು ಮತದಾನದಿಂದ ದೂರ ಇಡಲಾಗುತ್ತಿದೆ’ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.